ಚೌಡಾಪೂರ ಗ್ರಾಮ ಪಂಚಾಯತ್ ಸರ್ವತೋಮುಖ ಅಭಿವೃದ್ಧಿ: ತಾ.ಪಂ. ಇ ಓ. ವೀರಣ್ಣ ಕೌಲಗಿ

ಚೌಡಾಪೂರ:ಗ್ರಾಮ ಪಂಚಾಯತಿಯ ತೆರಿಗೆ ಹಾಗೂ ಗುಣಮಟ್ಟ ಸುಧಾರಿಸಲು ಮತ್ತು ಗ್ರಾಮ ಪಂಚಾಯತಿಯ ಒಟ್ಟಾರೆ ಅಭಿವೃದ್ಧಿಗೆ ಸದಾ ಬದ್ದರಿದ್ದೇವೆ ಎಂದು ಅಫಜಲಪೂರ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ಕೌಲಗಿ ಹೇಳಿದರು.
ಚೌಡಾಪೂರ ಗ್ರಾಮ ಪಂಚಾಯತ್‍ನಲ್ಲಿ ಹಮ್ಮಿಕೊಂಡಿದ್ದ 2025-26 ನೇಯ ಸಾಲಿನ ತೆರಿಗೆ ವಸೂಲಾತಿ ಕ್ರಿಯಾಯೋಜನೆಯ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚೌಡಾಪೂರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ವಾರ್ಡ್ ಹಾಗೂ ಕಂದಾಯ ಗ್ರಾಮ ಮತ್ತು ಗ್ರಾಮ ಪಂಚಾಯತ್ ಕೇಂದ್ರ ಬಿಂದುವಾದ ಚೌಡಾಪೂರ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪಡಿಸಲಾಗುವುದು ಎಂದರು.
ಗ್ರಾಮ ಸಭೆ ಉದ್ಧೆಶಿಸಿ ಮಾತನಾಡಿದ ಗ್ರಾಮದ ಯುವ ಮುಖಂಡರಾದ ಲಕ್ಷ್ಮಣ್ ಡಿ ಕೆ ಅವರು,ಸಂಬಂಧಪಟ್ಟ ಇಲಾಖೆಯ ಹಿರಿಯ ಹಾಗೂ ಕಿರಿಯ ಅಧಿಕಾರಿಗಳ ಮತ್ತು ಗ್ರಾಮದ ಮುಖಂಡರುಗಳ ಹಾಗೂ ವಿವಿಧ ಸಂಘಟನೆಗಳ ಸದಸ್ಯರುಗಳ ನಿರಂತರ ಒತ್ತಡದಿಂದಾಗಿ ಕೆಪಿಆರ್ ಸಕ್ಕರೆ ಕಾರ್ಖಾನೆಯಿಂದ 82 ಲಕ್ಷ ತೆರಿಗೆ ಹಣ ನಮ್ಮ ಗ್ರಾಮ ಪಂಚಾಯತಗೆ ಸಂದಾಯವಾಗಿದೆ. ಪಂಚಾಯತ್‍ಗೆ ಸಂದಾಯವಾದ ಈ ತೆರಿಗೆ ಹಣವನ್ನು ಗ್ರಾಮ ಪಂಚಾಯತಿಯ ಸರ್ವತೋಮುಖ ಅಭಿವೃದ್ಧಿಗೆ ಬಳಸಬೇಕು ಎಂದು ಮನವಿ ಮಾಡಿದರು.
ಗ್ರಾಮದ ಹಿರಿಯ ಮುಖಂಡರಾದ ಸಾಯಬಣ್ಣ ಜಮಾದಾರ ಅವರು ಮಾತನಾಡಿ, ಚೌಡಾಪೂರ ಗ್ರಾಮ ಪಂಚಾಯತಿಯು ಮೂಲಭೂತ ಸೌಲಭ್ಯ ಹಾಗೂ ಸೌಕರ್ಯಗಳಿಂದ ವಂಚಿತವಾಗಿದ್ದು ಗ್ರಾಮ ಪಂಚಾಯತ್ ಅಧಿಕಾರಿಗಳ ಹಾಗೂ ಚುನಾಯಿತ ಸರ್ವ ಸದಸ್ಯರ ನಿರ್ಲಕ್ಷ್ಯತನದಿಂದ ಈ ಗ್ರಾಮ ಪಂಚಾಯತ್ ಅಭಿವೃದ್ಧಿ ಕಾರ್ಯಕ್ಕೆ ತುಂಬಾ ಹಿನ್ನಡೆಯಾಗಿದೆ ಎಂದು ಗ್ರಾಮ ಪಂಚಾಯತ್ ಅಧಿಕಾರಿಗಳ ಹಾಗೂ ಚುನಾಯಿತ ಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ಸಭೆ ಉದ್ಧೆಶಿಸಿ ಮಾತನಾಡಿದ ಮಾಜಿ ಸೈನಿಕರಾದ ಶರಣಯ್ಯ ಗುತ್ತೇದಾರ ಅವರು, ಕಳೆದ ಹಲವಾರು ವರ್ಷಗಳ ಹಿಂದೆ ನಿರ್ಮಾಣವಾದ ಚರಂಡಿಗಳ ಮೇಲೆ ಮಣ್ಣು ಬಿದ್ದು ಎಲ್ಲಾ ಚರಂಡಿಗಳು ಸಂಪೂರ್ಣವಾಗಿ ಮುಚ್ಚಿಹೋಗಿವೆ, ಅದೇ ರೀತಿ ಚೌಡಾಪೂರ ಗ್ರಾಮದ ಮಧ್ಯ ಭಾಗದಲ್ಲಿರುವ ಸಾರ್ವಜನಿಕ ಕುಡಿಯುವ ನೀರಿನ ಭಾವಿಯಲ್ಲಿ ಚಪ್ಪಲಿ, ಪ್ಲಾಸ್ಟಿಕ್, ಕಸ ಕಡ್ಡಿ ಬಿದ್ದರು ಇತ್ತ ಕಡೆ ಗ್ರಾಮ ಪಂಚಾಯತ್ ಅಧಿಕಾರಿಗಳಾಗಲಿ, ಚುನಾಯಿತ ಪ್ರತಿನಿಧಿಗಳಾಗಲಿ ತಲೆ ಹಾಕುತ್ತಿಲ್ಲ. ಸರಕಾರದಿಂದ ಗ್ರಾಮ ಪಂಚಾಯತ್ ಗೆ ಬರುವ ಲಕ್ಷಾಂತರ ರೂಪಾಯಿಗಳನ್ನು ಕೊಳ್ಳೆ ಹೊಡೆಯುವುದೇ ಇವರ ಆದ್ಯ ಕರ್ತವ್ಯವಾಗಿದೆ. ಗ್ರಾಮ ಪಂಚಾಯತ್ ಅಭಿವೃದ್ಧಿ ಮಾಡುವುದರಲ್ಲಿ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಸರ್ವ ಸದಸ್ಯರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಗುತ್ತೇದಾರ ಅವರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಶ್ರೀಮತಿ ಚಂದಮ್ಮ ಪಾಟೀಲ್ ವಹಿಸಿದ್ದರು.ಈ ಸಂದರ್ಭದಲ್ಲಿ ಮಾಳಪ್ಪ ಪೂಜಾರಿ ಹೂವಿನಹಳ್ಳಿ, ರಮೇಶ ಎಂ ಜಮಾದಾರ, ಮಲ್ಲು ಸಪ್ಪನಗೋಳ,ಹುಚ್ಚಯ್ಯ ಗುತ್ತೇದಾರ,ವಿಜಯಕುಮಾರ ಅರಳಗುಂಡಗಿ,ಸುಭಾಸ ಲಿಂಗಶೆಟ್ಟಿ, ರಾಜು ಜಮಾದಾರ,ಶಿವಲಿಂಗಪ್ಪ ಕಲಶೆಟ್ಟಿ, ಆನಂದ ಜಮಾದಾರ,ನಾಗಯ್ಯ ಗುತ್ತೇದಾರ, ಹುಸೇನಿ ಜಮಾದಾರ, ಮದರಸಾಬ ಜಮಾದಾರ, ಗೋಪಾಲ ಕುಶಾಳಕರ ಹಾಗೂ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳು ಮತ್ತು ಸಿಬ್ಬಂದಿಗಳು ವರ್ಗದವರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.