Home ಜಿಲ್ಲೆ ಬೆಂಗಳೂರು ವಿಟ್ಟಸಂದ್ರ ಅಕ್ರಮ ತ್ಯಾಜ್ಯ ವಿಲೇವಾರಿ ತಡೆಗೆ ಕ್ರಮ

ವಿಟ್ಟಸಂದ್ರ ಅಕ್ರಮ ತ್ಯಾಜ್ಯ ವಿಲೇವಾರಿ ತಡೆಗೆ ಕ್ರಮ

ಬೆಂಗಳೂರು, ಜೂ.೯-ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಬೇಗೂರು ಹೋಬಳಿಯ ವಿಟ್ಟಸಂದ್ರ ಗ್ರಾಮದಲ್ಲಿರುವ ಪಾಲಿಕೆಯ ಕಸ ವರ್ಗಾವಣೆ ಕೇಂದ್ರಕ್ಕೆ ಅಪರ ಆಯುಕ್ತ ಡಾ. ನವೀನ್ ಕುಮಾರ್ ರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸರ್ಕಾರಿ ಜಾಗದ ಸರ್ವೇ, ಅಕ್ರಮ ತ್ಯಾಜ್ಯ ವಿಲೇವಾರಿ ತಡೆ ಹಾಗೂ ಕಾಂಪೋಸ್ಟ್ ಕೇಂದ್ರ ಸ್ಥಾಪನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.


ವಿಟ್ಟಸಂದ್ರ ಗ್ರಾಮದಲ್ಲಿ ಸುಮಾರು ೬೫ ಎಕರೆ ಸರ್ಕಾರಿ ಜಾಗವಿದ್ದು, ಅದರಲ್ಲಿ ೪ ಎಕರೆ ಪ್ರದೇಶವನ್ನು ಕಸ ವರ್ಗಾವಣೆ ಕೇಂದ್ರಕ್ಕಾಗಿ ಗುರುತಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಪ್ರದೇಶಕ್ಕೆ ಗಡಿ ಗುರುತಿಸಿ ತಕ್ಷಣ ಸರ್ವೇ ಕಾರ್ಯ ಆರಂಭಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.


ಪರಿಶೀಲನೆ ವೇಳೆ ಕಸ ವರ್ಗಾವಣೆ ಕೇಂದ್ರದ ಸುತ್ತಮುತ್ತ ಹೂಳು ಹಾಗೂ ವಾಣಿಜ್ಯ ತ್ಯಾಜ್ಯವನ್ನು ಅನಧಿಕೃತವಾಗಿ ಸುರಿಸಿರುವುದು ಗಮನಕ್ಕೆ ಬಂದಿದ್ದು, ಇಂತಹ ಅಕ್ರಮ ಚಟುವಟಿಕೆಗಳನ್ನು ತಡೆಯಲು ಸ್ಥಳಕ್ಕೆ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಪರ ಆಯುಕ್ತರು ಸೂಚಿಸಿದರು.


ಇದೇ ವೇಳೆ ಕಸ ವರ್ಗಾವಣೆ ಕೇಂದ್ರದಲ್ಲಿ ಆಧುನಿಕ ಪ್ಲಾಂಟ್ ಹಾಗೂ ಕಾಂಪೋಸ್ಟ್ ಸೆಂಟರ್ ನಿರ್ಮಾಣಕ್ಕೆ ಸುಮಾರು ೨ ಎಕರೆ ಜಾಗದ ಅಗತ್ಯವಿದ್ದು, ಅದಕ್ಕಾಗಿ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಕಾಂಪೋಸ್ಟ್ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ತ್ವರಿತವಾಗಿ ಅಗತ್ಯ ಕ್ರಮಗಳನ್ನು ಪೂರ್ಣಗೊಳಿಸುವಂತೆ ಅಪರ ಆಯುಕ್ತರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಡಿಜಿಎಂ ತನುಜಾ, ಎಜಿಎಂ ನೀಲಕಂಠ, ಶ್ವೇತಾ, ಎಇಇ ವೀರೇಶ್ ಹಲದಕಟ್ಟಿ, ಸಹಾಯಕ ಕಂದಾಯ ಅಧಿಕಾರಿ ನಾಗಭೂಷಣ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.