ಅಹಲ್ಯಾಬಾಯಿ ಹೊಳ್ಕರ್ ಜಯಂತಿ ಆಚರಣೆ

ಕೆ.ಆರ್.ಪುರ,ಮೇ.೨೮- ಅಹಲ್ಯಾಬಾಯಿ ಹೋಳ್ಕರ್ ಅವರು ಸಾವಿರಾರು ಹಿಂದೂ ದೇವಾಲಯ ಹಾಗೂ ಪುಣ್ಯ ಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ಹಿಂದೂ ಧರ್ಮದ ರಕ್ಷಣೆಗೆ ನಿಂತಿದ್ದರು ಎಂದು ಮಾಜಿ ಪಾಲಿಕೆ ಸದಸ್ಯ ಕಲ್ಕೆರೆ ಶ್ರೀನಿವಾಸ್ ಅವರು ಹೇಳಿದರು.


ಕೆ.ಆರ್.ಪುರ ಸಮೀಪದ ಕಲ್ಕೆರೆಯ ವೈಷ್ಣವಿ ಬಡಾವಣೆಯ ಶ್ರೀಭಕ್ತಾಂಜನೇಯ ದೇವಸ್ಥಾನದಲ್ಲಿ ಶ್ರೀಅಹಿಲ್ಯಾಬಾಯಿ ಹೋಳ್ಕರ್ ಅವರ ೩೦೦ ನೇ ಜಯಂತೋತ್ಸವದ ಅಂಗವಾಗಿ ಜ್ಯೋತಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.


ಅಹಲ್ಯಾಬಾಯಿ ಹೋಳ್ಕರ್ ಅವರು ಭಾರತದಲ್ಲಿ ಅನೇಕ ದೇವಾಲಯಗಳನ್ನು ಸ್ಥಾಪನೆ ಮಾಡಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅನ್ಯ ಧರ್ಮಿಯರಿಂದ ದಾಳಿಗೆ ಒಳಗಾಗಿದ್ದ ೧೨ ಜ್ಯೋತಿರ್ಲಿಂಗಗಳ ಜೀರ್ಣೋದ್ಧಾರ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.


ರಾಜಮಾತೆದೇವಿ ಅಹಿಲ್ಯಾಬಾಯಿ ಹೋಳ್ಕರ್ ಅವರ ೩೦೦ನೇ ಜಯಂತೋತ್ಸವದ ಅಂಗವಾಗಿ ಮೇ ೩೧ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಹಿಲ್ಯಾಬಾಯಿ ಹೋಳ್ಕರ್ ಅವರ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಜ್ಯೋತಿ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದರು.


ಈ ಸಂದರ್ಭದಲ್ಲಿ ಕುರುಬರ ಸಂಘದ ಜಿಲ್ಲಾಧ್ಯಕ್ಷ ಆಗರ ಪ್ರಕಾಶ್, ಪೂರ್ವ ತಾಲ್ಲೂಕು ಅಧ್ಯಕ್ಷ ಎಸ್.ಕೃಷ್ಣಪ್ಪ, ಕೆ.ಪಿ.ಶಂಕರಪ್ಪ, ರಾಮಚಂದ್ರ, ಮೂರ್ತಿ, ವೆಂಕಟರಮಣ, ಎನ್.ಶಂಕರಪ್ಪ, ಕೌದೇನಹಳ್ಳಿ ಗೋಪಾಲ್, ಕಲ್ಕೆರೆ ಸುನೀಲ್, ಮಧುಸೂದನ್, ಗೋವಿಂದಪ್ಪ, ಕೃಷ್ಣಮೂರ್ತಿ, ಕುಮಾರಣ್ಣ ಇದ್ದರು.