ಅಬಾಕಸ್‌ನಿಂದ ಏಕಾಗ್ರತೆಯೂ ಹೆಚ್ಚಲಿದೆ

ಬೆಂಗಳೂರು.ಜ೧೨: ಅಬಾಕಸ್ ಕಲಿಸುವಾಗ ಕೇವಲ ಗಣಿತ ಮಾತ್ರವಲ್ಲದೇ, ಮಕ್ಕಳಲ್ಲಿ ಏಕಾಗ್ರತೆಯೂ ಬೆಳೆಯುತ್ತದೆ. ಆದ್ದರಿಂದ ಮಕ್ಕಳಲ್ಲಿ ಬೆಳವಣಿಗೆಗೆ ಅಬಾಕಸ್ ಪೂರಕವಾಗುತ್ತದೆ ಎಂದು ಎಸ್.ಐ.ಪಿ ಅಬಾಕಸ್ ಸಂಸ್ಥೆಯ ಕರ್ನಾಟಕ ಮುಖ್ಯಸ್ಥ ಎಚ್.ಎನ್. ನರೇಂದ್ರ ಹೇಳಿದರು.


ಅರಮನೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ೨೦ನೇ ರಾಜ್ಯಮಟ್ಟದ ಅಬಾಕಸ್ ಬೌದ್ದಿಕ ಅಂಕಗಣಿತ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಪ್ರತಿಭೆ ಮತ್ತು ಮಾನಸಿಕ ಬೆಳವಣೆಗೆಗೆ ಪೂರಕವಾಗಿ ಇತ್ತೀಚಿನ ದಿನಗಳಲ್ಲಿ ಅಬಾಕಸ್ ಪದ್ದತಿಯ ಮೂಲಕ ಕಲಿಕಾ ಸಾಮರ್ಥ್ಯ ಹೆಚ್ಚಳವಾಗುತ್ತಿದೆ. ಅನೇಕ ಮಕ್ಕಳಿಗೆ ಕಬ್ಬಿಣದ ಕಡಲೆ ಯಾಗಿರುವ ಗಣಿತವನ್ನು ಸುಲಭ ರೀತಿಯಲ್ಲಿ ಕಲಿಸುವುದು ಅಬಾಕಸ್‌ನ ಉದ್ದೇಶ. ಆದರೆ ಕೇವಲ ಅದಷ್ಟೇ ಅಲ್ಲದೇ, ನಮ್ಮ ತರಬೇತಿಯ ವೇಳೆ ನಾವು ಮಕ್ಕಳಿಗೆ ಏಕಾಗ್ರತೆಯನ್ನು ಕಲಿಸುತ್ತೇವೆ. ಈ ಏಕಾಗ್ರತೆ ಮಕ್ಕಳ ಸಹಾಯಕ್ಕೆ ಬರಲಿದೆ ಎಂದು ಹೆಚ್.ಎನ್.ನರೇಂದ್ರ ರವರು ಹೇಳಿದರು.


ನಿವೃತ್ತ ಎನ್‌ಎಎಲ್ ನಿರ್ದೇಶಕ ಎ.ಆರ್. ಉಪಾಧ್ಯ ಮಾತನಾಡಿ, ಈ ರೀತಿಯ ತರಬೇತಿ ಮಕ್ಕಳಿಗೆ ಮಾತ್ರವಲ್ಲ, ಸಮಾಜಕ್ಕೂ ದೊಡ್ಡ ಕೊಡುಗೆ ಎಂದರು.


ಕರ್ನಾಟಕದಾದ್ಯಂತ ಇರುವ ೮೨ಕೇಂದ್ರಗಳಿಂದ ಸುಮಾರು ೪,೧೦೦ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ೨ ಹಂತದಲ್ಲಿ ತಲಾ ೨,೦೫೦ ಮಕ್ಕಳ ಸ್ಪರ್ಧೆ ಎದುರಿಸಿದ್ದು, ಐದು ನಿಮಿಷಗಳಲ್ಲಿ ಮಕ್ಕಳು ಅಬಾಕಸ್ ಬಳಸಿ ಸುಮಾರು ೧೦೦ ಲೆಕ್ಕಗಳನ್ನು, ಅಬಾಕಸ್ ಇಲ್ಲದೆ ದೃಶ್ಯ ಪದ್ಧತಿಯಲ್ಲಿ ೧೨೦ ಲೆಕ್ಕಗಳನ್ನು ಹಾಗೂ ಗುಣಾಕಾರ-ಭಾಗಾಕಾರದಲ್ಲಿ ೧೪೦ ಲೆಕ್ಕಗಳನ್ನು ಮಾಡಿ ಒಟ್ಟು ಸುಮಾರು ೩೬೦ ಲೆಕ್ಕಗಳನ್ನು ಪೂರ್ಣಗೊಳಿಸುವ ಸಾಮರ್ಥ್ಯ ಪ್ರದರ್ಶಿಸಿದರು. ಬೃಹತ್ ಮಟ್ಟದ ಅಬಾಕಸ್ ಸ್ಪರ್ಧೆಯನ್ನು ಆಯೋಜಿಸಿ ಅದೇ ದಿನ ಮೌಲ್ಯಮಾಪನ ಮತ್ತು ಬಹುಮಾನ ವಿತರಣೆ ಮಾಡಿದರು.