ಆಳಂದ ಪುರಸಭೆ ಅಧ್ಯಕ್ಷ ಫಿರ್ದೋಸ್ ಅನ್ಸಾರಿ ಸದಸ್ಯತ್ವ ರದ್ದು

ಆಳಂದ: ಪುರಸಭೆಯ ಅಧ್ಯಕ್ಷ ಫಿರ್ದೋಸ್ ಅನ್ಸಾರಿ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಆದೇಶ ಹೊರಡಿಸಿದ್ದಾರೆ. ಕಳೆದ ಒಂದು ವರ್ಷದಿಂದ ಅಧ್ಯಕ್ಷರಾಗಿ ಆಡಳಿತ ನಡೆಸುತ್ತಿದ್ದ ಅವರ ಸದಸ್ಯತ್ವ ರದ್ದುಗೊಳಿಸುವ ಮೂಲಕ ಅವರ ಆಡಳಿತಕ್ಕೆ ಅಂತ್ಯ ಹಾಡಲಾಗಿದೆ.
ಜಿಲ್ಲಾಧಿಕಾರಿ ಅವರ ಆದೇಶದ ಪ್ರಕಾರ, ಫಿರ್ದೋಸ್ ಅನ್ಸಾರಿ ಅವರು ಪುರಸಭೆ ಸಭೆಗಳಿಗೆ ಸತತವಾಗಿ ಗೈರು ಹಾಜರಾಗಿದ್ದು, ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಪ್ರಕರಣ 16(2)(ಸಿ)ಯನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಇದರಿಂದಾಗಿ ಅವರ ಸದಸ್ಯ ಸ್ಥಾನವು ಸಾಮಾನ್ಯ ಅನರ್ಹತೆಯಿಂದ ಖಾಲಿಯಾಗಿರುತ್ತದೆ ಎಂದು ಅಕ್ಟೋಬರ್ 31, 2025ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಆಳಂದ ಪುರಸಭೆಯಲ್ಲಿ ಮೊದಲ ಅವಧಿಯಲ್ಲಿ ಸದಸ್ಯರಾಗಿದ್ದ ಸಂದರ್ಭದಲ್ಲಿ ಅವರ ವಿರುದ್ಧ ಸಲ್ಲಿಕೆಯಾಗಿದ್ದ ದೂರಿನ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಎರಡನೇ ಅವಧಿಯಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಅವರ ಸದಸ್ಯತ್ವ ರದ್ದುಗೊಳಿಸುವ ನಿರ್ಧಾರವು ಸ್ಥಳೀಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಹಿಂದಿನ ದೂರಿನ ವಿಚಾರಣೆಯನ್ನು ಅಂತಿಮಗೊಳಿಸಿದ ಜಿಲ್ಲಾಧಿಕಾರಿಗಳು, ಸತತ ಗೈರು ಹಾಜರಿ ನಿಯಮ ಉಲ್ಲಂಘನೆಯನ್ನು ಆಧರಿಸಿ ಈ ಆದೇಶ ಹೊರಡಿಸಿದ್ದಾರೆ.