Home ಜಿಲ್ಲೆ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವ್ಯಸನಮುಕ್ತ ಭಾರತ ಅಭಿಯಾನ

ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವ್ಯಸನಮುಕ್ತ ಭಾರತ ಅಭಿಯಾನ

ಬೀದರ್, ಫೆ.೧೪: ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರದಲ್ಲಿ ವ್ಯಸನಮುಕ್ತ ಭಾರತ ಅಭಿಯಾನ ಅಂಗವಾಗಿ ಮಾದಕ ವಸ್ತುಗಳ ವಿರುದ್ಧ ತಿಳುವಳಿಕಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರ, ಬ್ರಹ್ಮಕುಮಾರಿs, ಬೀದರ ಹಾಗೂ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬ್ರಹ್ಮಕುಮಾರಿ ಪಿಯುಷ್, ನಿರ್ದೇಶಕರು, ಬ್ರಹ್ಮಕುಮಾರೀಸ್, ನವದೆಹಲಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದುಶ್ಚಟಗಳು ವ್ಯಕ್ತಿಯ ಬದುಕು ಹಾಗೂ ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ಗಂಭೀರ ಪರಿಣಾಮ ಬೀರುತ್ತವೆ ಎಂದು ತಿಳಿಸಿದರು. ಮಾದಕ ವಸ್ತುಗಳ ಸೇವನೆ ವ್ಯಕ್ತಿಯ ಮೆದುಳು, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಮಾರಕವಾಗಿದ್ದು, ಸಾಮಾಜಿಕ ಜೀವನಕ್ಕೂ ಅಪಾಯಕಾರಿಯಾಗಿದೆ ಎಂದರು.
ಆರAಭದಲ್ಲಿ ಕುತೂಹಲ ಅಥವಾ ಸ್ನೇಹಿತರ ಒತ್ತಡದಿಂದ ಮದ್ಯ ಅಥವಾ ಕಡಿಮೆ ಬೆಲೆಗೆ ಸಿಗುವ ಪಾನ್ ವಸ್ತುಗಳ ಸೇವನೆ ಪ್ರಾರಂಭವಾಗಿ, ನಂತರ ಗಾಂಜಾ, ಅಫೀಮು, ಕೊಕೇನ್ ಮುಂತಾದ ಮಾರಕ ವ್ಯಸನಗಳಿಗೆ ದಾರಿ ಮಾಡಿಕೊಡುತ್ತದೆ. ಇವು ಮೆದುಳಿನಲ್ಲಿ ಬದಲಾವಣೆ ತಂದು ವ್ಯಕ್ತಿಯನ್ನು ಮತ್ತಷ್ಟು ಸೇವನೆಗೆ ಪ್ರೇರೇಪಿಸಿ ಕೊನೆಗೆ ವ್ಯಸನಿಯಾಗಿಸುತ್ತದೆ ಎಂದು ಅವರು ಎಚ್ಚರಿಸಿದರು. ವ್ಯಸನವು ಅಪರಾಧ ಕೃತ್ಯಗಳು ಹಾಗೂ ಅಪಘಾತಗಳಿಗೆ ಕಾರಣವಾಗುತ್ತದೆ ಎಂದು ತಿಳಿಸಿ, “ವ್ಯಸನ ಮುಕ್ತ ಸಮಾಜ ನಿರ್ಮಾಣ ವಿದ್ಯಾರ್ಥಿಗಳ ಧ್ಯೇಯವಾಗಲಿ” ಎಂದು ಕರೆ ನೀಡಿದರು.
ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಯೋಜನಾಧಿಕಾರಿ ಡಾ. ಚನ್ನಪ್ಪಗೌಡ ಬಿರಾದಾರ ಮಾತನಾಡಿ, ಮಾದಕ ದ್ರವ್ಯಗಳ ವಿತರಣೆ ಜಾಲವನ್ನು ಕಾನೂನಿನ ಸಹಾಯದಿಂದ ಮಟ್ಟಹಾಕಲು ವಿದ್ಯಾರ್ಥಿಗಳು ಸಹಕರಿಸಬೇಕು. ವ್ಯಸನದ ಮಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ, ಯುವಜನತೆ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಮಹಾವಿದ್ಯಾಲಯದ ಪ್ರಭಾರಿ ಡೀನ್ ಡಾ. ಆರ್.ಜಿ. ಬಿಜೂರಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಮಲು ಸೇವನೆಯನ್ನು ಫ್ಯಾಷನ್ ಎಂದು ಭಾವಿಸುವ ಯುವಕರು ಅದರ ದುಷ್ಪರಿಣಾಮಗಳನ್ನು ಅರಿಯಬೇಕು. ತಿಳುವಳಿಕಾ ತರಗತಿಗಳ ಮೂಲಕ ಜಾಗೃತಿ ಮೂಡಿಸಿ, ಉತ್ತಮ ಹವ್ಯಾಸಗಳನ್ನು ಬೆಳೆಸಿ, ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎನ್.ಎಸ್.ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ. ಪೃಥ್ವಿರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಪ್ರವೀಣ್ ಎಂ.ಕೆ. ವಂದಿಸಿದರು. ಮಹಾವಿದ್ಯಾಲಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.