
ಯಾದಗಿರಿ: ಫೆ.೨೪:ಜಿಲ್ಲಾ ಕೇಂದ್ರದಲ್ಲೇ ಸರ್ಕಾರದ ಅನೇಕ ಕಟ್ಟಡಗಳು ನಿರುಪಯುಕ್ತವಾಗಿ ಬಾಗಿಲು ಮುಚ್ಚಿಕೊಂಡು ನಿಂತಿರುವಾಗ, ಪ್ರಮುಖ ಇಲಾಖೆಗಳು ಇನ್ನೂ ಖಾಸಗಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಆಡಳಿತಾತ್ಮಕ ವೈಪರಿತ್ಯದ ವಿರುದ್ಧ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಯಾದಗಿರಿ ಜಿಲ್ಲಾ ಘಟಕ ಗಂಭೀರ ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾಡಳಿತದ ಹಣಕಾಸು ಶಿಸ್ತನ್ನು ಪ್ರಶ್ನಿಸಿದೆ.
ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಸಂಘಟನೆಯ ಪದಾಧಿಕಾರಿಗಳು, “ಜನರ ಶ್ರಮದ ತೆರಿಗೆ ಹಣದಿಂದ ನಿರ್ಮಿಸಿದ ಸರ್ಕಾರಿ ಕಟ್ಟಡಗಳು ಖಾಲಿ ಬಿದ್ದಿದ್ದರೂ, ಅದೇ ಸಮಯದಲ್ಲಿ ಬಾಡಿಗೆ ರೂಪದಲ್ಲಿ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸುವುದು ಆಡಳಿತದ ಆರ್ಥಿಕ ದೌರ್ಬಲ್ಯ ಹಾಗೂ ಯೋಜನಾ ವೈಫಲ್ಯದ ಸ್ಪಷ್ಟ ಸೂಚನೆ” ಎಂದು ತೀವ್ರ ಕಿಡಿಕಾರಿದ್ದಾರೆ.
ಲಕ್ಷಾಂತರ ರೂಪಾಯಿ ಬಾಡಿಗೆ – ಸಾರ್ವಜನಿಕ ಧನದ ಭಾರ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ (ಗ್ರೇಡ್-೧) ಕಚೇರಿ, ಹಿರಿಯ ಉಪ ನೋಂದಣಾಧಿಕಾರಿ ಮತ್ತು ವಿವಾಹ ನೋಂದಣಾಧಿಕಾರಿ ಕಚೇರಿ, ಜಿಲ್ಲಾ ವಿಮಾ ಅಧಿಕಾರಿಗಳ ಕಚೇರಿ, ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಸಂಬAಧಿಸಿದ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಾರ್ಯಾಲಯ ಸೇರಿದಂತೆ ಹಲವು ಇಲಾಖೆಗಳು ಇನ್ನೂ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಬಾಡಿಗೆ ಪಾವತಿಯಾಗುತ್ತಿರುವುದು ಸರ್ಕಾರದ ಖಜಾನೆಗೆ ಅನಗತ್ಯ ಆರ್ಥಿಕ ಒತ್ತಡ ತಂದೊಡ್ಡುತ್ತಿದೆ ಎಂದು ವೇದಿಕೆ ಆರೋಪಿಸಿದೆ.
ಇದಕ್ಕೆ ವಿರುದ್ಧವಾಗಿ, ನಗರಸಭೆ ಮಳಿಗೆ ಸಂಕೀರ್ಣ ಹಾಗೂ ಹಳೆಯ ನ್ಯಾಯಾಲಯ ಕಟ್ಟಡದ ಅನೇಕ ಕೊಠಡಿಗಳು ಖಾಲಿ ಇರುವುದನ್ನು ಉದಾಹರಿಸಿ, ಲಭ್ಯವಿರುವ ಸರ್ಕಾರಿ ಮೂಲಸೌಕರ್ಯಗಳನ್ನು ಸದುಪಯೋಗಪಡಿಸಿಕೊಳ್ಳದಿರುವುದು ಆಡಳಿತದ ನಿರ್ಲಕ್ಷ್ಯಕ್ಕೆ ನಿದರ್ಶನ ಎಂದು ಅಭಿಪ್ರಾಯಪಟ್ಟಿದೆ.
“ಪ್ರತಿ ರೂಪಾಯಿಯೂ ಸಾರ್ವಜನಿಕರ ರಕ್ತ-ಬೆವರಿನ ಸಂಪಾದನೆ. ಅದನ್ನು ಸಂರಕ್ಷಿಸುವುದು ಕೇವಲ ಕರ್ತವ್ಯವಲ್ಲ, ಅದು ಆಡಳಿತದ ನೈತಿಕ ಬಾಧ್ಯತೆ. ಅನಾವಶ್ಯಕ ಬಾಡಿಗೆ ವೆಚ್ಚವನ್ನು ತಕ್ಷಣ ನಿಲ್ಲಿಸಿ, ಕಚೇರಿಗಳನ್ನು ಖಾಲಿ ಸರ್ಕಾರಿ ಕಟ್ಟಡಗಳಿಗೆ ಸ್ಥಳಾಂತರಿಸುವ ಮೂಲಕ ಆರ್ಥಿಕ ಶಿಸ್ತಿನ ಮಾದರಿ ನಿರ್ಮಿಸಬೇಕು,” ಎಂದು ಸಂಘಟನೆ ಒತ್ತಾಯಿಸಿದೆ.
ಈ ವಿಷಯದಲ್ಲಿ ತಕ್ಷಣ ಸ್ಪಷ್ಟ ಕ್ರಮ ಕೈಗೊಳ್ಳದಿದ್ದರೆ ಸಂಬAಧಿತ ಕಚೇರಿಗಳ ಮುಂದೆ ಧರಣಿ, ಪ್ರತಿಭಟನೆ, ಸಾರ್ವಜನಿಕ ಜಾಗೃತಿ ಅಭಿಯಾನ ಸೇರಿದಂತೆ ಹಂತ ಹಂತವಾಗಿ ಉಗ್ರ ಹೋರಾಟಗಳನ್ನು ಹಮ್ಮಿಕೊಳ್ಳುವುದಾಗಿ ವೇದಿಕೆ ಎಚ್ಚರಿಕೆ ನೀಡಿದೆ. ಈ ಸಂದರ್ಭದಲ್ಲಿ
ಜಿಲ್ಲಾಧ್ಯಕ್ಷ ವಿಜಯಕುಮಾರ ಮುಷ್ಠೂರು ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಉಪಾಧ್ಯಕ್ಷ ಶಿವಕುಮಾರ ಮೇದಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಂಗಾರಪ್ಪ ನಾಯಕ ಸೇರಿದಂತೆ ಹಲವಾರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಾರ್ವಜನಿಕ ಹಣಕಾಸಿನ ಸಮರ್ಪಕ ಬಳಕೆ ಮತ್ತು ಆಡಳಿತಾತ್ಮಕ ಪಾರದರ್ಶಕತೆಯ ಕುರಿತ ಈ ಪ್ರಶ್ನೆ ಇದೀಗ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಗಿದೆ.






























