ಬೆಂಗಳೂರಿನಲ್ಲೇ ಎಲ್ಲಾ ಆರ್‌ಸಿಬಿ ಪಂದ್ಯ

ಬೆಂಗಳೂರು, ಡಿ.೭: ಇಂಡಿಯನ್ ಪ್ರೀಮಿಯರ್ ಲೀಗ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತವರಿನ ಎಲ್ಲಾ ಪಂದ್ಯಗಳು ಬೆಂಗಳೂರಿನಿಂದ ಸ್ಥಳಾಂತರವಾಗುವ ಆತಂಕದಲ್ಲಿದ್ದ ಅಭಿಮಾನಿಗಳಿಗೆ ಶುಭ ಸುದ್ದಿ ಸಿಕ್ಕಿದೆ.


೨೦೨೬ರ ಐಪಿಎಲ್‌ನ ಆರ್‌ಸಿಬಿ ಎಲ್ಲಾ ತವರು ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಲಿವೆ ಎಂದು ಸ್ವತಃ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ನಗರದಲ್ಲಿ ಕೆಎಸ್‌ಸಿಎ ಚುನಾವಣೆಯ ಮತದಾನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ನಾನು ಕ್ರಿಕೆಟ್ ಪ್ರೀತಿಸುವವ, ಆರ್‌ಸಿಬಿ ನಮ್ಮ ಹೆಮ್ಮೆ, ಯಾವುದೇ ಕಾರಣಕ್ಕೂ ನಮ್ಮಿಂದ ಇಲ್ಲಿನ ಐಪಿಎಲ್ ಪಂದ್ಯಗಳು ಕೈ ತಪ್ಪುವುದಿಲ್ಲ, ಆರ್ ಸಿಬಿಯ ಎಲ್ಲಾ ತವರಿನ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯುತ್ತವೆ. ಈ ಸಂಬಂಧ ಸಂಬಂಧಪಟ್ಟವರೊಂದಿಗೆ ಮಾತನಾಡುವೆ ಎಂದು ತಿಳಿಸಿದರು.


ಬೆಂಗಳೂರಿನಲ್ಲಿ ಏನು ಅನಾಹುತ ಆಗಿದಿಯೊ ಅದೆಲ್ಲವನ್ನು ತಪ್ಪಿಸಿ, ಬೆಂಗಳೂರು ನಗರದ ಗೌರವ ಉಳಿಸುವ ಕೆಲಸ ಮಾಡುತ್ತೇವೆ. ಕಾನೂನು ಚೌಕಟ್ಟಿನಲ್ಲಿ ಪ್ರೇಕ್ಷಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಸ್ಟೇಡಿಯಂ ಬಳಸುತ್ತೇವೆ. ಇದಕ್ಕೆ ಪರ್ಯಾಯವಾಗಿ ಬೇರೆ ದೊಡ್ಡ ಸ್ಟೇಡಿಯಂ ನಿರ್ಮಿಸಲು ಈಗಾಗಲೇ ರೂಪುರೇಷೆ ಹಾಕಲಾಗಿದ್ದು, ಅನುಮೋದನೆಯನ್ನು ಸಹ ನೀಡಲಾಗಿದೆ ಎಂದು ತಿಳಿಸಿದರು.


ಪುಣೆಗೆ ಸ್ಥಳಾಂತರ ಸಾಮಾನ್ಯವಾಗಿ ಚಾಂಪಿಯನ್ ಆಗಿ ಹೊರಹೊಮ್ಮಿದ ಫ್ರಾಂಚೈಸಿಗಳ ತವರು ಕ್ರೀಡಾಂಗಣದಲ್ಲಿ ಮರು ವರ್ಷದ ಐಪಿಎಲ್ ಟೂರ್ನಿಯ ಉದ್ಘಾಟನೆ ಪಂದ್ಯ ನಡೆಯುತ್ತದೆ. ಹಾಗೆಯೇ ೧೯ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ ಪಂದ್ಯ ಹಾಗೂ ಉದ್ಘಾಟನಾ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಬೇಕು. ಆದರೆ ಕಾಲ್ತುಳಿತದ ದುರಂತದಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದಿಂದಲೇ ಇಲ್ಲಿನ ಪಂದ್ಯಗಳನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗುತ್ತಿದೆ.