
ಬೆಂಗಳೂರು, ಜ. ೨: ಸಂಕ್ರಾಂತಿ ವೇಳೆಗೆ ಸರ್ಕಾರದ ಹೊಸ ಜಾಹಿರಾತು ನೀತಿ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಚೇರಿಯಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮತ್ತು ಮಾಹಿತಿ ಆಯುಕ್ತರಾದ ಪತ್ರಕರ್ತರಿಗೆ ಸನ್ಮಾನಿಸಿ ಮಾತನಾಡಿದ ಅವರು ಇಂದಿನ ವೇಗದ ಯುಗದಲ್ಲಿ ನೈತಿಕತೆ ಮತ್ತು ವೃತ್ತಿಧರ್ಮವನ್ನು ಎತ್ತಿಹಿಡಿಯುವುದು ಸವಾಲಿನ ಕೆಲಸ ಎಂದು ಅಭಿಪ್ರಾಯ ಪಟ್ಟರು.
ಇಂದು ಇಲ್ಲಿ ಸನ್ಮಾನಿತರಾಗುತ್ತಿರುವ ಐದೂ ಮಂದಿ ಪತ್ರಕರ್ತರಿಗೆ ಮತ್ತು ಇವರನ್ನು ಸನ್ಮಾನಿಸುತ್ತಿರುವ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಾನು ಮೊದಲಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಹಿರಿಯ ಮತ್ತು ಮಾದರಿ ಪತ್ರಕರ್ತರನ್ನು ಸನ್ಮಾನಿಸುವುದು ಕೇವಲ ಒಂದು ಶಿಷ್ಟಾಚಾರವಲ್ಲ, ಅದು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ’ಜಾಗೃತ ಕಣ್ಣು’ಗಳಿಗೆ ಸಲ್ಲಿಸುವ ಗೌರವವಾಗಿದೆ.
ಇಲ್ಲಿ ಸನ್ಮಾನಿತರಾಗುತ್ತಿರುವ ಪತ್ರಕರ್ತ ಸ್ನೇಹಿತರು ದಶಕಗಳ ಕಾಲ ಸಮಾಜದ ಏರಿಳಿತಗಳನ್ನು ಹತ್ತಿರದಿಂದ ಕಂಡಿದ್ದಾರೆ. ಗೂಗಲ್, ಜಿ-ಮೇಲ್, ವಾಟ್ಸಾಪ್ ನಂತಹ ತಂತ್ರಜ್ಞಾನವಿಲ್ಲದ ಕಾಲದಿಂದ ಹಿಡಿದು ಅಪಾರ ತಂತ್ರಜ್ಞಾನದ ಹಾವಳಿಯ ಕಾಲಘಟ್ಟದ ಎರಡೂ ಸಂದರ್ಭಗಳ ಪತ್ರಿಕೋದ್ಯಮಕ್ಕೂ ಸಾಕ್ಷಿಯಾಗಿರುವವರು ಎಂದು ಮೆಚ್ಚುಗೆ ಸೂಚಿಸಿದರು.
ತಂತ್ರಜ್ಞಾನ ಇಲ್ಲದಿದ್ದಾಗ ಸತ್ಯವನ್ನು ಹುಡುಕಿ ಹೊರತಂದ ಇವರ ಕಾಳಜಿ, ಪರಿಶ್ರಮ, ವೃತ್ತಿಪರತೆಗೆ ಸನ್ಮಾನವು ಒಂದು ರೀತಿಯ ಮಾನ್ಯತೆ ತಂದು ಕೊಟ್ಟಿದೆ.
ತಂತ್ರಜ್ಞಾನ ಇಲ್ಲದಿದ್ದಾಗಲೂ ಸತ್ಯದ ತೇರು ಎಳೆದ ಪತ್ರಕರ್ತರು, ಈಗ ತಂತ್ರಜ್ಞಾನದ ಯುಗದಲ್ಲೂ ಸತ್ಯ ಕಾಣಲು ಸಾಧ್ಯವಾಗದ ಯುವ ಪೀಳಿಗೆಗೆ ಮಾದರಿ ಮತಗತು ಪ್ರೇರಣೆ ಆಗಿದ್ದಾರೆ ಎಂದರು.
ಇಂದಿನ ವೇಗದ ಯುಗದಲ್ಲಿ ನೈತಿಕತೆ ಮತ್ತು ವೃತ್ತಿಧರ್ಮವನ್ನು ಎತ್ತಿಹಿಡಿಯುವುದು ಸವಾಲಿನ ಕೆಲಸ. ಹಿರಿಯರನ್ನು ಗೌರವಿಸುವುದರಿಂದ, ಉದಯೋನ್ಮುಖ ಪತ್ರಕರ್ತರಿಗೆ ಮೌಲ್ಯಾಧಾರಿತ ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಮತ್ತು ಸ್ಫೂರ್ತಿ ಮೂಡುತ್ತದೆ. ಈ ಅರ್ಥಪೂರ್ಣ ಕೆಲಸವನ್ನು ಕಾರ್ಯನಿರತ ಪತ್ರಕರ್ತರ ಸಂಘ ಮಾಡುತ್ತಿದೆ ಎಂದರು.
ರಾಜ್ಯೋತ್ಸವ ಪುರಸ್ಕೃತರಾದ ಸಿದ್ದರಾಜು, ಬಿ.ಎಂ.ಹನೀಫ್, ಶಾಂತಕುಮಾರ್ ಹಾಗೂ ಮಾಹಿತಿ ಆಯುಕ್ತರಾದ ಮಹೇಶ್ ವಾಳ್ವೇಕರ್, ವೆಂಕಟ್ ಸಿಂಗ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ್ , ಸೇರಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

























