
ಬೆಂಗಳೂರು, ಜೂ. ೯- ಗೃಹ ಖಾತೆಯಿಂದ ತಮ್ಮನ್ನು ಬದಲಿಸುವಂತೆ ಮುಖ್ಯಮಂತ್ರಿಗಳಿಗೆ ನಾನು ಕೇಳಿದ್ದೇನೆ ಎಂಬುದು ಸತ್ಯಕ್ಕೆ ದೂರವಾದದ್ದು. ಈ ರೀತಿ ನಾನು ಕೇಳಿಲ್ಲ. ಇದು ಸುಳ್ಳು ಸುದ್ದಿ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿಂದು ಕೇಂದ್ರ ಸಚಿವ ವಿ. ಸೋಮಣ್ಣನವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಈ ರೀತಿ ಸುದ್ದಿ ಕೊಟ್ಟರೋ ಗೊತ್ತಿಲ್ಲ. ಮಾಧ್ಯಮಗಳು ಈ ಸುದ್ದಿಯನ್ನು ಪ್ರಕಟಿಸುವ ಮುನ್ನ ನನ್ನನ್ನು ಕೇಳಬಹುದಿತ್ತು. ಈ ಸುದ್ದಿಗಳನ್ನು ಹಾಕುವ ಮೂಲಕ ನನ್ನ ವ್ಯಕ್ತಿತ್ವವನ್ನು ಕೊಲೆ ಮಾಡಲಾಗಿದೆ. ನಾನು ಗೃಹ ಖಾತೆಯನ್ನು ಬದಲಿಸುವಂತೆ ಮುಖ್ಯಮಂತ್ರಿಗಳನ್ನು ಕೇಳಿಲ್ಲ, ಇದು ಸುಳ್ಳು ಎಂದರು.
ಬೆಂಗಳೂರಿನಲ್ಲಿ ಕಾಲ್ತುಳಿತ ದುರಂತ ನಡೆದಿದೆ ನಿಜ. ಇದು ನಡೆಯಬಾರದಿತ್ತು. ನಮಗೂ ನೋವಾಗಿದೆ. ಹಾಗೆಂದು ಹೇಡಿತನದಿಂದ ಪಲಾಯನ ಮಾಡುವ ಪ್ರಶ್ನೆಯೇ ಇಲ್ಲ. ಸವಾಲಿನಿಂದ ಎಲ್ಲವನ್ನು ಎದುರಿಸುವ ಸಮಯ ಇದು ಎಂದು ಅವರು ಹೇಳಿದರು.
ಮಾಧ್ಯಮ ಮಿತ್ರರ ಜತೆ ನಾನು ಮೊದಲಿನಿಂದಲೂ ಸಂಯಮದಿಂದ ನಡೆದುಕೊಂಡಿದ್ದೇನೆ. ಮಾಧ್ಯಮ ಮಿತ್ರರು ಏಕೆ ಈ ರೀತಿ ಸುದ್ದಿಗಳನ್ನು ಪ್ರಸಾರ ಮಾಡುತ್ತಾರೋ ಗೊತ್ತಿಲ್ಲ. ಪ್ರಸಾರ ಮಾಡುವ ಮೊದಲು ಗೃಹ ಖಾತೆ ಬದಲಿಸುವಂತೆ ಕೇಳಿದ್ದೀರಾ ಎಂದು ನನ್ನನ್ನು ಒಂದು ಮಾತು ಕೇಳಿದ್ದರೆ ನಾನು ಸ್ಪಷ್ಟನೆ ಕೊಡುತ್ತಿದ್ದೆ. ಅದು ಬಿಟ್ಟು ಸುಳ್ಳು ಸುದ್ದಿ ಹಾಕಿ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವುದು ಶೋಭೆ ತರುವುದಿಲ್ಲ ಎಂದರು.
ನಾನು ಮಾಧ್ಯಮ ಮಿತ್ರರಿಗೆ ಸದಾ ಆಭಾರಿಯಾಗಿದ್ದೇನೆ. ಈ ರೀತಿಯ ಸುದ್ದಿ ಪ್ರಕಟಿಸುವ ಮೊದಲು ನನ್ನನ್ನು ಒಂದು ಮಾತು ಕೇಳ ಬಹುದಿತ್ತು. ನನಗೂ ಕ್ಷೇತ್ರದ ಮತದಾರರಿದ್ದಾರೆ, ಅಭಿಮಾನಿಗಳಿದ್ದಾರೆ, ಬೆಂಬಲಿಗರಿದ್ದಾರೆ. ಅವರೆಲ್ಲಾ ನನ್ನ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ. ನಾನು ಸವಾಲು ಎದುರಿಸುತ್ತೇನೆಯೇ ಹೊರತು ಹೆದರಿ ಓಡಿ ಹೋಗುವ ಹೇಡಿಯಲ್ಲ ಎಂದು ಅವರು ಹೇಳಿದರು.
ಹೈಕಮಾಂಡ್‌ಗೆ ಮಾಹಿತಿ
ಬೆಂಗಳೂರಿನ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿ ತಮ್ಮ ಜತೆ ಮಾತನಾಡಿದರು ಎಂಬ ಸುದ್ದಿಗಳನ್ನು ತಳ್ಳಿ ಹಾಕಿದ ಅವರು, ಹೈಕಮಾಂಡ್ ನಾಯಕರು ನಾನು ಸೇರಿದಂತೆ ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರು ಎಲ್ಲರಿಗೂ ದೂರವಾಣಿ ಕರೆ ಮಾಡಿ ಮಾತನಾಡುತ್ತಾರೆ. ಕಾಲ್ತುಳಿತ ಪ್ರಕರಣದ ಬಗ್ಗೆ ಪಕ್ಷದ ವರಿಷ್ಠರು ದೂರವಾಣಿ ಮಾಡಿ ಮಾಹಿತಿ ಕೇಳಿದ್ದರು. ಅವರಿಗೂ ಮಾಹಿತಿ ಒದಗಿಸಿದ್ದೇನೆ. ಅವರಿಗೆ ಇಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಏನಾಗಿದೆಯೋ ಎಂಬ ಆತಂಕವಿದೆ. ಹಾಗಾಗಿ ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ದೂರವಾಣಿ ಕರೆ ಮಾಡಿ ಮಾಹಿತಿ ಕೇಳುವುದು ಸಹಜ. ಆ ರೀತಿ ನನಗೂ ದೂರವಾಣಿ ಮಾಡಿದ್ದರು, ಮಾಹಿತಿಯನ್ನ ಕೊಟ್ಟಿದ್ದೇನೆ.
ರಾಹುಲ್‌ಗಾಂಧಿಯವರು ದೂರವಾಣಿ ಕರೆ ಮಾಡಿದ್ದರು ಎಂಬುದು ಸುಳ್ಳು. ಹಾಗೆಯೇ ನನಗೆ ಹೈಕಮಾಂಡ್ ದೆಹಲಿಗೆ ಬರುವಂತೆ ಸೂಚಿಸಿದೆ ಎಂಬುದು ಸುಳ್ಳು ಎಂದು ಪರಮೇಶ್ವರ್ ಹೇಳಿದರು.
ಎನ್‌ಐಗೆ ತನಿಖೆ: ಪತ್ರ ಬಂದಿದೆ
ಮಂಗಳೂರಿನ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸುವಂತೆ ಕೇಂದ್ರ ಗೃಹ ಸಚಿವಾಲಯದಿಂದ ಪತ್ರ ಬಂದಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಒಂದು ತೀರ್ಮಾನ ಮಾಡುತ್ತೇವೆ ಎಂದು ಅವರು ಹೇಳಿದರು.
ಎನ್‌ಐಎ ತನಿಖೆಗೆ ಯಾರು ಕೋರಿದ್ದಾರೋ ಗೊತ್ತಿಲ್ಲ. ಆದರೂ ಕೇಂದ್ರ ಗೃಹ ಸಚಿವಾಲಯದಿಂದ ಎನ್‌ಐಎ ತನಿಖೆಗೆ ಪತ್ರ ಬಂದಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ನನಗೆ ತಿಳಿಸಿದ್ದಾರೆ. ಈ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿ ಒಂದು ಸೂಕ್ತ ತೀರ್ಮಾನ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಪ್ರತಿಕ್ರಿಯೆ ಇಲ್ಲ
ಬೆಂಗಳೂರಿನ ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ವಿಧಾನಸೌಧದ ಮುಂದೆ ಕಾರ್ಯಕ್ರಮ ನಡೆಸುವುದು ಬೇಡ ಎಂದು ವಿಧಾನಸೌಧದ ಭದ್ರತಾ ವಿಭಾಗದ ಡಿಸಿಪಿ ಸರ್ಕಾರಕ್ಕೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಈ ಬಗ್ಗೆ ಈಗ ನ್ಯಾ. ಮೈಕಲ್ ಖುನ್ಹಾ ಅವರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯುತ್ತಿದೆ. ತನಿಖೆ ನಡೆಯುತ್ತಿರುವಾಗ ನಾವು ಪ್ರತಿಕ್ರಿಯೆ ನೀಡುವುದರಿಂದ ತನಿಖೆಯ ಮೇಲೆ ಪರಿಣಾಮ ಬೀರಿ ತನಿಖೆಯ ದಿಕ್ಕನ್ನೇ ಬದಲಿಸುವ ಸಾಧ್ಯತೆ ಇರುತ್ತದೆ. ಜತೆಗೆ ಸಬ್‌ಜ್ಯೂಡಿಸ್ ಆಗುತ್ತದೆ. ಹಾಗಾಗಿ ಈ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಎಂದರು.
ಬಹಿರಂಗವಾಗಿ ನಾವು ಈ ಬಗ್ಗೆ ಏನನ್ನು ಮಾತನಾಡಲ್ಲ. ತನಿಖಾ ಆಯೋಗ ಮಾಹಿತಿಯನ್ನು ಕೇಳಿದರೆ ಒದಗಿಸುತ್ತೇವೆ. ತನಿಖೆಯಾಗಲಿ, ತನಿಖೆಯ ವರದಿ ಬಂದ ನಂತರ ಈ ಬಗ್ಗೆ ಮಾತನಾಡುವುದು ಸೂಕ್ತ ಎಂದು ಅವರು ಹೇಳಿದರು.
ತುಮಕೂರಿಗೆ ಸ್ವಾಗತ ಕಮಾನು: ಚರ್ಚೆ
ಕೇಂದ್ರ ಸಚಿವ ವಿ. ಸೋಮಣ್ಣ ಅವರನ್ನು ಇಂದು ಭೇಟಿ ಮಾಡಿ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತುಮಕೂರಿನ ಪ್ರವೇಶ ದ್ವಾರದಲ್ಲಿ ದೊಡ್ಡ ಸ್ವಾಗತ ಕಮಾನು ಹಾಕುವ ಸಂಬಂಧ ಚರ್ಚೆ ನಡೆಸಿದ್ದೇನೆ. ಈ ಕಮಾನು ಹಾಕುವ ಸಂಬಂಧ ನಾವು ಹಣ ಹೊಂದಿಸಿಕೊಂಡಿದ್ದೇವೆ.
ಸ್ಮಾರ್ಟ್‌ಸಿಟಿ ಯೋಜನೆಯಡಿ ಈ ಯೋಜನೆ ಕೈಗೆತ್ತಿಕೊಳ್ಳಬೇಕು. ಆದರೆ ಸ್ಥಳೀಯ ಸ್ಮಾರ್ಟ್‌ಸಿಟಿ ನಿರ್ದೇಶಕರು ಇದು ಆಗಲ್ಲ ಎಂದಿದ್ದರು. ಹಾಗಾಗಿ ಸಚಿವ ಸೋಮಣ್ಣರವರನ್ನು ರವರೊಂದಿಗೆ ಚರ್ಚಿಸಿದ್ದು, ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿರವರನ್ನು ಭೇಟಿ ಮಾಡಿ ಈ ಸ್ವಾಗತ ಕಮಾನು ಹಾಕಲು ಅನುಮತಿ ಕೊಡಿಸುವಂತೆ ಮನವಿ ಮಾಡಿದ್ದೇನೆ ಎಂದರು.
ತುಮಕೂರು ವೇಗವಾಗಿ ಬೆಳೆಯುತ್ತಿದೆ. ಬೆಂಗಳೂರಿಗೆ ಸಮೀಪದಲ್ಲಿದೆ. ಹಾಗಾಗಿ ತುಮಕೂರನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಒಳಪಡಿಸುವ ಬಗ್ಗೆಯೂ ಪ್ರಸ್ತಾಪ ಇಟ್ಟಿದ್ದೇನೆ. ಜತೆಗೆ ಮೆಟ್ರೋ ರೈಲು ಅಗತ್ಯವಿದೆ. ಮೆಟ್ರೋ ರೈಲಿನ ಜತೆಗೆ ಸಬರ್ಬನ್ ರೈಲು ಎರಡನ್ನೂ ಮಾಡಲಿ ಎಂದರು.
ತುಮಕೂರಿನಲ್ಲಿ ೨೦ ಸಾವಿರ ಎಕರೆ ಕೈಗಾರಿಕಾ ಪ್ರದೇಶವಿದೆ. ತುಮಕೂರು ಬೆಳೆಯುತ್ತಿದೆ. ಹಾಗಾಗಿ ಮೆಟ್ರೋ, ಸಬರ್ಬನ್ ರೈಲು ತುಮಕೂರಿಗೆ ಸೂಕ್ತ. ಕೇಂದ್ರ ಸಚಿವ ಸೋಮಣ್ಣ ಅವರು ಮೆಟ್ರೋ ತುಮಕೂರಿಗೆ ಅವಶ್ಯ ಎಂದು ಈಗಾಗಲೇ ಹೇಳಿದ್ದಾರೆ ಎಂದರು.
ತುಮಕೂರಿನ ಪ್ರವೇಶ ದ್ವಾರದಲ್ಲಿ ಸ್ವಾಗತ ಕಮಾನಿಗೆ ಅನುಮತಿ ಹಾಗೂ ನನ್ನ ಕೊರಟಗೆರೆ ತಾಲ್ಲೂಕು ಸೇರಿದಂತೆ ತುಮಕೂರಿನ ಕೆಲ ತಾಲ್ಲೂಕುಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಗಳಿಗೆ ಕೇಂದ್ರದ ಅನುಮತಿ ಅಗತ್ಯವಿದ್ದು, ಈ ಬಗ್ಗೆಯೂ ಸಚಿವ ಸೋಮಣ್ಣನವರ ಜತೆ ಚರ್ಚಿಸಿದ್ದೇನೆ ಎಂದು ಅವರು ಹೇಳಿದರು.