
ಕಲಬುರಗಿ,ನ.28-ಹಗಲು ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿ 4 ಮನೆ ಕಳ್ಳತನ ಪ್ರಕರಣ ಪತ್ತೆ ಹಚ್ಚಿ 5 ಲಕ್ಷ ರೂಪಾಯಿ ಮೌಲ್ಯದ 50 ಗ್ರಾಂ.ಬಂಗಾರದ ಆಭರಣಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಖದೀರ್ ಚೌಕ್‍ನ ಮಹ್ಮದ್ ಸಮೀರ್ ತಂದೆ ಶೇಖ್ ಮುನಿರೋದ್ದೀನ್ (22) ಎಂಬಾತನನ್ನು ಬಂಧಿಸಿ 4 ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ 5 ಲಕ್ಷ ರೂಪಾಯಿ ಮೌಲ್ಯದ 50 ಗ್ರಾಂ.ಬಂಗಾರದ ಆಭರಣ ವಶ ಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.
ಹಗಲು ಹೊತ್ತಿನಲ್ಲಿ ಮನೆ ಬೀಗ ಮುರಿದು ಬಂಗಾರ ಕಳ್ಳತನ ಮಾಡಲಾಗಿದೆ ಎಂದು ನಗರದ ಚಿಂಚೋಳಿ ಲೇಔಟ್‍ನ ನಿವಾಸಿ ಮಲ್ಲಿಕಾರ್ಜುನ ಕಲಶೆಟ್ಟಿ ಅವರು ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಗೆ ನಗರ ಪೊಲೀಸ್ ಆಯುಕ್ತರು, ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ನಾಯಕ್, ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶರಣಬಸಪ್ಪ ಸುಬೇದಾರ ಅವರ ಮಾರ್ಗದರ್ಶನದಲ್ಲಿ ರಾಘವೇಂದ್ರ ನಗರ ಪೊಲೀಸ್ ಠಾಣೆ ಪಿಐ ಎ.ವಾಜೀದ್ ಪಟೇಲ್ ಅವರ ನೇತೃತ್ವದಲ್ಲಿ ಪಿಎಸ್‍ಐ ಸುಭಾಷಚಂದ್ರ, ಎಎಸ್‍ಐ ಮಲ್ಲಿಕಾರ್ಜುನ ಜಾನಿ, ಸಿಬ್ಬಂದಿಗಳಾದ ಮಲ್ಲನಗೌಡ, ಉಮೇಶ, ಶರಣಬಸವ, ಅರೇಶ, ಪ್ರಶಾಂತ, ಬಸವರಾಜ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಆರೋಪಿ ಮಹ್ಮದ್ ಸಮೀರ್‍ನನ್ನು ಬಂಧಿಸಿ ಚಿನ್ನಾಭರಣ ವಶ ಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಅವರು ವಿವರಿಸಿದರು.
ಹಗಲು ಮನೆಗಳ್ಳತನ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಅವರು ಶ್ಲಾಘಿಸಿದರು.






















