
ಚನ್ನಮ್ಮನ ಕಿತ್ತೂರು, ನ 5: ಕಬ್ಬಿಗೆ ವೈಜ್ಞಾನಿಕ ಬೆಲೆ ಹಾಗೂ ಎಲ್ಲ ಸಕ್ಕರೆ ಕಾರ್ಖಾನೆಯ ಎದುರು ತೂಕದ ಯಂತ್ರ ಅಳವಡಿಸುವಂತೆ ಆಗ್ರಹಿಸಿ ರೈತರು ಹೋರಾಟ ತೀವ್ರಗೊಳಿಸಿದ್ದಾರೆ. ಪ್ರತಿ ಟನ್‍ಗೆ ರೂ.3500 ಬೆಲೆ ನೀಡಬೇಕೆಂದು ರಾಷ್ಟ್ರೀಯ ಹೆದ್ದಾರಿ 4ರ ಪಕ್ಕ ಚನ್ನಮ್ಮನ ವರ್ತುಳದಲ್ಲಿ ವಿವಿಧ ರೈತ ಸಂಘಟನೆಗಳು ಸೇರಿ ಅಹೋ ರಾತ್ರಿ ಧರಣಿ ಆರಂಭಿಸಿದ್ದಾರೆ.
ಗುರ್ಲಾಪೂರದಲ್ಲಿ ನಡೆಯುತ್ತಿರುವ ರೈತರ ಬೆಂಬಲವಾಗಿ ಈ ಪ್ರತಿಭಟನೆ ಆರಂಭಿಸಲಾಗಿದೆ. ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗಬೇಕಾಗಿದೆ. ಈ ಕೂಡಲೆ ಸರ್ಕಾರ ಮುತವರ್ಜಿವಹಿಸಿ ಎಲ್ಲ ಕಾರ್ಖಾನೆ ಆಡಳಿತ ಮಂಡಳಿಗಳಿಗೆ ಮತ್ತು ಮಾಲೀಕರಿಗೆ ತಿಳಿ ಹೇಳಿ ರೂ. 3500 ದರ ನಿಗದಿ ಮಾಡುವಂತೆ ತಿಳಿಸಬೇಕು ಎಂಬುದು ಪ್ರತಿಭಟನಾಕಾರರ ಆಗ್ರಹ.
ಈ ಹೋರಾಟದಲ್ಲಿ ಧಾರವಾಡ, ಖಾನಾಪೂರ, ಸವದತ್ತಿ, ಹಿರೇಬಾಗೇವಾಡಿ ಇನ್ನಿತರ ಹಳ್ಳಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಬಂದು ಹೋರಾಟಕ್ಕೆ ಬೆಂಬಲ ಸೂಚಿಸಿ ಪಾಲ್ಗೊಂಡಿದ್ದರು.
ನಿಚ್ಚಣಕಿ ಶ್ರೀ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮಿಜೀ ಮಾತನಾಡಿದರು.
ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಶಾಸಕ ಬಾಬಾಸಾಹೇಬ ಪಾಟೀಲ, ಮುಖ್ಯಮಂತ್ರಿ ಹಾಗೂ ಸಕ್ಕರೆ ಸಚಿವ ಸರ್ಕಾರದೊಂದಿಗೆ ಮಾತನಾಡಿ ಬೆಲೆ ನಿಗದಿ ಪಡಿಸಲು ಆಗ್ರಹಿಸುತ್ತೇನೆ. ರೈತರ ಪರವಾಗಿ ಸರ್ಕಾರ ಮಟ್ಟದಲ್ಲಿ ಧ್ವನಿಯೆತ್ತುತ್ತೇನೆ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅಪ್ಪೇಶ ದಳವಾಯಿ ಎಂ.ಎಫ್. ಜಕಾತಿ, ಪ್ರಕಾಶ ನಾಯಕ, ಸಂಗಮೇಶ ಹಿರೇಮಠ, ಭೀಷ್ಟಪ್ಪ ಶಿಂಧೆ, ಪ್ರವೀಣ ಸರದಾರ, ಮಹಾಂತೇಶ ಎಮ್ಮಿ, ಶಂಕರ ಕಮತಗಿ, ಫಕ್ಕೀರಪ್ಪ ಜಾಗಂಟಿ, ನಾಗರತ್ನಾ, ಸತೀಶ ಲಂಗೋಟಿ, ಕೃಷ್ಣಾ ಬಾಳೇಕುಂದರಗಿ, ಅನಿಲ್ ಎಮ್ಮಿ, ವಿಜಯಕುಮಾರ ಶಿಂದೆ, ಮಡಿವಾಳಪ್ಪ ವರಗನ್ನವರ, ಅಶೋಕ ಅಳ್ನಾವರ, ನಾಗಪ್ಪ ಅಸಲನ್ನವರ, ಕಾಶೀಮ ಹಟ್ಟಿಹೊಳಿ, ಅಶಪಾಕ ಹವಾಲ್ದಾರ, ದಶರಥ ಮಡಿವಾಳರ, ಗುಲಾಬ ಬಾಳೇಕುಂದರಗಿ, ಪಾರೀಸ್ ದೇಗಲೋಳ್ಳಿ, ಇನ್ನಿತರ ಗ್ರಾಮಗಳ ರೈತರಿದ್ದರು.






























