ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣಕ್ಕೆ ಕ್ರಮ: ಕೆ.ಹೆಚ್‌ಎಂ

ದೇವನಹಳ್ಳಿ, ಬೆಂ.ಗ್ರಾ ನ. ೧೦:ಜಿಲ್ಲಾಡಳಿತ ಭವನದ ಆವರಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.


ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದೇವನಹಳ್ಳಿ ಟೌನ್ ನ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ’ದಾಸಶ್ರೇಷ್ಠ ಕನಕದಾಸರ ೫೩೮ನೇ ಜಯಂತ್ಯುತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಸಂಗೊಳ್ಳಿ ರಾಯಣ್ಣ ಪ್ರತಿಮೆ ಜೊತೆಗೆ ತಾಲ್ಲೂಕಿನಲ್ಲಿ ಕನಕ ಭವನ ನಿರ್ಮಾಣ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಸ್ಟೆಲ್ ನಿರ್ಮಾಣಕ್ಕೂ ಬೇಗ ಕ್ರಮ ವಹಿಸಲಾಗುವುದು ಎಂದರು.


೧೨ನೇ ಶತಮಾನದಲ್ಲಿ ಸಮಾಜ ಸುಧಾರಣೆಗೆ ಶ್ರಮಿಸಿದ ಬಸವಣ್ಣನವರಂತೆ, ೧೫ನೇ ಶತಮಾನದಲ್ಲಿ ಸಮಾಜ ಪರಿವರ್ತನೆಗೆ ಶ್ರಮಿಸಿದವರಲ್ಲಿ ಮಹಾನ್ ಸಂತರಾದ ಕನಕದಾಸರು ಪ್ರಮುಖರು. ಸಮಾಜದ ಪರಿವರ್ತನೆ ಹಾಗೂ ಮೇಲು ಕೀಳು ಎಂಬ ಮನೋಭಾವನೆ ಹೋಗಲಾಡಿಸಲು ದಾಸಶ್ರೇಷ್ಠ ಕನಕದಾಸ ಕೀರ್ತನೆಗಳು ಸಾರ್ವಕಾಲಿಕ ಪ್ರಸ್ತುತ ಎಂದರು.


ಪ್ರತಿಯೊಂದು ಸಮುದಾಯದವರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಿ, ಉನ್ನತ ಹುದ್ದೆಗಳನ್ನು ಪಡೆದುಕೊಂಡು ಸಮುದಾಯದ ಸರ್ವೋತೋಮುಖ ಏಳ್ಗೆ ಹೊಂದಬೇಕು ಎಂದು ಸಚಿವರು ಹೇಳಿದರು.


ಜಾನಪದ ಲೋಕದ ಸಂಶೋದಕರಾದ ಡಾ. ರವಿ ಯು.ಎಂ. ಅವರು ಉಪನ್ಯಾಸ ನೀಡಿ, ೧೫ನೇ ಶತಮಾನದಲ್ಲಿ ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಸಾಮರಸ್ಯದ ಸಂದೇಶ ಬಿತ್ತಿ, ಸಮಾಜ ಪರಿವರ್ತನೆಗೆ ಶ್ರಮಿಸಿದ ದಾಸಶ್ರೇಷ್ಠ ಕನಕದಾಸರು. ಅವರ ಕೀರ್ತನೆಗಳು ಎಂದೆಂದಿಗೂ ಸಾರ್ವಕಾಲಿಕ ಪ್ರಸ್ತುತವಾಗಿವೆ ಎಂದು ಹೇಳಿದರು.


ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.


ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ದೇವನಹಳ್ಳಿ ಟೌನ್ ನ ಬೈಪಾಸ್ ನಲ್ಲಿರುವ ಕನಕದಾಸರ ವೃತ್ತದಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನದವರೆಗೆ ವಿವಿಧ ಕಲಾತಂಡಗಳೊಂದಿಗೆ ಕನಕದಾಸರ ಉತ್ಸವ ಪಲ್ಲಕ್ಕಿಗಳ ಮೆರವಣಿಗೆ ನಡೆಸಲಾಯಿತು.


ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಜಿಲ್ಲಾ ಪಂಚಾಯತ್ ಸಿಇಒ ಡಾ. ಕೆ.ಎನ್ ಅನುರಾಧ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಬಿ. ರಾಜಣ್ಣ,ಬಯಪ್ಪ ಅಧ್ಯಕ್ಷ ವಿ. ಶಾಂತಕುಮಾರ, ಕನ್ನಡ ಚಲನಚಿತ್ರ ನಟ ಧ್ರುವ ಸರ್ಜಾ, ತಾಲ್ಲೂಕು ಅಧ್ಯಕ್ಷ ಜಗನ್ನಾಥ್, ದೇವನಹಳ್ಳಿ ಪುರಸಭೆ ಅಧ್ಯಕ್ಷ ಡಿ.ಎಂ ಮುನಿಕೃಷ್ಣಪ್ಪ, ಉಪಾಧ್ಯಕ್ಷರಾದ ಜಿ.ಎ. ರವೀಂದ್ರ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ದೇವನಹಳ್ಳಿ ತಹಶೀಲ್ದಾರ್ ಅನಿಲ್, ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷರು, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷರು, ಕುರುಬರ ಸಂಘದ ಯುವ ಘಟಕ ಅಧ್ಯಕ್ಷರು ಸೇರಿದಂತೆ ಜಿಲ್ಲಾಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಮುದಾಯದ ಮುಖಂಡರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.