
ಆಳಂದ: ಸೌರವಿದ್ಯುತ್ ಉತ್ಪಾದನೆಗೆ ಜಮೀನು ನೀಡಿದ ರೈತರ ಹಿತವನ್ನು ಕಡೆಗಣಿಸಿ ಖಾಸಗಿ ಕಂಪನಿಗಳು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ರೈತರಿಗೆ ನ್ಯಾಯಸಮ್ಮತ ಪರಿಹಾರ, ಪಾರದರ್ಶಕ ಲೀಸ್ ಒಪ್ಪಂದ ಹಾಗೂ ಸಮಾನ ಬಾಡಿಗೆ ವ್ಯವಸ್ಥೆ ಕಲ್ಪಿಸದೆ ಕಾಮಗಾರಿ ಮುಂದುವರಿಸಿದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಮಾಜಿ ಶಾಸಕ ಸುಭಾಷ್ ಗುತ್ತೇದಾರ ಸರ್ಕಾರ ಮತ್ತು ಕಂಪನಿಗಳಿಗೆ ಎಚ್ಚರಿಕೆ ನೀಡಿದರು.
ತಾಲೂಕಿನ ಜಿಡಗಾ ಹಾಗೂ ಜಮಗಾ (ಬಿ) ವ್ಯಾಪ್ತಿಯ ಮಾದನಹಿಪ್ಪರಗಾ ರಸ್ತೆಯ ಬದಿಯ ಜಮೀನುಗಳಲ್ಲಿ ಸ್ಥಾಪಿಸಲಾಗಿರುವ ಸೌರವಿದ್ಯುತ್ ಘಟಕದ ಎದುರು ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ಆರಂಭಿಸಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸೌರವಿದ್ಯುತ್ ಯೋಜನೆಗಳ ಹೆಸರಿನಲ್ಲಿ ರೈತರ ಜಮೀನುಗಳನ್ನು ೩೦ ವರ್ಷಗಳ ಅವಧಿಗೆ ಗುತ್ತಿಗೆಗೆ ಪಡೆಯಲಾಗುತ್ತಿದೆ. ಆದರೆ, ರೈತರಿಗೆ ನೀಡಲಾಗುತ್ತಿರುವ ಬಾಡಿಗೆ ಮೊತ್ತದಲ್ಲಿ ಪಾರದರ್ಶಕತೆ ಇಲ್ಲ, ಕೆಲವರಿಗೆ ಒಂದೊAದು ರೀತಿಯ ಬಾಡಿಗೆ ನಿಗದಿಪಡಿಸಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಭೂಮಿಯ ಮಾಲೀಕತ್ವ ಹಾಗೂ ಕುಟುಂಬಸ್ಥರ ಕಾನೂನುಬದ್ಧ ಹಕ್ಕುಗಳನ್ನು ಪರಿಗಣಿಸದೆ ಕೆಲವೆಡೆ ಹೈಪವರ್ ವಿದ್ಯುತ್ ಕಂಬಗಳನ್ನು ಅಳವಡಿಸುವ ಕಾಮಗಾರಿ ನಡೆಯುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ ಎಂದು ಗುತ್ತೇದಾರ ಆರೋಪಿಸಿದರು.
ರೈತರ ಜಮೀನಿನಲ್ಲಿ ಯೋಜನೆ ಸ್ಥಾಪಿಸುವ ಮುನ್ನ ರೈತರ ಒಪ್ಪಿಗೆ ಮತ್ತು ಕಾನೂನುಬದ್ಧ ಅನುಮತಿಗಳನ್ನು ಪಡೆಯಬೇಕಲ್ಲವೇ? ಲೀಸ್ ಒಪ್ಪಂದದ ಷರತ್ತುಗಳನ್ನು ಸ್ಪಷ್ಟಪಡಿಸಬೇಕಲ್ಲವೇ? ಬಾಡಿಗೆ ಪಾವತಿಯಲ್ಲಿ ಸಮಾನತೆ ಮತ್ತು ಪಾರದರ್ಶಕತೆ ಇರಬೇಕಲ್ಲವೇ? ಎಂಬ ಪ್ರಶ್ನೆಗಳನ್ನು ಸರ್ಕಾರ ಮತ್ತು ಸಂಬAಧಿಸಿದ ಕಂಪನಿಗಳ ಮುಂದಿಟ್ಟ ಅವರು, ಅಧಿಕಾರಿಗಳು ರೈತರ ಅಹವಾಲುಗಳಿಗೆ ಕಿವಿಗೊಡದೆ ಮೌನ ವಹಿಸಿದರೆ ಅದನ್ನು ಆಡಳಿತದ ವೈಫಲ್ಯವೆಂದೇ ಪರಿಗಣಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಆಳಂದ ತಹಸೀಲ್ದಾರರಿಗೆ ಈಗಾಗಲೇ ಲಿಖಿತ ದೂರು ಸಲ್ಲಿಸಿರುವ ಗುತ್ತೇದಾರರು, ಹೈಪವರ್ ವಿದ್ಯುತ್ ಕಂಬಗಳ ಸ್ಥಾಪನೆಗೂ ಮುನ್ನ ಭೂಮಾಲೀಕರು ಹಾಗೂ ಅವರ ಕುಟುಂಬಸ್ಥರ ಕಾನೂನುಬದ್ಧ ಹಕ್ಕುಗಳನ್ನು ಪರಿಗಣಿಸಿ ಅಗತ್ಯ ಅನುಮತಿ ಪಡೆಯಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಜಮೀನು ನೀಡಿರುವ ರೈತರಿಗೆ ೩೦ ವರ್ಷಗಳ ಲೀಸ್ ಅವಧಿಗೆ ನ್ಯಾಯಸಮ್ಮತ ಹಾಗೂ ಪಾರದರ್ಶಕ ಬಾಡಿಗೆ ಪಾವತಿಸಬೇಕು. ರೈತರಿಂದ ಬಾಡಿಗೆ ವಸೂಲಿಸುವ ಅಥವಾ ಪಾವತಿಸುವ ವ್ಯವಸ್ಥೆಯಲ್ಲಿ ಯಾವುದೇ ತಾರತಮ್ಯವಿದ್ದರೆ ಅದನ್ನು ನಿವಾರಿಸಿ ಎಲ್ಲರಿಗೂ ಸಮಾನ ನೀತಿ ಜಾರಿಗೊಳಿಸಬೇಕು. ಸೌರವಿದ್ಯುತ್ ಘಟಕ ಸ್ಥಾಪನೆಗೂ ಮುನ್ನ ಅಗತ್ಯ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್ಒಸಿ), ಕಾನೂನುಬದ್ಧ ಅನುಮತಿಗಳು, ಲೀಸ್ ಒಪ್ಪಂದದ ವಿವರ, ಬಾಡಿಗೆ ಪಾವತಿ ವಿಧಾನ ಹಾಗೂ ಯೋಜನೆಯಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಕುರಿತು ಸ್ಪಷ್ಟ ಲಿಖಿತ ಭರವಸೆ ನೀಡಬೇಕು ಎಂದು ಆಗ್ರಹಿಸಿದರು.
ರೈತರ ಜಮೀನು ಬೇಕು; ಆದರೆ ರೈತರ ಹಕ್ಕು ಬೇಡವೇ? ಎಂದು ಪ್ರಶ್ನಿಸಿದ ಗುತ್ತೇದಾರರು, ಹಿಂದೆಯೂ ಕಂಪನಿಗಳಿAದ ನಿಯಮಾನುಸಾರ ಬಾಡಿಗೆ ಪಾವತಿಯಾಗಿಲ್ಲ ಎಂಬ ಆರೋಪಗಳಿವೆ. ಈ ಬಗ್ಗೆ ರೈತರಿಗೆ ಸ್ಪಷ್ಟ ಖಾತರಿ ದೊರೆಯದಿರುವುದು ಹಲವು ಕುಟುಂಬಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಸರ್ಕಾರ ಮತ್ತು ಕಂಪನಿಗಳು ರೈತರ ಬೇಡಿಕೆಗಳನ್ನು ನಿರ್ಲಕ್ಷಿಸದೆ ತಕ್ಷಣ ಮಾತುಕತೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ನ್ಯಾಯ ಸಿಗುವವರೆಗೆ ಧರಣಿ: ರೈತರ ಎಲ್ಲ ಬೇಡಿಕೆಗಳು ಈಡೇರುವವರೆಗೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ರೈತರ ಜಮೀನು ಪಡೆದು ವಿದ್ಯುತ್ ಉತ್ಪಾದಿಸುವ ಕಂಪನಿಗಳು ರೈತರ ಹಕ್ಕು ಮತ್ತು ಬದುಕಿನ ಭದ್ರತೆಯನ್ನೂ ಖಾತರಿಪಡಿಸಬೇಕು. ಸರ್ಕಾರ ಕಂಪನಿಗಳ ಪರ ನಿಲ್ಲದೆ ರೈತರ ಪರ ನಿಲ್ಲಬೇಕು ಎಂದು ಗುತ್ತೇದಾರ ಆಗ್ರಹಿಸಿದರು.
ಸೆ.೧೦ರಿಂದ ಆರಂಭಿಸಿರುವ ಧರಣಿ ಬೇಡಿಕೆಗಳು ಈಡೇರುವವರೆಗೆ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಯುವ ಹೋರಾಟಗಾರ ಸಿದ್ದು ಹಿರೋಳಿ, ಬಂಜಾರಾ ಕ್ರಾಂತಿದಳ ರಾಜ್ಯಾಧ್ಯಕ್ಷ ರಾಜು ಜೆ. ಚವ್ಹಾಣ, ತಾಪಂ ಮಾಜಿ ಅಧ್ಯಕ್ಷ ಶಿವಪ್ಪ ಕೊಳಶೆಟ್ಟಿ, ಮಾಜಿ ಉಪಾಧ್ಯಕ್ಷ ಪ್ರಭು ಸರಸಂಬಿ, ಮಾಜಿ ಸದಸ್ಯ ಬಸವರಾಜ ಸಾಣಕ, ಅಡವಯ್ಯ ಸ್ವಾಮಿ, ಬಸವರಾಜ ಶಾಸ್ತಿçÃ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಣಮಂತ ಕಾಬಡೆ, ಸೀತಾರಾಮ ಜಮಾದಾರ ಅನೇಕರು ಮಾತನಾಡಿದರು.
ಮುಖಂಡ ಪ್ರಭು ಎಲ್ದೆ, ನಾಗೇಂದ್ರ ಪಾಟೀಲ ಸರಸಂಬಾ, ಸಿದ್ಧು ತೋಳನೂರ, ಶರಣು ಜಿಡ್ಡಿಮನಿ, ಸಿದ್ಧರೂಢ ಸಮತಾ ಜೀವನ್, ಮುಖಂಡ ಮಲ್ಲಣ್ಣಾ ನಾಗೂರೆ, ಶ್ರೀಶೈಲ ಪಾಟೀಲ ಕೆರೂರ, ಸಿದ್ಧು ಬಿರಾದಾರ ಚಲಗೇರಾ, ನಾಗರಾಜ ಪಾಟೀಲ ಮೋಘಾ ಸೇರಿದಂತೆ ಮಾದನಹಿಪ್ಪರಗಾ ಹಾಗೂ ಹಿರೋಳಿ ವ್ಯಾಪ್ತಿಯ ರೈತರು ಮತ್ತು ಮುಖಂಡರು ಧರಣಿಯಲ್ಲಿ ಪಾಲ್ಗೊಂಡಿದ್ದರು.























