
ಬೀದರ್, ಸೆ ೩೦: ‘ಅಂತರರಾಷ್ಟ್ರೀಯ ಸುರಕ್ಷಿತ ಗರ್ಭಪಾತ ದಿನಾಚರಣೆ’ಯು ಒಗ್ಗಟ್ಟಿನ ಕಾರ್ಯಾಚರಣೆಯ ಮೂಲಕ ಎಲ್ಲರಿಗೂ ಆಯ್ಕೆ ಮತ್ತು ಸೇವೆಗಳ ಲಭ್ಯತೆಯನ್ನು ಸಬಲೀಕರಣಗೊಳಿಸಬೇಕು. ಮಹಿಳೆಯು ಐದೂವರೆ ತಿಂಗಳಿನವರೆಗಿನ ಗರ್ಭಪಾತ ಸೇವೆಯನ್ನು ಕಾನೂನಾತ್ಮಕವಾಗಿ ಪಡೆಯಬಹುದು ಎಂದು ಬೀದರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅನೀಲ್ ಚಿಂತಾಮಣಿ ಹೇಳಿದರು.
ಬೀದರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಸೆ.೨೯ರ ಮಂಗಳವಾರದAದು ಅಂತರರಾಷ್ಟ್ರೀಯ ಸುರಕ್ಷಿತ ಗರ್ಭಪಾತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂತರರಾಷ್ಟ್ರೀಯ ಸುರಕ್ಷಿತ ಗರ್ಭಪಾತ ದಿನಾಚರಣೆಯು “ಒಗ್ಗಟ್ಟಿನ ಕಾರ್ಯಾಚರಣೆ: ಎಲ್ಲರಿಗೂ ಆಯ್ಕೆ ಮತ್ತು ಸೇವೆಗಳ ಲಭ್ಯತೆಯನ್ನು ಸಬಲೀಕರಣಗೊಳಿಸುವುದು” ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿದ್ದು, ಗರ್ಭಧರಿಸಿದ ಎರಡು ತಿಂಗಳಿನವರೆಗೆ ಮಾತ್ರೆಗಳ ಮೂಲಕ ಗರ್ಭಪಾತದ ಸೌಲಭ್ಯವಿದೆ. ಮೂರು ತಿಂಗಳಿನವರೆಗೆ ಗರ್ಭಪಾತವು ಸುಲಭ ಮತ್ತು ಸುರಕ್ಷಿತ ಎಂದು ಅವರು ತಿಳಿಸಿದರು.
ಮನ್ನಾಎಖೇಳಿ ಸಮುದಾಯ ಆರೋಗ್ಯ ಕೇಂದ್ರದ ಸ್ತ್ರೀರೋಗ ತಜ್ಞರಾದ ಡಾ. ಶೀಲಾ ವಾಗಮಾರೆ ಮಾತನಾಡಿ, ಬೀದರ್ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಸುರಕ್ಷಿತ ಗರ್ಭಪಾತ ಹಾಗೂ ಅನಪೇಕ್ಷಿತ ಗರ್ಭಧಾರಣೆ ಕುರಿತು ಅರಿವು ಮೂಡಿಸಿದರು.
ಗರ್ಭಧರಿಸಿದ ಎರಡು ತಿಂಗಳಿನವರೆಗೆ ಮಾತ್ರೆಗಳ ಮೂಲಕ ಗರ್ಭಪಾತದ ಸೌಲಭ್ಯ, ಮೂರು ತಿಂಗಳಿನವರೆಗೆ ಗರ್ಭಪಾತವು ಸುಲಭ ಹಾಗೂ ಸುರಕ್ಷಿತ ಮತ್ತು ನಾಲ್ಕೂವರೆ ತಿಂಗಳಿನವರೆಗೆ ಗರ್ಭಪಾತ ಕಾನೂನುಬದ್ಧವಾಗಿದೆ. ವಿಶೇಷ ಸಂದರ್ಭಗಳಲ್ಲಿ ಮಹಿಳೆಯು ಐದೂವರೆ ತಿಂಗಳಿನವರೆಗಿನ ಗರ್ಭಪಾತ ಸೇವೆಯನ್ನು ಕಾನೂನಾತ್ಮಕವಾಗಿ ಪಡೆಯಬಹುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಿ.ಸಿ ಮತ್ತು ಪಿ.ಎನ್.ಡಿ.ಟಿ ನೋಡಲ್ ಅಧಿಕಾರಿ ಡಾ. ದಿಲೀಪ್ ಡೋಂಗ್ರೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ರಾಜಶೇಖರ್ ಪಾಟೀಲ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಶಶಿಕಲಾ ಬಿ. ಚಿನ್ನೂರ್, ಶ್ರೀಮತಿ ಶಾಲುಬಾಯಿ, ಮಹೇಶ್ವರ್ ರೆಡ್ಡಿ, ಮುದಸ್ಸರ್ ಮುಂತಾದವರು ಉಪಸ್ಥಿತರಿದ್ದರು.























