ಬಿಡದಿ ಪುರಸಭಾ ಉಪಾಧ್ಯಕ್ಷರಾಗಿ ಆಯಿಷಾ

ರಾಮನಗರ, ಡಿ.೦೬: ಪುರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ೧೦ನೇ ವಾರ್ಡ್‌ನ ಜೆಡಿಎಸ್ ಸದಸ್ಯೆ ಆಯಿಷಾ ಖಲೀಲ್ ಆಯ್ಕೆಯಾಗಿದ್ದಾರೆ.


ಪುರಸಭೆಯ ಉಪಾಧ್ಯಕ್ಷರಾಗಿದ್ದ ಮಂಜುಳ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿತ್ತು. ಒಟ್ಟು ೨೩ ಸಂಖ್ಯಾಬಲ ಇರುವ ಪುರಸಭೆಯಲ್ಲಿ ಜೆಡಿಎಸ್ ೧೪ ಹಾಗೂ ಕಾಂಗ್ರೆಸ್ ೯ ಸದಸ್ಯರನ್ನು ಹೊಂದಿದೆ. ಜೆಡಿಎಸ್??ನಿಂದ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿಯ ಕಾರಣ ಪರಿಸ್ಥಿತಿ ಲಾಭ ಪಡೆಯಲು ಕಾಂಗ್ರೆಸ್‌ನಿಂದ ಬಿಂದಿಯಾ ಸ್ಪರ್ಧೆಗೆ ಮುಂದಾಗಿದ್ದರು.


ಪುರಸಭಾ ಸಭಾಂಗಣದಲ್ಲಿ ನಿಗದಿಗೊಂಡಿದ್ದ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಆಯಿಷಾ ಖಲೀಲ್ ಕಾಂಗ್ರೆಸ್ ಪಕ್ಷದಿಂದ ಬಿಂದಿಯಾ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದರು. ಮಧ್ಯಾಹ್ನ ೧ ಗಂಟೆಗೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಚುನಾವಣಾ ಪ್ರಕ್ರಿಯೆಯಲ್ಲಿ ೧೪ ಮತಗಳನ್ನ ಪಡೆಯುವ ಮೂಲಕ ಆಯಿಷಾ ಖಲೀಲ್ ಜಯಗಳಿಸಿದರೆ ಕಾಂಗ್ರೆಸ್ ಅಭ್ಯರ್ಥಿ ಬಿಂದಿಯಾ ಅವರು ೯ ಮತಗಳನ್ನ ಪಡೆದು ಸೋಲು ಕಂಡರು.


ಚುನಾವಣಾಧಿಕಾರಿಗಳಾಗಿ ರಾಮನಗರ ತಹಶಿಲ್ದಾರ್ ತೇಜಸ್ವಿನಿ ಸಹಾಯಕ ಚುನಾವಣಾಧಿಕಾರಿಯಾಗಿ ಪುರಸಭಾ ಮುಖ್ಯಾಧಿಕಾರಿ ಮೀನಾಕ್ಷಿ ಕರ್ತವ್ಯ ನಿರ್ವಹಿಸಿದರು.


ನೂತನ ಉಪಾಧ್ಯಕ್ಷೆ ಆಯಿಷಾ ಕಲೀಲ್ ಮಾತನಾಡಿ ಅಲ್ಪಸಂಖ್ಯಾತ ಸಮುದಾಯದ ನನ್ನನ್ನ ಗುರುತಿಸಿ ನಮ್ಮ ಪಕ್ಷದ ವರಿಷ್ಠರು ನನಗೆ ಅಧಿಕಾರ ನೀಡಿದ್ದಾರೆ. ನೆನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾಮಗಾರಿಗಳಿಗೆ ತ್ವರಿತಗತಿಯಲ್ಲಿ ಚಾಲನೆ ನೀಡುವುದರ ಜೊತೆಗೆ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು. ಕುಡಿಯುವ ನೀರು, ಸಿಸಿ ರಸ್ತೆ, ಚರಂಡಿ, ಬೀದಿದೀಪ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಹೆಚ್ಚಿನ ಒತ್ತು ನೀಡಲಾಗುವುದು ಎಂದರು.


ಅಧ್ಯಕ್ಷೆ ಭಾನುಪ್ರಿಯಾ ಮಾತನಾಡಿ ಮುಂದಿನ ದಿನಗಳಲ್ಲಿ ನಾವು ಹಾಗೂ ಉಪಾಧ್ಯಕ್ಷರು ಒಟ್ಟಾಗಿ ಸೇರಿ ಪಟ್ಟಣದ ಅಭಿವೃದ್ಧಿ ಕಡೆಗೆ ಹೆಚ್ಚಿನ ಒತ್ತು ನೀಡುತ್ತವೆ. ಪಟ್ಟಣದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಲಾಗುವುದು. ೨೩ ವಾರ್ಡ್‌ಗಳಿಗೂ ತಾರತಮ್ಯವಿಲ್ಲದೇ ಸಮಾನವಾಗಿ ಅನುದಾನ ಹಂಚಲಾಗುತ್ತದೆ. ಪಟ್ಟಣದ ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಅವರ ವಿಶ್ವಾಸಕ್ಕೆ ದಕ್ಕೆ ಬರೆದಂತೆ ಅಭಿವೃದ್ಧಿ ಕಾಮಗಾರಿಗಳನ್ನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.