
ಕಲಬುರಗಿ,ಮೇ.೨೩-ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯ ಗುತ್ತಿಗೆ ನೌಕರರ ಹೋರಾಟಕ್ಕೆ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಜಿಲ್ಲಾ ಸಮಿತಿಯ ಬೆಂಬಲ ವ್ಯಕ್ತಪಡಿಸಿದೆ.
ಕಳೆದ ೨೪ ದಿನಗಳಿಂದ ನಡೆಯುತ್ತಿರುವ ವಿಶ್ವವಿದ್ಯಾಲಯದ ಗುತ್ತಿಗೆ ಕಾರ್ಮಿಕರ ಹೋರಾಟವು ಇಂದಿಗೆ ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹಕ್ಕೆ ಕಾಲಿಟ್ಟಿದೆ. ಅವರ ಬೇಡಿಕೆಗಳಾದ ‘ವೇತನವನ್ನು ಹೆಚ್ಚುಗೊಳಿಸುವುದು’ ಮತ್ತು ‘ವೇತನವನ್ನು ಸಂಚಿತ ವೇತನದ ರೂಪದಲ್ಲಿ ಕೊಡಬೇಕು ಅಂದರೆ, ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ವಿಶ್ವವಿದ್ಯಾಲಯವೇ ವೇತನ ಪಾವತಿಸುವಂತಹ ಜವಬ್ದಾರಿಯನ್ನು ತೆಗೆದುಕೊಳ್ಳಬೇಕು’ ಎನ್ನುವ ಬೇಡಿಕೆಗಳು ಸಂಪೂರ್ಣವಾಗಿ ನ್ಯಾಯಯುತವಾಗಿವೆ. ಈ ಬೇಡಿಕೆಗಳನ್ನು ನಿರ್ಲಕ್ಷಿಸಿದ ವಿಶ್ವವಿದ್ಯಾಲಯದ ಕ್ರಮವು ಅತ್ಯಂತ ಕಾರ್ಮಿಕ ವಿರೋಧಿಯಾಗಿದ್ದು, ಇದನ್ನು ಎಐಕೆಕೆಎಂಎಸ್ ಕಲಬುರಗಿ ಜಿಲ್ಲಾ ಸಮಿತಿಯು ಉಗ್ರವಾಗಿ ಖಂಡಿಸಿದೆ. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳಾದ ಮಹೇಶ್ ಎಸ್. ಬಿ. ಯವರು ಧರಣಿ ನಿರತ ಕಾರ್ಮಿಕರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿ ಮಾತನಾಡಿ, ಕಾರ್ಮಿಕರು ಮತ್ತು ರೈತರ ಒಗ್ಗಟ್ಟು ಬೆಳೆಯಬೇಕು. ಈ ಹೋರಾಟಕ್ಕೆ ಎಐಕೆಕೆಎಂಎಸ್ ಸಂಪೂರ್ಣ ಬೆಂಬಲವಿದ್ದು, ಹೋರಾಟವನ್ನು ರಾಜೀರಹಿತವಾಗಿ ಮುಂದುವರೆಸಬೇಕು, ಒಂದು ವೇಳೆ ವಿಶ್ವವಿದ್ಯಾಲಯದ ಆಡಳಿತವು ಅಥವಾ ಸರ್ಕಾರವು ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಉನ್ನತ ಹಂತದ ಉಗ್ರ ಹೋರಾಟದಲ್ಲಿ ಎಐಕೆಕೆಎಂಎಸ್ ಜಿಲ್ಲಾ ಸಮಿತಿಯು ಸಂಪೂರ್ಣವಾಗಿ ಗುತ್ತಿಗೆ ಕಾರ್ಮಿಕರ ಜೊತೆಗೆ ನಿಲ್ಲುತ್ತದೆ ಎಂದು ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಭೀಮಾಶಂಕರ ಆಂದೋಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

























