ಭೂ ಚಲನೆಯಿಂದ ಎಲ್ಲಾ ಚಟುವಟಿಕೆಗಳು ಸಾಧ್ಯ

ಕಲಬುರಗಿ: ಭೂಮಿಯು ತನ್ನ ಮೈ ಸುತ್ತ ಸುತ್ತುವುದರ ಜೊತೆಗೆ ಸೂರ್ಯನ ಸುತ್ತಲು ಸುತ್ತುತ್ತದೆ. ಇದರಿಂದ ಹಗಲು-ರಾತ್ರಿ, ಮಳೆಗಾಲ, ಚಳಿಗಾಲ, ಬೇಸಿಗೆಕಾಲ, ವಾತಾವರಣದಲ್ಲಿ ಬದಲಾವಣೆ ಸೇರಿದಂತೆ ಎಲ್ಲಾ ಚಟುವಟಿಕೆಗಳು ಜರುಗುತ್ತವೆ. ಭೂಮಿಯು ಪ್ರತಿ ಗಂಟೆಗೆ 15 ಡಿಗ್ರಿಯಂತೆ ಚಲಿಸಿ, ದಿನದಲ್ಲಿ 360 ಡಿಗ್ರಿ ಪೂರ್ಣಗೊಳಿಸುತ್ತದೆ. ಜಗತ್ತಿನ ಸಕಲ ಜೀವರಾಶಿಗಳ ಅಸ್ತಿತ್ವಕ್ಕೆ ಕಾರಣೀಕತೃವಾದ ಭೂಮಿಯ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ‘ಭೂ ಚಲನಾ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸೂರ್ಯನನ್ನು ಸುತ್ತುತ್ತಿರುವ ಗ್ರಹಗಳಲ್ಲಿ ಭೂಮಿಯು ಮೂರನೇಯದಾಗಿದೆ. ವಾಯು, ನೀರು, ನೆಲ ಹೊಂದಿರುವ, ಜೀವಿಗಳು ವಾಸಿಸಲು ಯೋಗ್ಯವಾಗಿರುವ ಏಕೈಕ ಗ್ರಹ ನಮ್ಮದಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆ, ಮಾನವನ ದುರಾಸೆಯಂತಹ ಕಾರಣಗಳಿಂದ ಭೂಮಿಯು ಮಲಿನವಾಗಿದೆ. ಇದರಿಂದ ಜಾಗತಿಕ ತಾಪಮಾನ ಹೆಚ್ಚಾಗಿ, ಹಸಿರು ಮನೆ ಪರಿಣಾಮ, ಓಝೋನ ಪದರಿನ ನಾಶ, ಕುಡಿಯುವ ನೀರಿನ ಅಭಾವ, ಜೀವ ಸಂಕುಲದ ಮೇಲೆ ದುಷ್ಪರಿಣಾಮ, ಅರಣ್ಯಗಳ ಕ್ಷೀಣತೆ, ಭೂಮಿಯ ಗುಣಮಟ್ಟದ ಪ್ರಮಾಣ ಕಡಿಮೆಯಾಗುತ್ತಿರುವುದು, ಮಳೆಯ ಪ್ರಮಾಣ ಕುಸಿತವಾಗಿರುವದು ಸೇರಿದಂತೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ, ಶಿಕ್ಷಕರಾದ ಲಕ್ಷ್ಮೀ ತಾರಾಪುರ, ದಿವ್ಯ ಎಂ.ವೇದಶೆಟ್ಟಿ, ಸಿಬ್ಬಂದಿ ಸೋಹೆಲ್ ಶೇಖ್ ಹಾಗೂ ವಿದ್ಯಾರ್ಥಿಗಳು ಇದ್ದರು.