
ಬೀದರ್;ಮೇ.28: ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಮೀಸಲಿಟ್ಟಿರುವ ಅನುದಾನ ಹೊರತುಪಡಿಸಿ ಬೀದರ್ ಜಿಲ್ಲೆಗೆ ಹೆಚ್ಚುವರಿಯಾಗಿ 250 ಕೋಟಿ ಹಂಚಿಕೆ ಮಾಡಲಾಗಿದೆ’ ಎಂದು ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಪೌರಾಡಳಿತ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನನ್ನ ಇಲಾಖೆಯ ಅನುದಾನ ಹಾಗೂ ಮುಖ್ಯಮಂತ್ರಿಗೆ ಸಲ್ಲಿಸಿದ ಕೋರಿಕೆಯಿಂದ ಈ ವಿಶೇಷ ಹೆಚ್ಚುವರಿ ಅನುದಾನ ಜಿಲ್ಲೆಗೆ ಮಂಜೂರಾಗಿದೆ. ಅಮೃತ್ ಯೋಜನೆಗೆ ?100 ಕೋಟಿ, ಎಸ್‍ಎಸ್ಸಿ/ಎಸ್‍ಟಿಎಸ್‍ಸಿಪಿ, ಎಸ್‍ಎಫ್‍ಸಿ ಅಡಿ ?40 ಕೋಟಿ, ನಗರೋತ್ಥಾನಕ್ಕೆ ?40 ಕೋಟಿ ಸೇರಿದಂತೆ ಇತರೆ ಅನುದಾನ ಸೇರಿದೆ ಎಂದರು.
ಬೀದರ್‍ನ ಪಾಪನಾಶ, ಗೋರನಳ್ಳಿ ಸೇರಿದಂತೆ ಇತರೆ ಕೆರೆಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಇದೆ. ಅದೇ ರೀತಿ ಬೀದರ್ ಓಲ್ಡ್ ಸಿಟಿ ಸುತ್ತಮುತ್ತಲಿನ ಕಂದಕ ಕೂಡ ಸ್ವಚ್ಛಗೊಳಿಸಲಾಗುವುದು. ಬೀದರ್ ನಗರವೊಂದರಲ್ಲೇ 20 ಉದ್ಯಾನಗಳನ್ನು ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಲಾಗಿದೆ. ನಗರದ ನೌಬಾದ್, ಮೈಲೂರ್ ಕ್ರಾಸ್ ಹಾಗೂ ಓಲ್ಡ್ ಸಿಟಿಯಲ್ಲಿ ತಲಾ ಒಂದು ಹೊಸ ಇಂದಿರಾ ಕ್ಯಾಂಟೀನ್ ಆರಂಭಿಸಲಾಗುವುದು ಎಂದು ವಿವರಿಸಿದರು.
ಈಗಾಗಲೇ ಜಿಲ್ಲೆಯಲ್ಲಿರುವ ಉದ್ಯಾನಗಳ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ಎಲ್ಲೆಲ್ಲಿ ಒತ್ತುವರಿಯಾಗಿದೆಯೋ ಅದನ್ನು ತೆರವುಗೊಳಿಸಲಾಗುವುದು. ಜಿಲ್ಲೆಯಾದ್ಯಂತ ನಡೆಯುತ್ತಿರುವ ಎಲ್ಲ ಕಾಮಗಾರಿಗಳನ್ನು ಮೂರನೇ ಪಕ್ಷದ ಮೂಲಕ ಪರೀಕ್ಷಿಸಲಾಗುತ್ತಿದೆ. ಎಲ್ಲಾದರೂ ಕಳಪೆಯಾದರೆ ಕ್ರಮ ಕೈಗೊಳ್ಳಲಾಗುವುದು. ನಗರ ದಿನೇ ದಿನೇ ಬೆಳೆಯುತ್ತಿದೆ. ಹೊಸ ಹೊಸ ಕಾಲೊನಿಗಳು ಆಗುತ್ತಿವೆ. ಒಂದುವೇಳೆ ಯಾವುದೇ ಕೆಲಸಗಳು ಆಗಿರದಿದ್ದರೆ ಜನರು ಹೇಗೆ ನಡೆದಾಡುತ್ತಿದ್ದರು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಮರು ಪ್ರಶ್ನೆ ಹಾಕಿದರು.
‘ಖಾತಾ ವಿತರಣೆ; ಸಿಎಂ ನೇರ ನಿಗಾ’
‘ರಾಜ್ಯದಾದ್ಯಂತ ನಡೆಯುತ್ತಿರುವ ‘ಎ’ ಮತ್ತು ‘ಬಿ’ ಖಾತಾಗಳ ವಿತರಣೆಯ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೇರ ನಿಗಾ ವಹಿಸಿದ್ದಾರೆ. ಆದಕಾರಣ ವಿಳಂಬವಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಒಂದುವೇಳೆ ಎಲ್ಲಾದರೂ ಅನಗತ್ಯ ವಿಳಂಬವಾಗುತ್ತಿದ್ದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವ ರಹೀಂ ಖಾನ್ ಸ್ಪಷ್ಟಪಡಿಸಿದರು. ಖಾತಾ ಮಾಡಿಕೊಳ್ಳುವವರು ‘ಸೇಲ್ ಡೀಡ್’ ಕಡ್ಡಾಯವಾಗಿ ಕೊಡಬೇಕೆಂಬ ಷರತ್ತು ಹಾಕಿರುವುದರಿಂದ ಕೆಲವರಿಗೆ ಸ್ವಲ್ಪ ಸಮಸ್ಯೆಯಾಗುತ್ತಿದೆ. ಕೆಲವರು ಸೇಲ್ ಡೀಡ್ ಇಲ್ಲದೇ ಆಸ್ತಿ ಖರೀದಿಸಿರುವುದೇ ಸಮಸ್ಯೆ ಮುಖ್ಯ ಕಾರಣ ಎಂದರು.
ಮಳೆಗಾಲ ಎದುರಿಸಲು ಸಿದ್ಧತೆಗೆ ಸೂಚನೆ ‘ಈ ವರ್ಷ ಅವಧಿಗೂ ಮುನ್ನವೇ ಮುಂಗಾರು ಮಳೆ ಪ್ರವೇಶಿಸಿದೆ. ಮಳೆಗಾಲ ಎದುರಿಸಲು ಎಲ್ಲ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ’ ಎಂದು ಸಚಿವ ರಹೀಂ ಖಾನ್ ತಿಳಿಸಿದರು. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರೊಂದಿಗೆ ಬೀದರ್ ನಗರದಲ್ಲಿ ಸುತ್ತಾಡಿ ಸಮಸ್ಯೆ ಪರಿಶೀಲಿಸಿದ್ದೇನೆ. ಮತ್ತೆ ಮತ್ತೆ ಈ ರೀತಿ ರೌಂಡ್ಸ್ ಹಾಕಿ ಸಮಸ್ಯೆ ತಿಳಿದು ಅವುಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.