
ಆಳಂದ: ಮದ್ಯವ್ಯಸನದಿಂದ ವ್ಯಕ್ತಿಯ ಆರೋಗ್ಯ ಹದಗೆಡುವುದಷ್ಟೇ ಅಲ್ಲ, ಇಡೀ ಕುಟುಂಬದ ನೆಮ್ಮದಿ, ಆರ್ಥಿಕ ಸ್ಥಿತಿ ಹಾಗೂ ಸಾಮಾಜಿಕ ಬದುಕಿನ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಇಂತಹ ಸಂಕಷ್ಟಕ್ಕೆ ಸಿಲುಕಿರುವವರನ್ನು ವ್ಯಸನಮುಕ್ತರನ್ನಾಗಿಸಿ, ಅವರ ಕುಟುಂಬಗಳಲ್ಲಿ ಮತ್ತೆ ಸಂತೋಷ ಮತ್ತು ನೆಮ್ಮದಿ ಮೂಡಿಸುವ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಡೆಸುತ್ತಿರುವ ಮದ್ಯವರ್ಜನ ಶಿಬಿರಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಉದ್ಯಮಿ ಚನ್ನಬಸವ ಪಾಟೀಲ ಹೇಳಿದರು.
ಪಟ್ಟಣದ ಶರಣನಗರದಲ್ಲಿರುವ ರಾಮಲಿಂಗ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ನ ಆಳಂದ ತಾಲೂಕು ಘಟಕ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಧರ್ಮಸ್ಥಳದ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಹಾಗೂ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು ಇವರ ಆಶ್ರಯದಲ್ಲಿ ಹಮ್ಮಿಕೊಂಡಿರುವ ೨೧೩೮ನೇ ಮದ್ಯವರ್ಜನ ವಾರದ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುಟುಂಬಗಳ ಬದುಕಿಗೆ ಹೊಸ ಭರವಸೆ ಸರ್ಕಾರದ ಪ್ರಯತ್ನಗಳ ಜತೆಗೆ ಸಮಾಜಮುಖಿ ಸಂಘ-ಸAಸ್ಥೆಗಳು ಕೈಜೋಡಿಸಿದಾಗ ಮಾತ್ರ ಆರೋಗ್ಯವಂತ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ. ಮದ್ಯವ್ಯಸನದಿಂದ ಅನೇಕ ಬಡ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದು, ದುಡಿಮೆಯ ಹಣ ವ್ಯಸನಕ್ಕೆ ವ್ಯಯವಾಗುವುದರಿಂದ ಮಕ್ಕಳ ಶಿಕ್ಷಣ, ಕುಟುಂಬದ ನಿರ್ವಹಣೆ ಮತ್ತು ಭವಿಷ್ಯದ ಭದ್ರತೆಗೂ ಧಕ್ಕೆಯಾಗುತ್ತದೆ. ಇಂತಹ ಕುಟುಂಬಗಳನ್ನು ಸಂಕಷ್ಟದಿAದ ಹೊರತಂದು, ವ್ಯಸನಕ್ಕೆ ಬಲಿಯಾದವರಿಗೆ ಹೊಸ ಬದುಕಿನ ಅವಕಾಶ ಕಲ್ಪಿಸುವ ಕಾರ್ಯಕ್ಕೆ ಧರ್ಮಸ್ಥಳ ಸಂಸ್ಥೆ ಮುಂದಾಗಿರುವುದು ಶ್ಲಾಘನೀಯ ಎಂದು ಚನ್ನಬಸವ ಪಾಟೀಲ ಹೇಳಿದರು.
ಮದ್ಯಪಾನದಿಂದ ದೂರವಾಗಿ ಆರೋಗ್ಯಕರ ಜೀವನ ನಡೆಸಲು ಶಿಬಿರಗಳು ಪ್ರೇರಣೆ ನೀಡುತ್ತವೆ. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪೂರಕವಾಗಿರುವ ಇಂತಹ ಜನಪರ ಕಾರ್ಯಗಳಿಗೆ ಸದಾ ಸಹಕಾರ ನೀಡಲು ಸಿದ್ಧನಿದ್ದು, ಈ ಸೇವಾ ಕಾರ್ಯಗಳು ಇನ್ನಷ್ಟು ವಿಸ್ತಾರಗೊಳ್ಳಬೇಕು ಎಂದು ಅವರು ತಿಳಿಸಿದರು.
ಇದೇ ವೇಳೆ ಮದ್ಯವರ್ಜನ ಶಿಬಿರ ಸಮಿತಿ ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ ಮಾತನಾಡಿ, ಆಳಂದ ಪಟ್ಟಣ ಮಾತ್ರವಲ್ಲದೆ ಗ್ರಾಮೀಣ ಭಾಗಗಳಲ್ಲಿಯೂ ಮದ್ಯಪಾನದ ದುಷ್ಪರಿಣಾಮಗಳು ಕುಟುಂಬ ಮತ್ತು ಸಮಾಜದ ಮೇಲೆ ಪರಿಣಾಮ ಬೀರುತ್ತಿವೆ. ವಿಶೇಷವಾಗಿ ದುಶ್ಚಟಗಳಿಗೆ ಬಲಿಯಾಗುವ ಯುವಜನರು ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುವ ಅಪಾಯವಿದೆ. ಮದ್ಯವ್ಯಸನದಿಂದ ಹೊರಬರಲು ಇಚ್ಛಿಸುವವರು ಶಿಬಿರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಹೊಸ ಜೀವನ ಆರಂಭಿಸಬೇಕು. ಧರ್ಮಸ್ಥಳ ಸಂಸ್ಥೆಯ ವಿವಿಧ ಜನಪರ ಯೋಜನೆಗಳ ಪ್ರಯೋಜನವನ್ನು ಅರ್ಹರು ಪಡೆದುಕೊಳ್ಳಬೇಕು. ಇಂತಹ ಸಮಾಜಮುಖಿ ಕಾರ್ಯಗಳಿಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಸಂಸ್ಥಾನ ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ಶಿಬಿರದ ಉದ್ದೇಶಕ್ಕೆ ಶುಭ ಹಾರೈಸಿದರು. ವ್ಯಸನದಿಂದ ದೂರವಾಗಿ ಶಿಸ್ತು, ಆರೋಗ್ಯ ಮತ್ತು ಕುಟುಂಬದ ಜವಾಬ್ದಾರಿಯೊಂದಿಗೆ ಬದುಕು ಕಟ್ಟಿಕೊಳ್ಳುವ ಪ್ರಯತ್ನಕ್ಕೆ ಶಿಬಿರ ನೆರವಾಗಲಿದೆ ಎಂಬ ಆಶಯ ವ್ಯಕ್ತವಾಯಿತು.ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕ ಗಣಪತಿ ಮಾಳಂಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಯೋಜನೆಗಳು ಹಾಗೂ ಮದ್ಯವರ್ಜನ ಶಿಬಿರದ ಉದ್ದೇಶವನ್ನು ವಿವರಿಸಿದರು. ಮದ್ಯವ್ಯಸನದಿಂದ ಹೊರಬರಲು ಬಯಸುವವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಶಿಬಿರದ ವಾತಾವರಣ ಕಲ್ಪಿಸುವ ಮೂಲಕ ಅವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪ್ರಯತ್ನಿಸಲಾಗುತ್ತಿದೆ. ಶಿಬಿರದಲ್ಲಿ ಆಳಂದ ತಾಲೂಕು ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿರುವ ೬೦ ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ. ಒಂದು ವಾರದ ಅವಧಿಯಲ್ಲಿ ಊಟ ಮತ್ತು ವಸತಿ ಸೌಲಭ್ಯದೊಂದಿಗೆ ಮದ್ಯಪಾನದಿಂದ ದೂರವಾಗಲು ಪ್ರೇರಣೆ, ಮಾರ್ಗದರ್ಶನ ಹಾಗೂ ವ್ಯಸನಮುಕ್ತ ಬದುಕಿಗೆ ಅಗತ್ಯವಾದ ಅರಿವು ಮೂಡಿಸುವ ಕಾರ್ಯ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವುಪುತ್ರ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಫಿರ್ದೋಸ್ ಅನ್ಸಾರಿ, ನ್ಯಾಯವಾದಿ ಬಾಬಾಸಾಹೇಬ ವಿ. ಪಾಟೀಲ, ಸಂಜಯ ನಾಯಕ, ಜಿಲ್ಲಾ ಜನಜಾಗೃತಿ ಸಮಿತಿ ಉಪಾಧ್ಯಕ್ಷ ಶಾಂತಪ್ಪ ಕೋರೆ ಸದಸ್ಯ ಮಲ್ಲಿನಾಥ ಮೈಂದರ್ಗಿ, ರಾಜಕುಮಾರ ಬೆಳಮಗಿ, ಅಪ್ಪಾಸಾಬ ತೀರ್ಥೆ, ಗೀತಾ ಹತ್ತರಕಿ ಮತ್ತಿತರರು ಉಪಸ್ಥಿತರಿದ್ದರು.
ಶಿಬಿರದ ಪ್ರಧಾನ ಸಂಚಾಲಕತ್ವವನ್ನು ಅನಿಲಕುಮಾರ ಎಸ್.ಎಸ್., ದಿನೇಶ ಪೂಜಾರ, ಸೋಮಲಿಂಗಪ್ಪ, ಸೇರಿದಂತೆ ಇತರರು ವಹಿಸಿದ್ದರು. ಯೋಜನಾಧಿಕಾರಿ ಓಂಕೇಶ ನಿರೂಪಿಸಿದರು. ಮೇಲ್ವಿಚಾರಕ ಶಿವಲಿಂಗಪ್ಪ ಸ್ವಾಗತಿಸಿದರು. ಮಹೇಶ ದಬಾಡೆ ವಂದಿಸಿದರು.





















