
ಔರಾದ್: ಮಕ್ಕಳು ಯಾವುದೇ ಸಮಸ್ಯೆ ಎದುರಾದರೂ ಹೆದರದೆ, ಧೈರ್ಯವಾಗಿ ತಮ್ಮ ಸಮಸ್ಯೆಗಳನ್ನು ತಂದೆ-ತಾಯಿ, ಶಿಕ್ಷಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು. ಸಮಸ್ಯೆಗಳಿಗೆ ಪರಿಹಾರ ಇದ್ದೇ ಇರುತ್ತದೆ. ಮಕ್ಕಳೊಂದಿಗೆ ಅಕ್ಕಪಡೆ ಸದಾ ಇರುತ್ತದೆ ಎಂದು ಅಕ್ಕಪಡೆ ರಾಜ್ಯ ಸಂಯೋಜಕಿ ಶೈನಿ ಪ್ರದೀಪ್ ಗುಂಟಿ ಹೇಳಿದರು.
ಪಟ್ಟಣದ ಆದರ್ಶ ವಿದ್ಯಾಲಯಕ್ಕೆ ಗುರುವಾರ ದಿಢೀರ್ ಭೇಟಿ ನೀಡಿದ ಅವರು, ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಬೆರೆತು ಅವರ ಅಭಿಪ್ರಾಯ ಹಾಗೂ ಸಮಸ್ಯೆಗಳನ್ನು ಕೇಳಿದ ಅವರು, ಯಾವುದೇ ತೊಂದರೆ ಎದುರಾದರೂ ಅದನ್ನು ಮುಚ್ಚಿಡದೆ ಮುಕ್ತವಾಗಿ ಹೇಳಿಕೊಳ್ಳುವಂತೆ ಸಲಹೆ ನೀಡಿದರು.
ನಾನು ನಿಮ್ಮ ಅಕ್ಕನಾಗಿ ನಿಮ್ಮ ಸಮಸ್ಯೆಗಳನ್ನು ಕೇಳಲು ಶಾಲೆಗೆ ಬಂದಿದ್ದೇನೆ. ನಿಮಗೆ ಏನಾದರೂ ಸಮಸ್ಯೆ ಇದ್ದರೆ ಮುಕ್ತವಾಗಿ ತಿಳಿಸಿ. ಯಾವುದೇ ಸಮಸ್ಯೆ ಬಂದಾಗ ಭಯಪಡುವ ಅಗತ್ಯವಿಲ್ಲ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ನಿಮ್ಮೊಂದಿಗೆ ಅಕ್ಕಪಡೆ ಯಾವಾಗಲೂ ಇರುತ್ತದೆ. ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ಕೈಗೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.
ಮಕ್ಕಳು ತಮ್ಮ ಸಮಸ್ಯೆಗಳನ್ನು ಬಿಚ್ಚು ಮನಸ್ಸಿನಿಂದ ಪೆÇೀಷಕರು, ಶಿಕ್ಷಕರು ಅಥವಾ ಅಧಿಕಾರಿಗಳ ಬಳಿ ಹೇಳಿಕೊಳ್ಳಬೇಕು. ಬಾಲ್ಯದಲ್ಲಿ ಎದುರಾಗುವ ಕಿರುಕುಳ, ದೌರ್ಜನ್ಯ ಅಥವಾ ಇತರ ಸಮಸ್ಯೆಗಳನ್ನು ಮುಚ್ಚಿಟ್ಟುಕೊಳ್ಳುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಬಹುದು. ಹೀಗಾಗಿ ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಜಾರಿಗೆ ತಂದಿರುವ ವಿಶೇಷ ಭದ್ರತಾ ವ್ಯವಸ್ಥೆಯೇ ಅಕ್ಕಪಡೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೆÇಲೀಸ್ ಇಲಾಖೆಯ ಸಹಯೋಗದಲ್ಲಿ ರಾಜ್ಯಾದ್ಯಂತ ಅಕ್ಕಪಡೆ ಕಾರ್ಯನಿರ್ವಹಿಸುತ್ತಿದೆ. ಪ್ರತಿ ತಂಡದಲ್ಲಿ ವಿಶೇಷ ತರಬೇತಿ ಪಡೆದ ಮಹಿಳಾ ಗೃಹರಕ್ಷಕರು ಹಾಗೂ ಮಹಿಳಾ ಪೆÇಲೀಸ್ ಸಿಬ್ಬಂದಿ ಇರುತ್ತಾರೆ.
ಶಾಲಾ-ಕಾಲೇಜುಗಳು, ವಿದ್ಯಾರ್ಥಿ ನಿಲಯಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಶಾಪಿಂಗ್ ಮಾಲ್‍ಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಅಕ್ಕಪಡೆ ವಾಹನಗಳ ಮೂಲಕ ಗಸ್ತು ತಿರುಗುತ್ತದೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಕಿರುಕುಳ, ಬಾಲ್ಯವಿವಾಹ, ಪೆÇೀಕ್ಸೋ ಕಾಯ್ದೆ ಹಾಗೂ ಲೈಂಗಿಕ ದೌರ್ಜನ್ಯಗಳ ಕುರಿತು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅಕ್ಕಪಡೆಯ ಪ್ರಮುಖ ಉದ್ದೇಶವಾಗಿದೆ.
ಸಂಕಷ್ಟದಲ್ಲಿರುವ ಮಹಿಳೆಯರು ಹಾಗೂ ಮಕ್ಕಳಿಗೆ ಅಗತ್ಯ ಕಾನೂನು ನೆರವು ಮತ್ತು ರಕ್ಷಣೆ ದೊರಕುವಂತೆ ಮಾಡುವುದು, ಅಪಾಯದ ಸಂದರ್ಭದಲ್ಲಿ ಸೂಕ್ತ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವುದು ಸೇರಿದಂತೆ ಹಲವು ಕಾರ್ಯಗಳನ್ನು ಅಕ್ಕಪಡೆ ನಿರ್ವಹಿಸುತ್ತದೆ. ಶಾಲೆಗಳಿಗೆ ಭೇಟಿ ನೀಡಿ ಮಕ್ಕಳೊಂದಿಗೆ ನೇರವಾಗಿ ಸಂವಾದ ನಡೆಸುವ ಮೂಲಕ ಅವರಲ್ಲಿ ಸುರಕ್ಷತೆ ಹಾಗೂ ಆತ್ಮವಿಶ್ವಾಸದ ಭಾವನೆ ಮೂಡಿಸುವ ಕಾರ್ಯಕ್ಕೂ ಒತ್ತು ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಿಪಿಐ ರಘುವೀರಸಿಂಗ್ ಠಾಕೂರ್, ಪಿಎ??? ವಾಸೀಮ್ ಪಟೇಲ್, ಪ್ರಾಂಶುಪಾಲ ಇನಾಯತ್ ಅಲೀ ಸೌದಾಗರ್, ಮಹಾದೇವ ಚಿಟಗೀರೆ ಸೇರಿದಂತೆ ಅನೇಕರಿದ್ದರು.
ಮಕ್ಕಳಿಗೆ ಧೈರ್ಯ ತುಂಬುವ ಅಕ್ಕಪಡೆ
ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆ ಎದುರಾದರೂ ನಾನು ಒಬ್ಬಂಟಿಯಲ್ಲ ಎಂಬ ಭಾವನೆ ಮೂಡಬೇಕು. ಸಮಸ್ಯೆಗಳನ್ನು ಹೇಳಿಕೊಂಡರೆ ಸೂಕ್ತ ನೆರವು ದೊರೆಯುತ್ತದೆ ಎಂಬ ವಿಶ್ವಾಸ ಮಕ್ಕಳಲ್ಲಿ ಮೂಡಿಸುವುದು ಅಕ್ಕಪಡೆಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಶಾಲಾ ಮಟ್ಟದಲ್ಲಿ ಮಕ್ಕಳೊಂದಿಗೆ ನೇರ ಸಂವಾದ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸುವ ಕಾರ್ಯ ಮುಂದುವರಿಸಲಾಗುತ್ತಿದೆ ಎಂದು ಅಕ್ಕಪಡೆಯ ರಾಜ್ಯ ಸಂಯೋಜಕಿ ಶೈನಿ ಪ್ರದೀಪ್ ಗುಂಟಿ ತಿಳಿಸಿದರು. ಮಕ್ಕಳೊಂದಿಗೆ ಆತ್ಮೀಯವಾಗಿ ಬೆರೆತು ಅವರ ಸಮಸ್ಯೆಗಳನ್ನು ಆಲಿಸಿ, ಧೈರ್ಯ ತುಂಬುವುದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡುವ ಎಲ್ಲರೂ ಜವಾಬ್ದಾರಿಯಿಂದ ಮಾಡಬೇಕು ಎಂದರು.































