Home ಜಿಲ್ಲೆ ಸಾರ್ವಜನಿಕ ಅಹವಾಲು ಸ್ವೀಕಾರ

ಸಾರ್ವಜನಿಕ ಅಹವಾಲು ಸ್ವೀಕಾರ

ಧಾರವಾಡ, ಫೆ.19: ಗ್ರಾಮ ಮಟ್ಟದಿಂದ ಹಿಡಿದು ಜಿಲ್ಲಾಮಟ್ಟದ ಎಲ್ಲ ಇಲಾಖೆಗಳ ಸರಕಾರಿ ಅಧಿಕಾರಿ, ನೌಕರರು ಕ್ಷೇತ್ರ ಭೇಟಿ ಹೊರತುಪಡಿಸಿ, ಕಚೇರಿ ಸಮಯದಲ್ಲಿ ಸಾರ್ವಜನಿಕರಿಗೆ ಕಚೇರಿಯಲ್ಲಿ ಲಭ್ಯರಿದ್ದು, ಅವರ ಅಹವಾಲುಗಳಿಗೆ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ನಿರ್ದೇಶಿಸಿದರು.


ಅವರು ನವಲಗುಂದ ತಹಶಿಲ್ದಾರ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ನಂತರ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ, ಮಾತನಾಡಿದರು.


ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಹಂತದಲ್ಲಿ ಸಾರ್ವಜನಿಕರ ದೂರು, ಮನವಿಗಳನ್ನು ಆಲಿಸಿ, ಸೂಕ್ತ ಪರಿಹಾರ ನೀಡಬೇಕು. ಅಗತ್ಯವಿದ್ದಲ್ಲಿ ಮಾತ್ರ ಮುಂದಿನ ಕಚೇರಿಗೆ ರವಾನಿಸಬೇಕು. ಅನಗತ್ಯವಾಗಿ ಸಾರ್ವಜನಿಕರಿಗೆ ಕಿರಿಕಿರಿ ಆಗದಂತೆ ಸಂವೇದನಾಶೀಲರಾಗಿ ತಮ್ಮ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.


ನವಲಗುಂದ ತಾಲೂಕಿನಲ್ಲಿ ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಆರಂಭಿಸಿರುವ ಕಡಲೆ ಕಾಳು ಮತ್ತು ಗೋವಿನ ಜೋಳ ಖರೀದಿ ಕೇಂದ್ರಗಳು ರೈತರಿಗೆ ಉಪಯುಕ್ತವಾಗುವಂತೆ ಕಾರ್ಯ ನಿರ್ವಹಿಸಬೇಕು. ತಹಶಿಲ್ದಾರ ಕಚೇರಿಯಿಂದ ಒರ್ವ ಗ್ರಾಮ ಆಡಳಿತ ಅಧಿಕಾರಿಯನ್ನು ಖರೀದಿ ಕೇಂದ್ರಗಳಿಗೆ ನೇಮಿಸಿ, ರೈತರ ನೋಂದಣಿ, ಕಾಳು ಖರೀದಿಗೆ ಸಹಾಯ ಮಾಡಬೇಕು. ಈ ನಿಟ್ಟಿನಲ್ಲಿ ನವಲಗುಂದ ತಹಶಿಲ್ದಾರ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.


ಮಧ್ಯವರ್ತಿಗಳ ಹಸ್ತಕ್ಷೇಪ ಕಡಿಮೆಯಾಗಲು ರೈತರಿಂದ ನೇರ ಖರೀದಿ ವ್ಯವಸ್ಥೆ ಆಗಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.


ಬೆಳೆ ವಿಮೆಯ ಎರಡನೇ ಕಂತಿನ ಪರಿಹಾರ ಮೊತ್ತ ರೈತರ ಖಾತೆಗೆ ಜಮಾ ಆಗುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ರೈತರು ಮನವಿ ಸಲ್ಲಿಸಿದ್ದಾರೆ ಬೆಳೆ ವಿಮೆ ಪರಿಹಾರ ವಿಳಂಬವಾಗಿ, ರೈತರಿಗೆ ತೊಂದರೆ ಆಗುತ್ತಿದೆ. ತಹಶಿಲ್ದಾರ ಅಧ್ಯಕ್ಷತೆಯಲ್ಲಿ ತಾಲೂಕುಮಟ್ಟದ ಸಭೆ ಜರುಗಿಸಿ, ಪರಿಶೀಲಿಸಬೇಕು ಮತ್ತು ರೈತರ ಖಾತೆಗಳಿಗೆ ಆದಷ್ಟು ಬೇಗ ಹಣ ಜಮೆ ಆಗುವಂತೆ ಸಂಬಂಧಿತ ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದು ಅವರು ಸೂಚನೆ ನೀಡಿದರು.


ಗೊಬ್ಬರ ಮಾರಾಟದಲ್ಲಿ ಹೆಚ್ಚುವರಿ ದರ ವಸೂಲಿ, ಕೆಲವು ವ್ಯಾಪಾರಿಗಳು ರೈತರಿಗೆ ಬೇಡದ ಗೊಬ್ಬರಗಳನ್ನು ಕೂಡ ತೆಗೆದುಕೊಳ್ಳುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ರೈತರು ದೂರು ನೀಡಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಈ ಕುರಿತು ಪರಿಶೀಲನೆ ಮಾಡಿ, ಗೊಬ್ಬರದ ದರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಹೇಳಿದರು.

ಪಟ್ಟಣದ ಪ್ರಮುಖ ರಸ್ತೆಯಲ್ಲಿ ಒತ್ತುವರಿ ಮಾಡಿ, ಮನೆಗಳ ನಿರ್ಮಾಣವಾಗಿರುವ ಕುರಿತು ದೂರುಗಳು ಬಂದಿದ್ದು, ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಒತ್ತುವರಿ, ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು. ಸಾರ್ವಜನಿಕ ಸಂಚಾರಕ್ಕೆ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.


ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಪರೀಕ್ಷಾ ಅವಧಿ ಸಮೀಪಿಸುತ್ತಿರುವುದರಿಂದ ಹಾಸ್ಟೆಲ್‍ಗಳಲ್ಲಿ ಸರಿಯಾದ ವಸತಿ, ಆಹಾರ ಮತ್ತು ಓದು ವ್ಯವಸ್ಥೆ ಕಲ್ಪಿಸಿರುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.


ಬೇಸಿಗೆ ಕಾಲ ಸಮೀಪಿಸುತ್ತಿರುವ ಹಿನ್ನೆಲೆ ಕುಡಿಯುವ ನೀರಿನ ಮಾದರಿಗಳನ್ನು ಪರೀಕ್ಷೆ ಮಾಡಿ ಸುರಕ್ಷತೆ ಖಚಿತಪಡಿಸಬೇಕು. ಗ್ರಾಮ ಮತ್ತು ಪಟ್ಟಣ ಪ್ರದೇಶಗಳಲ್ಲಿ ನೀರಿನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.


ಅನಧಿಕೃತ ಮದ್ಯದಂಗಡಿ:
ಅನಧಿಕೃತವಾಗಿ ಮದ್ಯದಂಗಡಿಗಳನ್ನು ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಸಾರ್ವಜನಿಕ ಆರೋಗ್ಯ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ನಿಗಾವಹಿಸಬೇಕು ಹಾಗೂ ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛವಾಗಿಡಲು ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಹೇಳಿದರು.


ಈ ಸಂದರ್ಭದಲ್ಲಿ ನವಲಗುಂದ ತಹಶೀಲ್ದಾರ ಸುಧೀರ ಸಾವುಕಾರ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಇ.ಆರ್.ಬಡೆಖಾನ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹಿರೇಮಠ, ಭೂದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕ ಹಿರೇಗೌಡರ, ಉಪ ತಹಶಿಲ್ದಾರ ಎಂ.ಎಚ್.ಸದರಬಾಯಿ, ಕಂದಾಯ ನಿರೀಕ್ಷಕ ಕುಮಾರಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.