
ತುಮಕೂರು, ಡಿ. ೨೦- ಯುವ ಜನರ ದೈಹಿಕ, ಬೌದ್ಧಿಕ, ಸಾಮಾಜಿಕ ಬೆಳವಣಿಗೆ ಉತ್ತೇಜಿಸುವುದು, ಸಮುದಾಯ ಸೇವೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಲು ಸಹಕಾರಿಯಾಗಿರುವ ರೋವರ್ಸ್ ಮತ್ತು ರೇಂಜರ್ಸ್‌ನಲ್ಲಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೆಬ್ಬೂರು ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಪ್ರೊ.ಡಿ.ಕೃಷ್ಣ ಸಲಹೆ ನೀಡಿದರು.
ತಾಲ್ಲೂಕಿನ ಹೆಬ್ಬೂರು ಸರ್ಕಾರಿ ಪದವಿ ಕಾಲೇಜಿನಲ್ಲಿ ಈ ಸಾಲಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೋವರ್ಸ್ ಮತ್ತು ರೇಂಜರ್ಸ್ ಎಂಬುದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸೀನಿಯರ್ ವಿಂಗ್ ಆಗಿದೆ. ೧೬ರಿಂದ ೨೫ ವರ್ಷದ ಕಾಲೇಜು ವಿದ್ಯಾರ್ಥಿಗಳಿಗೆ ಇರುವ ಒಂದು ಸ್ವಯಂ ಸೇವಾ ಮತ್ತು ಶಿಕ್ಷಣಾತ್ಮಕ ಚಳವಳಿಯಾಗಿದೆ ಎಂದು ಹೇಳಿದರು.
ರೋವರ್ಸ್ ಹುಡುಗರಿಗೆ ಮತ್ತು ರೇಂಜರ್ಸ್ ಹುಡುಗಿಯರಿಗೆ ಮೀಸಲಾಗಿದ್ದು ನಾಯಕತ್ವ, ಸಮಾಜ ಸೇವೆ, ಕೌಶಲ್ಯ ಅಭಿವೃದ್ಧಿ ಮತ್ತು ಜವಾಬ್ದಾರಿಯುತ ನಾಗರೀಕರನ್ನಾಗಿ ರೂಪಿಸುವುದರ ಮೇಲೆ ಗಮನ ಹರಿಸುತ್ತದೆ. ಇದು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ವೈಯಕ್ತಿಕ ಬೆಳವಣಿಗೆಯ ಜತೆಗೆ ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆಯನ್ನು ಮೂಡಿಸುವ ಒಂದು ಶಿಕ್ಷಣದ ಭಾಗವಾಗಿದೆ ಎಂದು ಹೇಳಿದರು.
ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಸಂಘಟಕ ಹೆಚ್.ಆರ್.ನವೀನ್‌ಕುಮಾರ್ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿ, ರೋವರ್ಸ್ ಮತ್ತು ರೇಂಜರ್ಸ್ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಜಿ.ಎಸ್.ರವೀಶ್ ಮಾತನಾಡಿ, ಶಿಸ್ತು, ಸಂಯಮ ಮೂಡಿಸುವ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಧ್ಯೇಯೋದ್ಧೇಶಗಳ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರುಗಳಾದ ಡಾ.ಶಿವರಾಜು, ಡಾ.ಎನ್.ಗೋವಿಂದರಾಜು, ಎಂ.ಎಸ್.ಜಗದೀಶ್, ಬಿ.ಎಸ್.ಮೋಹನ್‌ಕುಮಾರ್, ಕೆ.ಪಿ.ಮಧುಸೂದನ್, ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.


























