
ಕೋಲಾರ, ಅ. ೩: “ಭಾರತ ದೇಶದಲ್ಲಿ ಜನಿಸಿದ ಪ್ರತಿಯೊಬ್ಬರಿಗೂ ಗಾಳಿ, ನೀರು, ಬಿಸಿಲು ಮತ್ತು ಮಳೆ ಹೇಗೇ ಸಮಾನವಾಗಿದೆಯೋ, ಹಾಗೆಯೇ ನಾವೆಲ್ಲರೂ ಯಾವುದೇ ಭೇದಭಾವವಿಲ್ಲದೆ ಅಣ್ಣ-ತಮ್ಮಂದಿರಂತೆ ಒಂದೇ ಎಂಬ ಭಾವದಿಂದ ಬದುಕಬೇಕು” ಎಂದು ಶಾಸಕ ಡಾ. ಕೊತ್ತೂರು ಜಿ. ಮಂಜುನಾಥ್ ಅವರು ಸರ್ವಧರ್ಮ ಸಮನ್ವಯತೆಯ ಸಂದೇಶ ಸಾರಿದರು.
ನಗರದ ಗಾಂಧಿ ಚೌಕದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಗರಸಭ ಹಾಗೂ ಭಾರತ ಸೇವಾದಲದ ಸಂಯುಕ್ತ ಆಶ್ರಯದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಅತ್ಯಂತ ಶಿಸ್ತುಬದ್ಧವಾಗಿ ಆಚರಿಸಲಾಯಿತು. ವೇದಿಕೆಯಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಗುರುಗಳನ್ನು ಒಗ್ಗೂಡಿಸಿ ಮಾತನಾಡಿದ ಶಾಸಕರು, ಬಾಬಾ ಸಾಹೇಬ್ ಅಂಬೇಡ್ಕರ್, ಗಾಂಧೀಜಿ ಮತ್ತು ನೆಹರೂ ಅವರಂತಹ ನಾಯಕರು ತಂದುಕೊಟ್ಟ ಸ್ವಾತಂತ್ರ್ಯವನ್ನು ಸ್ಮರಿಸುತ್ತಾ, ಅವರ ಆದರ್ಶಗಳ ಹಾದಿಯಲ್ಲಿ ನಡೆಯಬೇಕು ಎಂದು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ, “ಗಾಂಧೀಜಿಯವರ ಬಳಿ ಯಾವುದೇ ಶಸ್ತ್ರಸ್ತ್ರ, ಸೈನ್ಯ ಅಥವಾ ಇಂದಿನ ಕಾಲದ ಮೊಬೈಲ್, ಸಾಮಾಜಿಕ ಜಾಲತಾಣಗಳಿರಲಿಲ್ಲ; ಕೇವಲ ’ಸತ್ಯ ಮತ್ತು ’ಅಹಿಂಸೆ’ ಎಂಬ ಅಸ್ತ್ರಗಳ ಮೂಲಕ ಇಡೀ ದೇಶವನ್ನು ಒಗ್ಗೂಡಿಸಿ ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟರು” ಎಂದು ಬಣ್ಣಿಸಿದರು.
ಈದೇ ವೇಳಾ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಸ್ಮರಿಸಿದ ಅವರು, ದೇಶ ಕಾಯುವ ಸೈನಿಕರಿಗೆ ಹಾಗೂ ಕೋವಿಡ್ನಂತಹ ಸಂಕಷ್ಟದ ಸಮಯದಲ್ಲೂ ಅನ್ನ ನೀಡಿದ ರೈತರಿಗೆ ’ಜೈ ಜವಾನ್, ಜೈ ಕಿಸಾನ್ ಘೋಷವಾಕ್ಯದ ಮೂಲಕ ಗೌರವ ಸಲ್ಲಿಸಬೇಕು ಎಂದರು. ಗಾಂಧಿ ಚೌಕವನ್ನು ಕೇವಲ ಹೋರಾಟಗಳಿಗೆ ಸೀಮಿತಗೊಳಿಸದೆ, ವಾರಕ್ಕೊಮ್ಮೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸರ್ವಧರ್ಮ ಪ್ರಾರ್ಥನೆಗೆ ಬಳಸಬೇಕು ಹಾಗೂ ಮುಂದಿನ ದಿನಗಳಲ್ಲಿ ಇಲ್ಲಿ ಗಾಂಧೀಜಿಯವರ ಕಂಚಿನ ಪ್ರತಿಮೆ ಸ್ಥಾಪಿಸಬೇಕು ಎಂದು ಅವರು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಅವರು ಮಾತನಾಡಿ ಮಹಾ ನಾಯಕರ ಆದರ್ಶಗಳು ಮತ್ತು ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಅಧಿಕಾರಿಗಳು ಕೇವಲ ಕಚೇರಿಗೆ ಸೀಮಿತವಾಗದೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಕಾರ್ಯಕ್ರಮವು ಬೆಳಿಗ್ಗೆ ೭ ಗಂಟೆಗೆ ಸರಿಯಾಗಿ ಆರಂಭವಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಒಟ್ಟಾಗಿ ಸೇರಿ ಈ ಜಯಂತಿಯನ್ನು ಯಶಸ್ವಿಗೊಳಿಸಿದರು. ಇದಕ್ಕೂ ಮುನ್ನ ಗಣ್ಯರು ಗಾಂಧಿ ಪ್ರತಿಮೆಗ ಮಾಲಾರ್ಪಣ ಮಾಡಿ ಸರ್ವಧರ್ಮ ಪ್ರಾರ್ಥನೆ ಮಾಡಿದರು. ಇದೇ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮುಖವಾಣಿ ಜನಪದ ಮತ್ತು ಮಾರ್ಚ್ ಆಫ್ ಕರ್ನಾಟಕ ಗಾಂಧಿ ವಿಶೇಷ ಮಾಸಿಕಗಳನ್ನು ಬಿಡುಗಡೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹನೀಫ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಅಪರ ಜಿಲ್ಲಾಧಿಕಾರಿ ಎಸ್. ಎಂ. ಮಂಗಳ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಟಿ.ಕೆ. ರಮೇಶ್, ಉಪ ವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್, ತಹಶೀಲ್ದಾರ್ ಶ್ರೀನಿವಾಸ್ ರಡ್ಡಿ, ನಗರಸಭ ಆಯುಕ್ತರು ವೆಂಕಟೇಶ್ ನಾಗನೂರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಡಾ. ಕೆ.ಎನ್. ಕವನ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
























