
ಕೊರಟಗೆರೆ, ನ. ೨೯- ಸ್ವಂತ ಮಕ್ಕಳನ್ನು ಹೊಂದಿಲ್ಲದ ಪೋಷಕರಿಗೆ ಮಕ್ಕಳಿಲ್ಲ ಎಂಬ ಕೊರಗನ್ನು ನೀಗಿಸಿ ಜೀವನದಲ್ಲಿ ಉತ್ಸಾಹ ತುಂಬಲು ಮತ್ತು ಪೋಷಕರ ಜವಾಬ್ದಾರಿ ಸಿಗುವಂತೆ ಮಾಡುವುದು ದತ್ತು ಸ್ವೀಕಾರ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದ್ದು, ದತ್ತು ಸ್ವೀಕಾರ ಪದ್ಧತಿಯನ್ನು ಸರ್ಕಾರ ಕಾನೂನು ವ್ಯಾಪ್ತಿಗೆ ತಂದು ನಿಯಮಗಳನ್ನು ರೂಪಿಸಿದೆ ಎಂದು ತಹಶೀಲ್ದಾರ್ ಮಂಜುನಾಥ್ ಹೇಳಿದರು.
ಪಟ್ಟಣದಲ್ಲಿ ಬೆಂಗಳೂರು ಮಕ್ಕಳ ರಕ್ಷಣಾ ನಿದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತುಮಕೂರು ದಯಾಕಿರಣ ವಿಶೇಷ ದತ್ತು ಕೇಂದ್ರದ ಸಂಯುಕ್ತಾಶ್ರಯದಲ್ಲಿ ದತ್ತು ಮಾಸಾಚರಣೆ ೨೦೨೫ ಅರಿವು ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯಾವುದೇ ದಂಪತಿಗೆ ತಮ್ಮದೇ ಮಗು ಇರಬೇಕು, ಅದರ ಲಾಲನೆ ಪಾಲನೆ ಮಾಡಬೇಕು ಮಗುವಿನ ತುಂಟಾಟ ನೋಡಬೇಕು ವಂಶವನ್ನು ಮುಂದುವರಿಸಬೇಕು ಎಂಬುದು ಪ್ರತಿಯೊಬ್ಬ ಪೋಷಕರಿಗೂ ಆಸೆ ಇದ್ದು, ಕೆಲ ಪಂಥಿಗಳಿಗೆ ಪರಿಸ್ಥಿತಿ ಹಾಗೂ ಕಾರಣಾಂತರಗಳಿಂದ ಸ್ವಂತ ಮಕ್ಕಳನ್ನು ಹೊಂದುವ ಭಾಗ್ಯವೇ ಇಲ್ಲದ ಸಮಯದಲ್ಲಿ ಅವರ ಆಸೆ ಪೂರೈಸಿಕೊಳ್ಳಲು ಇರುವುದು ದತ್ತು ಸ್ವೀಕಾರ ಪದ್ದತಿ ಇದ್ದು ದತ್ತು ಪಡೆಯುವ ದಂಪತಿಗಷ್ಟೇ ಅಲ್ಲ ಅನಾಥ ಮಗುವೊಂದಕ್ಕೆ ಅಪ್ಪ-ಅಮ್ಮನ ಸಾಂಗತ್ಯ ಕಲ್ಪಿಸಲು ಈ ಪದ್ದತಿ ಸಹಕಾರಿ ದತ್ತು ಸ್ವೀಕಾರ ಎಂಬುದು ಪೌರಾಣಿಕ ಭಾರತದಿಂದಲೂ ಚಾಲ್ತಿಯಲ್ಲಿದೆ ಎಂದರು.
ದತ್ತು ಸ್ವೀಕಾರದಿಂದ ತಂದೆ ತಾಯಿಗಳ ಆಸೆ ಈಡೆರುವುದರೊಂದಿಗೆ ಅನಾಥ, ನಿರ್ಗತಿಕ ಮಕ್ಕಳಿಗೆ ಒಳ್ಳೆ ಕೌಟುಂಬಿಕ ವಾತಾವರಣ ಕಲ್ಪಿಸಿ ತಂದೆ-ತಾಯಿ ಪ್ರೀತಿ, ವಾತ್ಸಲ್ಯ, ರಕ್ಷಣೆ ಒದಗಿಸಿ ಅವರ ಮುಂದಿನ ಭವಿಷ್ಯ ರೂಪಿಸುವುದು, ಹಾಗೆಯೇ, ಸ್ವಂತ ಮಕ್ಕಳನ್ನು ಹೊಂದಿಲ್ಲದ ಪೋಷಕರಿಗೆ ಮಕ್ಕಳಿಲ್ಲ ಎಂಬ ಕೊರಗನ್ನು ನೀಗಿಸಿ ಜೀವನದಲ್ಲಿ ಉತ್ಸಾಹ ತುಂಬಲು ಮತ್ತು ಪೋಷಕರ ಜವಾಬ್ದಾರಿ ಸಿಗುವಂತೆ ಮಾಡುವುದು ದತ್ತು ಸ್ವೀಕಾರ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದ್ದು ಸರ್ಕಾರ ದತ್ತು ಸ್ವೀಕಾರ ಪದ್ದತಿಯನ್ನು ಕಾನೂನು ವ್ಯಾಪ್ತಿಗೆ ತಂದು ನಿಯಮಗಳನ್ನು ರೂಪಿಸಿದ್ದು ದತ್ತು ಪಡೆಯುವ ಪೋಷಕರು ಕಾನೂನು ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದರು.
ಜಾಥಾದಲ್ಲಿ ಕೊರಟಗೆರೆ ಸಿಪಿಐ ಅನಿಲ್, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಪವಿತ್ರ, ಸಿಡಿಪಿಓ ಸೇರಿದಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.




























