ಕಲಬುರಗಿ:ಅ.14:ಇಂದಿನ ಶಾಲಾ ಮಕ್ಕಳಲ್ಲಿಅನೇಕ ಕಾರಣಗಳಿಂದ ಏಕಾಗ್ರತೆಯ ಕೊರತೆ ಕಾಡುತ್ತಿದೆ. ನಿಯಮಿತ ವ್ಯಾಯಾಮ ಹಾಗೂ ಯೋಗಾಭ್ಯಾಸ ಇದಕ್ಕೆ ಉತ್ತಮ ಪರಿಹಾರ. ಜೊತೆಗೆ ಶೈಕ್ಷಣಿಕ ಕ್ಷಮತೆಹಾಗೂ ಏಕಾಗ್ರತೆ ಹೆಚ್ಚಿಸುವಲ್ಲಿ ಅಬಾಕಸ್ ಕಲಿಕೆ ಮಕ್ಕಳಿಗೆ ತುಂಬಾ ಸಹಾಯಕಾರಿಯಾಗುತ್ತದೆ ಎಂದು ಡಾ. ಸಂತೋಷ ಮಂಗಶೆಟ್ಟಿ ಹೇಳಿದರು.
ನಗರದ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ‘ವಿವಿಎನ್ ಅಬಾಕಸ್ ಸೆಂಟರ್’ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಖ್ಯಾತ ನರರೋಗ ತಜ್ಞ ಡಾ. ಸಂತೋಷ ಮಂಗಶೆಟ್ಟಿ ಮಾತನಾಡಿದರು. ಶಾಲಾ ದಿನಗಳಿಂದಲೇ ಮಕ್ಕಳು ಉತ್ತಮ ಆರೋಗ್ಯ, ಶಿಸ್ತು ಹಾಗೂ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಇವುಗಳಿಂದ ಮಕ್ಕಳು ಸುಲಭವಾಗಿ ತಮ್ಮ ಗುರಿ ತಲುಪಿ ಯಶಸ್ಸು ಕಾಣಬಹುದು ಎಂದರು.
ಶಾಲೆಯ ಪ್ರಿನ್ಸಿಪಾಲ್ ಸಿದ್ದಪ್ಪ ಭಗವತಿ ಮಾತನಾಡಿ ಅಬಾಕಸ್ ವಿಭಾಗದ ಮುಖ್ಯಸ್ಥ ವಿಜಯಕುಮಾರ ಘಂಟೋಜಿಯವರು ವಿಶಿಷ್ಟ ಬೋಧನಾ ಶೈಲಿ ಹೊಂದಿದ್ದಾರೆ. ವಿ.ವಿ.ಎನ್ ಶಾಲೆ ಹಾಗೂ ನಗರದ ಬೇರೆ ಶಾಲೆಯ ಒಟ್ಟು 250 ಮಕ್ಕಳು ಅಬಾಕಸ ತರಗತಿಯ ಲಾಭ ಪಡೆಯುತ್ತಿದ್ದಾರೆ. ಇದರಿಂದ ಮಕ್ಕಳ ನಡವಳಿಕೆ ಹಾಗೂ ಕಲಿಕೆಯಲ್ಲಿ ಉತ್ತಮ ಪ್ರಗತಿ ಕಾಣುತ್ತಿದೆ ಎಂದರು.
ಕಾರ್ಯಕ್ರಮದಲ್ಲಿಅಬಾಕಸ್ ವಿಭಾಗದ ಮುಖ್ಯಸ್ಥ ವಿಜಯಕುಮಾರ ಘಂಟೋಜಿ, ಮುಖ್ಯಗುರು ಅಂಬಿಕಾ ರೆಡ್ಡಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶೈಕ್ಷಣಿಕ ಸಂಯೋಜಕ ನಿಖಿಲ ಪಾಟೀಲ್ ನಿರೂಪಿಸಿದರು, ವಿದ್ಯಾರ್ಥಿಗಳಾದ ಸಮೃದ್ಧಿ ಸಿದ್ರಾಮಪ್ಪ ಸ್ವಾಗತಿಸಿದರು. ಆರಾಧ್ಯ ಸುರೇಶ ವಂದಿಸಿದರು.


























