ನರೇಗಾ ನೂತನ ಮಸೂದೆಯನ್ನು ವಿರೋಧಿಸಿ ಆಪ್ ಪ್ರತಿಭಟನೆ

ಬೆಂಗಳೂರು,ಡಿ೧೯:ನರೇಗಾ ಯೋಜನೆಗೆ ಪರ್ಯಾಯವಾಗಿ ರೂಪಿಸಿರುವ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಮಸೂದೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹೆಸರನ್ನು ತೆಗೆದು ಹಾಕಿರುವ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಇಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ತೀವ್ರ ಪ್ರತಿಭಟನೆಯನ್ನು ನಡೆಸಿದರು.


ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ” ರಾಷ್ಟ್ರಪಿತ ಗಾಂಧೀಜಿಯವರು ಈ ದೇಶದ ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ. ಇವರು ಕಂಡಂತಹ ಗ್ರಾಮಸ್ವರಾಜ್ಯವನ್ನು ನನಸು ಮಾಡುವಂತಹ ನರೇಗಾ ಯೋಜನೆಯನ್ನು ಇಷ್ಟು ವರ್ಷಗಳ ಕಾಲ ಗಾಂಧೀಜಿಯವರ ಹೆಸರಿನಲ್ಲೇ ನಡೆಯುತ್ತಿತ್ತು. ಆದರೆ ಏಕಾಏಕಿ ಕೇಂದ್ರದ ಬಿಜೆಪಿ ಸರ್ಕಾರ ನೂತನ ಮಸೂದೆಯ ಮೂಲಕ ರಾಷ್ಟ್ರಪಿತನ ಹೆಸರನ್ನೇ ತೆಗೆದುಹಾಕುವಂತಹ ದುಷ್ಟ, ಕೋಮು ಧ್ರುವೀ ಕರಣ ನೀತಿಯನ್ನು ಆಮ್ ಆದ್ಮಿ ಪಕ್ಷವು ಈ ಪ್ರತಿಭಟನೆ ಮೂಲಕ ಖಂಡಿಸುತ್ತಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಸಹ ಪಕ್ಷವು ತೀವ್ರ ಪ್ರತಿಭಟನೆ ಮಾಡುವ ಮೂಲಕ ವಿರೋಧವನ್ನು ವ್ಯಕ್ತಪಡಿಸುತ್ತದೆ ” ಎಂದು ತಿಳಿಸಿದರು.


ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಮಾತನಾಡಿ ” ಗ್ರಾಮೀಣ ಭಾಗದ ರೈತರುಗಳಿಗೆ ಜೀವನೋಪಾಯಕ್ಕಾಗಿ ೧೦೦ ದಿವಸಗಳ ಕಾಲ ಉದ್ಯೋಗವನ್ನು ನೀಡಿ ಎಲ್ಲ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿತ್ತು . ಆದರೆ ನೂತನ ಮಸೂದೆಯಲ್ಲಿ ರಾಜ್ಯ ಸರ್ಕಾರಗಳು ಸಹ ಪಾಲನ್ನು ನೀಡಬೇಕೆಂದು ಬೇಡಿಕೆ ಇಡುತ್ತಿರುವುದು ಕೇಂದ್ರದ ರೈತ ವಿರೋಧಿ ಹಾಗೂ ಪಲಾಯನವಾದದ ಸಂಕೇತ. ಉದ್ಯೋಗದ ಹಕ್ಕು ಪ್ರತಿಯೊಬ್ಬ ಭಾರತೀಯರಿಗೆ ನೀಡಬೇಕೆನ್ನುವುದು ಸಂವಿಧಾನ ಮೂಲ ಆಶಯವಾಗಿದೆ. ಕೇಂದ್ರದ ಬಿಜೆಪಿ ಸರ್ಕಾರವು ನೂತನ ಮಸೂದೆಯ ಮೂಲಕ ಅನುದಾನಕ್ಕಾಗಿ ರಾಜ್ಯಗಳಿಗೆ ಆಶ್ರಯಿಸುತ್ತಿರುವುದು ಸಂಪೂರ್ಣ ಸಂವಿಧಾನ ವಿರೋಧಿಯಾಗಿದೆ . ಪ್ರತಿಯೊಬ್ಬ ಭಾರತೀಯರು ಈ ನೂತನ ಮಸೂದೆಯನ್ನು ಧಿಕ್ಕರಿಸಬೇಕು” ಎಂದು ಕರೆ ನೀಡಿದರು.


ಪ್ರತಿಭಟನೆಯ ಮುಂಚೆ ನಗರದ ಮೌರ್ಯ ವೃತ್ತದಲ್ಲಿನ ಗಾಂಧಿ ಪ್ರತಿಮೆಯನ್ನು ಪಕ್ಷದ ಕಾರ್ಯಕರ್ತರೆಲ್ಲರೂ ಶುದ್ಧಪಡಿಸಿ ಹೂವಿನ ಹಾರವನ್ನು ಹಾಕಿ ಗೌರವವನ್ನು ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಪಕ್ಷದ ಪ್ರಚಾರ ಸಮಿತಿಯ ಉಪಾಧ್ಯಕ್ಷ ಲಕ್ಷ್ಮಿಕಾಂತ್ ರಾವ್ ,ಪ್ರಧಾನ ಕಾರ್ಯದರ್ಶಿ ಸಂಚಿತ್ ಸಹವಾನಿ, ಉಷಾ ಮೋಹನ್, ಡಾ. ಸತೀಶ್ ಕುಮಾರ್, ಬಸವರಾಜ ಮುದಿಗೌಡರ್, ಶಶಿಧರ್ ಆರಾಧ್ಯ, ಸುಷ್ಮಾ ವೀರ್, ಜಗದೀಶ್ ಚಂದ್ರ, ರವಿಕುಮಾರ್ , ಉಮೇಶ್ ಯಾದವ್ , ನವೀನ್ ಅಯ್ಯರ್, ಪುಟ್ಟಣ್ಣ ಗೌಡ ಸೇರಿದಂತೆ ಅನೇಕ ಮುಖಂಡರುಗಳು ಕಾರ್ಯಕರ್ತರುಗಳು ಭಾಗವಹಿಸಿದ್ದರು.