ಅಧಿಕಾರ ದುರ್ಬಳಕೆ ಕಾಂಗ್ರೆಸ್ ಗೆ ಮುಳುವಾಗಲಿದೆ

ಬೀದರ್:ಜೂ.೫: ತುಷ್ಠೀಕರಣ, ಓಲೈಕೆ ರಾಜಕಾರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಬಿಜೆಪಿ ಶಾಸಕರು, ಮುಖಂಡರು, ಹಿಂದು ಹೋರಾಟಗಾರರ ವಿರುದ್ಧ ಕೇಸ್ ಹಾಕುವ, ಗಡಿಪಾರು ಮಾಡುವ ಕೆಲಸದಲ್ಲಿ ತೊಡಗಿದೆ. ವಿನಾಶಕಾಲೇ ವಿಪರೀತ ಬುದ್ಧಿ ಎಂಬAತೆ ಇದು ರಾಜ್ಯದಲ್ಲಿ ಕಾಂಗ್ರೆಸ್ ಅವನತಿಗೆ ನಾಂದಿ ಹಾಡಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆಗಿರುವ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಹೇಳಿದ್ದಾರೆ.
ರಾಜ್ಯ ಸರ್ಕಾರ ಪೊಲೀಸ್ ಇಲಾಖೆ ಬಳಸಿಕೊಂಡು ಪ್ರತಿಪಕ್ಷ ಹಾಗೂ ಹಿಂದುತ್ವದ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕರಾವಳಿ ಭಾಗದ ಜಿಲ್ಲೆಗಳು ಸೇರಿದಂತೆ ವಿವಿಧೆಡೆ ಸರ್ಕಾರವೇ ಗೂಂಡಾ ವರ್ತನೆಗೆ ಇಳಿದಿದೆ. ಇದು ಈ ಸರ್ಕಾರದ ನಿಜಬಣ್ಣವನ್ನು ಬಯಲು ಮಾಡಿದೆ. ಸರ್ಕಾರ ಎಷ್ಟೇ ಅಧಿಕಾರ ದುರ್ಬಳಕೆ ಮಾಡಿಕೊಂಡರೂ ನಮ್ಮ ಜನಪರ, ಸಮಾಜಪರ, ರಾಷ್ಟ್ರಪರ ವಿಚಾರದ ಕೆಲಸ, ಹೋರಾಟಕ್ಕೆ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಸಂಪೂರ್ಣ ಹಳಿ ತಪ್ಪಿದೆ. ಸಮಾಜಘಾತುಕರು, ದುಷ್ಟರು ಭಯವಿಲ್ಲದೆ ವಿವಿಧ ದುಷ್ಕ್ರತ್ಯಗಳಲ್ಲಿ ತೊಡಗಿದ್ದಾರೆ. ಕೊಲೆ, ದರೋಡೆ, ಅತ್ಯಾಚಾರ, ಸುಲಿಗೆ ಹೆಚ್ಚಾಗಿದ್ದು ಸಾರ್ವಜನಿಕರು ಭಯಭೀತರಾಗಿದ್ದಾರೆ. ಕೇವಲ ತುಷ್ಠೀಕರಣ ರಾಜಕಾರಣದಲ್ಲಿ ತೊಡಗಿ ಒಬ್ಬರನ್ನು ಎತ್ತಿಕಟ್ಟುತ್ತ, ಮತ್ತೊಬ್ಬರನ್ನು ತುಳಿಯುತ್ತ ಸರ್ಕಾರವೇ ಸಮಾಜದಲ್ಲಿ ಕೋಮುದ್ವೇಷದ ಭಾವನೆ ಬೆಳೆಸುತ್ತಿದೆ. ಪಾಕಿಸ್ತಾನ ಜಿಂದಾಬಾದ್ ಎಂದವರಿಗೆ ಸಾಥ್ ನೀಡುವ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರಿಗೆ ಬೆಂಬಲಿಸಿರುವುದು ಇವರ ಮನಸ್ಥಿತಿ? ನಿಲುವು ಏನು ಎಂಬುದು ತೋರಿಸಿಕೊಟ್ಟಿದೆ. ಈ ಭಂಡ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸುವ ದಿನ ಹತ್ತಿರವಾಗಿವೆ ಎಂದು ಹೇಳಿದ್ದಾರೆ.
ಬೀದರಿನಿಂದ ಹಿಡಿದು ಚಾಮರಾಜನಗರವರೆಗೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳು ಅಕ್ಷರಶಃ ಕಾಂಗ್ರೆಸ್ ಕಚೇರಿಗಳಾಗಿ ಮಾರ್ಪಟ್ಟಿವೆ.
ಸರ್ಕಾರದ ಜನ ವಿರೋಧಿ, ರೈತ ವಿರೋಧಿ, ಸಮಾಜ ವಿರೋಧಿ ಕ್ರಮದ ಬಗ್ಗೆ ಧ್ವನಿ ಎತ್ತುವವರ ಮೇಲೆ ಎಫ್‌ಐಆರ್ ಅಸ್ತ್ರವನ್ನು ಪ್ರಯೋಗಿಸಲಾಗುತ್ತಿದೆ. ಟಾರ್ಗೆಟ್ ಕಿಲ್ಲಿಂಗ್ ನಡೆಯುತ್ತಿವೆ.ವಿಧಾನ ಪರಿಷತ್ ಸಭಾಪತಿ ಛಲವಾದಿ ನಾರಾಯಣಸ್ವಾಮಿ, ಸಿ.ಟಿ. ರವಿ, ಹರೀಶ್ ಪೂಂಜಾ, ಪುತ್ತಿಲ ಸೇರಿ ವಿಪಕ್ಷ ನಾಯಕರ ಮೇಲೆ ಖಟ್ಲೆ ಹೂಡಲಾಗುತ್ತಿದೆ. ಹಿಂದು ಹೋರಾಟಗಾರರಿಗೆ ಗಡಿಪಾರು ಮಾಡಲಾಗುತ್ತಿದೆ. ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರ ತರಹ ಕೆಲಸ ಮಾಡುತ್ತಿದ್ದಾರೆ. ಇಷ್ಟಾದರೂ ಗೃಹ ಸಚಿವ ಡಾ. ಪರಮೇಶ್ವರ ಅವರು ಮೌನಕ್ಕೆ ಜಾರಿದ್ದಾರೆ. ಇಂಥ ನಿಷ್ಕ್ರಿಯ ಗೃಹ ಸಚಿವರನ್ನು ಕನ್ನಡ ನಾಡು ಹಿಂದೆAದೂ ಕಂಡಿಲ್ಲ ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಪ್ರತಿ ಜಿಲ್ಲೆಗೂ ಗೃಹ ಮಂತ್ರಿ ಇದ್ದಂತಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ
ರಿಪಬ್ಲಿಕ್ ಆಫ್ ಕಲಬುರ್ಗಿ ಹೆಡ್ ಆಗಿದ್ದಾರೆ. ಸದ್ಯಕ್ಕಂತೂ ಕಲಬುರಗಿ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ವಿಧಿಸಿದಂತಾಗಿದೆ.
ಚಿತ್ತಾಪುರದಲ್ಲಿ ಕಾಂಗ್ರೆಸ್ ಕಿಡಿಗೇಡಿಗಳು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಮೇಲೆ ಹಲ್ಲೆಗೆ ಯತ್ನಿಸಿದರೂ, ಖರ್ಗೆ ಸೂಚನೆ ಪ್ರಕಾರ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ. ದಿನ ಬೆಳೆಗಾದರೆ ಉದ್ದುದ್ದ ಭಾಷಣ ಮಾಡಿ, ದೊಡ್ಡ ಹೇಳಿಕೆ ಪೋಜ್ ನೀಡುವ ಖರ್ಗೆ, ಕಲಬುರಗಿಯಲ್ಲಿ ಮರಳು, ಲ್ಯಾಂಡ್ ಸೇರಿ ವಿವಿಧ ಮಾಫಿಯಾ, ಸಮಾಜಘಾತುಕರು, ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳದೇ ಅವರನ್ನು ರಕ್ಷಿಸುವಲ್ಲಿ ತೊಡಗಿದ್ದಾರೆ ಎಂದು ದೂರಿದ್ದಾರೆ.

====

ಕಾಂಗ್ರೆಸ್ ಗೂಂಡಾಗಿರಿ ಧೋರಣೆಗೆ ನಾವು ಹೆದರುವುದಿಲ್ಲ. ನಮ್ಮ ಕಾರ್ಯಕರ್ತರ ರಕ್ಷಣೆಗಾಗಿ ನಾವು ಸದಾ ಸಿದ್ಧರಿದ್ದೇವೆ, ಹೋರಾಟಕ್ಕೂ ಬದ್ಧರಾಗಿದ್ದೇವೆ. ಅಧಿಕಾರ ಶಾಶ್ವತವಲ್ಲ. ಪೊಲೀಸ್ ಬಲ, ಆಡಳಿತ ದುರ್ಬಳಕೆಯಿಂದ ಬಹಳ ಕಾಲ ಮನ್ ಮಾನಿ ಮಾಡಲು ಸಾಧ್ಯವಿಲ್ಲ. ಯಾವ ಕಾರಣಕ್ಕೂ ಕಾರ್ಯಕರ್ತರು ಧೃತಿಗೆಡಬಾರದು. ಈ ಸರ್ಕಾರ ಕಿತ್ತೊಗೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ.
-ಸೋಮನಾಥ ಪಾಟೀಲ್
ಬಿಜೆಪಿ ಜಿಲ್ಲಾ ಅಧ್ಯಕ್ಷ

====

ರಾಜ್ಯ ಸರ್ಕಾರದ ಓಲೈಕೆ ಧೋರಣೆಯಿಂದಲೇ ಕಾನೂನು ಸುವ್ಯವಸ್ಥೆ ಹಾಳಾಗಿ ಜನರು ನಿತ್ಯ ಭಯದಲ್ಲಿ ಬದುಕುತ್ತಿದ್ದಾರೆ. ಆದರೂ ಸಿಎಂ ಸಿದ್ಧರಾಮಯ್ಯ, ಗೃಹ ಸಚಿವ ಡಾ.ಪರಮೇಶ್ವರ ಅವರು ತಮಗೇನೂ ಗೊತ್ತಿಲ್ಲ ಎಂದು ಜಾರಿಕೊಳ್ಳುತ್ತಿರುವುದು ನಾಡಿನ ದುರ್ದೈವ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಾಧಿಕಾರಿ ಧೋರಣೆ, ಅಧಿಕಾರ ದುರ್ಬಳಕೆ ಮಾಡಿಕೊಳ್ಳುವುದು ಜನರು ಯಾವತ್ತೂ ಸಹಿಸುವುದಿಲ್ಲ.
-ಡಾ.ಶೈಲೇಂದ್ರ ಬೆಲ್ದಾಳೆ
ಬಿಜೆಪಿ ರಾಜ್ಯ ಕಾರ್ಯದರ್ಶಿ, ದಕ್ಷಿಣ ಶಾಸಕ