
ಬೀದರ್: ಮೇ.27:ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಮೇ 24ರಂದು ನವದೆಹಲಿಯಲ್ಲಿ ಕರೆದಿದ್ದ ನೀತಿ ಆಯೋಗದ 10ನೇ ಆಡಳಿತ ಮಂಡಳಿ ಸಭೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಗೈರು ಹಾಜರಾಗುವ ಮೂಲಕ ತಮ್ಮ ಅಭಿವೃದ್ಧಿ ವಿರೋಧಿ ನಿಲುವು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆಗಿರುವ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದ್ದಾರೆ.
2047ರಲ್ಲಿ ವಿಕಸಿತ ಭಾರತದ ನಿರ್ಮಾಣಕ್ಕಾಗಿ ವಿಕಸಿತ ರಾಜ್ಯದ ಅಗತ್ಯತೆ ಪರಿಕಲ್ಪನೆ ಘೋಷವಾಕ್ಯ ಅಡಿಯಲ್ಲಿ ನೀತಿ ಆಯೋಗದ ಮಹತ್ವದ ಸಭೆ ನಿಗದಿಯಾಗಿತ್ತು. ದೇಶದ ವಿಕಾಸದ ಜೊತೆಗೆ ರಾಜ್ಯದ ಸಮಗ್ರ ಅಭಿವೃದ್ಧಿ, ಸರ್ವತೋಮುಖ ಬೆಳವಣಿಗೆಗೆ ಪೂರಕ ದೂರದೃಷ್ಟಿತ್ವದ ಚಿಂತನ-ಮಂಥನದ ಸಭೆ ಇದಾಗಿತ್ತು. ಈ ಸಭೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಭಾಗಿಯಾಗಿ ತಮ್ಮ ಅಭಿಪ್ರಾಯ, ಸಲಹೆ ಮಂಡನೆ ಮಾಡಿ ಚರ್ಚೆ ಮಾಡಬೇಕಿತ್ತು. ಇದರ ಬದಲಾಗಿ ಸಭೆಯಿಂದ ದೂರ ಉಳಿಯುವ ಮೂಲಕ ನಾಡಿನ ಸಮಗ್ರ ಅಭಿವೃದ್ಧಿಗೆ ಪೆಟ್ಟು ನೀಡುವ ಕೆಲಸ ಮಾಡಲಾಗಿದೆ ಎಂದು ಇಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ದೂರಿದ್ದಾರೆ.
2027ವಿಕಸಿತ ಭಾರತ, ಬಲಿಷ್ಠ ಭಾರತ ಹಾಗೂ ವಿಶ್ವ ಗುರು ಭಾರತ ನಿರ್ಮಾದ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಕಾರ್ಯಯೋಜನೆ ಹಾಕಿಕೊಳ್ಳುತ್ತಿದ್ದಾರೆ. ಅವರ ಈ ಕನಸು ಸಾಕಾರದಲ್ಲಿ ರಾಜ್ಯಗಳ ಪಾತ್ರ ಹಿರಿದಾಗಿದೆ. ರಾಜ್ಯದ ಸಮಗ್ರ ವಿಕಾಸವೇ ವಿಕಸಿತ ಭಾರತದ ರಹದಾರಿ ಎಂದು ಮೋದಿ ಅವರು ಹೇಳಿದ್ದಾರೆ. ಹೀಗಾಗಿ ನೀತಿ ಆಯೋಗದ ಸಭೆ ಸಾಕಷ್ಟು ಮಹತ್ವದ್ದಾಗಿತ್ತು. ಪ್ರತಿ ವಿಷಯದಲ್ಲೂ ರಾಜಕೀಯ ಮಾಡುವ ಕಾಂಗ್ರೆಸ್ ಮನಸ್ಥಿತಿ ಅಭಿವೃದ್ಧಿಗೆ ಮಾರಕವಾಗಿದೆ ಎಂದು ತೋರಿಸಿದೆ ಎಂದು ಕಿಡಿಕಾರಿದ್ದಾರೆ.
ಸಿದ್ಧರಾಮಯ್ಯ ಅವರು ಮಾತೆತ್ತಿದರೆ ಕೇಂದ್ರ ಸರ್ಕಾರ, ಮೋದಿ ಅವರನ್ನು ಟೀಕಿಸುತ್ತಾರೆ. ಅವರಿಗೆ ನಿಜವಾಗಿಯೂ ರಾಜ್ಯದ ಅಭಿವೃದ್ಧಿ, ಜನರ ಹಿತ ಮುಖ್ಯವಾಗಿದ್ದರೆ ನೀತಿ ಆಯೋಗದ ಸಭೆಗೆ ಹೋಗಿ ತಮ್ಮ ಸಲಹೆ, ಅಭಿಪ್ರಾಯ ಮಂಡಿಸಬೇಕಿತ್ತು. ಇಲ್ಲಸಲ್ಲದ ಸಬೂಬು ಹೇಳಿ ಸಭೆಗೆ ಗೈರು ಹಾಜರಾಗಿರುವುದು ಖಂಡನೀಯ.ಮುಖ್ಯಮಂತ್ರಿಗಳ ಈ ಧೋರಣೆ ನಾಡಿನ ಏಳು ಕೋಟಿ ಜನರ ಹಿತಾಸಕ್ತಿಗೆ ಕೊಳ್ಳಿ ಇಟ್ಟು, ಅಭಿವೃದ್ಧಿಗೆ ಪೆಟ್ಟು ನೀಡಲಿದೆ. ನೀತಿ ಆಯೋಗದಂತಹ ಮಹತ್ವದ ಸಭೆಗೆ ಹಾಜರಾದ ಇವರಿಗೆ ಕೇಂದ್ರದ ವಿರುದ್ಧ ಮಾತನಾಡುವ ನೈತಿಕತೆಯೂ ಇಲ್ಲ ಎಂದು ಹೇಳಿದ್ದಾರೆ