
ಸಂಜೆವಾಣಿ ವಾರ್ತೆ,
ವಿಜಯಪುರ, ನ. ೩: ಐತಿಹಾಸಿಕ ವಿಜಯಪುರ ಜಿಲ್ಲೆ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಹೊಂದಿದ್ದು, ಶತಮಾನಗಳಿಂದ ಚಿತ್ರಕಲೆಯ ಕ್ಷೇತ್ರದಲ್ಲಿಯೂ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದೆ. ಈ ಪರಂಪರೆಯನ್ನು ಇಂದಿನ ಯುವ ಕಲಾವಿದರು ಸಮರ್ಥವಾಗಿ ಮುಂದುವರಿಸಿಕೊAಡು ಹೋಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಹೇಳಿದರು.
ನಗರದ ಯುವ ಚಿತ್ರಕಲಾವಿದ ಪ್ರಶಾಂತ ಮನಗೂಳಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದಿಂದ ಯುವ ಕಲಾವಿದರ ಕಲಾ ಪ್ರತಿಭೆಗೆ ವೇದಿಕೆ ದೊರೆಯುತ್ತಿರುವುದು ಸಂತಸದ ವಿಚಾರ. ಕಲಾವಿದರ ಸೃಜನಶೀಲತೆಗೆ ಅಗತ್ಯವಾದ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಲಾಖೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಕಲಾವಿದರು ಇಲಾಖೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಕಲಾ ಪ್ರತಿಭೆಯನ್ನು ಮತ್ತಷ್ಟು ಬೆಳೆಸಿಕೊಳ್ಳಬೇಕು ಎಂದರು.
ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ಶ್ಲಾಘನೀಯ
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹಿರಿಯ ಕಲಾವಿದ ಪಿ.ಎಸ್. ಕಡೆಮನಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವ ಕಲಾವಿದರು ವಿಭಿನ್ನ ಪರಿಕಲ್ಪನೆ ಹಾಗೂ ಸೃಜನಶೀಲತೆಯಿಂದ ಗಮನ ಸೆಳೆಯುವ ಕಲಾಕೃತಿಗಳನ್ನು ರಚಿಸಿ ಪ್ರದರ್ಶಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಪ್ರತಿಭಾವಂತ ಕಲಾವಿದರಿಗೆ ವೇದಿಕೆ ಕಲ್ಪಿಸುವುದರ ಜೊತೆಗೆ ಆರ್ಥಿಕ ನೆರವು ನೀಡುತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯ ಶ್ಲಾಘನೀಯ ಎಂದರು.
ಎಲ್ಐಸಿಯ ನಿವೃತ್ತ ಅಧಿಕಾರಿ ಗೋಪಾಲ್ ನಾಮ್ದಾರ್ ಮಾತನಾಡಿ, ಕಲೆ, ಸಾಹಿತ್ಯ ಹಾಗೂ ಸಂಗೀತದAತಹ ಸೃಜನಶೀಲ ಕ್ಷೇತ್ರಗಳಲ್ಲಿ ಯುವಕರು ತೊಡಗಿಸಿಕೊಂಡಾಗ ಸಮಾಜದ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚುತ್ತದೆ. ಯುವ ಕಲಾವಿದ ಪ್ರಶಾಂತ ಮನಗುಳಿ ಅವರ ಕಲಾಕೃತಿಗಳನ್ನು ಸಾರ್ವಜನಿಕರು ವೀಕ್ಷಿಸಿ, ಅವರ ಕಲಾ ಪಯಣಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಹಿರಿಯ ಯೋಗ ಶಿಕ್ಷಕ ಬಸವರಾಜ ಶಿಂದೆ ಮಾತನಾಡಿ, ನಿಸರ್ಗ ಚಿತ್ರ, ಭಾವಚಿತ್ರ ಹಾಗೂ ರೇಖಾಚಿತ್ರಗಳಲ್ಲಿ ಪ್ರಶಾಂತ ಮನಗುಳಿ ಅವರು ತಮ್ಮದೇ ಆದ ವಿಶಿಷ್ಟ ಕಲಾಶೈಲಿಯನ್ನು ರೂಪಿಸಿಕೊಂಡಿದ್ದಾರೆ. ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಕಲಾಸಕ್ತರಿಗೆ ವಿಭಿನ್ನ ಅನುಭವ ನೀಡಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಯುವ ಕಲಾವಿದನ ಪ್ರತಿಭೆಯನ್ನು ಬೆಂಬಲಿಸಬೇಕು ಎಂದರು.
ಕಲಾಕೃತಿಗಳ ಮೂಲಕ ಮನಸೆಳೆಯುತ್ತಿರುವ ಪ್ರಶಾಂತ
ಕಲಾವಿದ ಪ್ರಶಾಂತ ಮನಗುಳಿ ಮಾತನಾಡಿ, ಚಿತ್ರಕಲೆಯ ಮೇಲಿನ ಆಸಕ್ತಿ, ತಮ್ಮ ಕಲಾ ಪಯಣ ಹಾಗೂ ಪ್ರದರ್ಶನದ ಉದ್ದೇಶದ ಕುರಿತು ಮಾತನಾಡಿದರು. ವಿವಿಧ ವಿಷಯಗಳನ್ನು ವಿಭಿನ್ನ ಕಲಾಶೈಲಿಯಲ್ಲಿ ಕಟ್ಟಿಕೊಟ್ಟಿರುವ ತಮ್ಮ ಕಲಾಕೃತಿಗಳಿಗೆ ಕಲಾಸಕ್ತರಿಂದ ಉತ್ತಮ ಪ್ರತಿಕ್ರಿಯೆ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಲಾವಿದರಾದ ಬಿ.ಎಸ್. ಪಾಟೀಲ, ವಿದ್ಯಾಧರ ಸಾಲಿ, ಲಿಂಗರಾಜ ಕಾಚಾಪುರ, ರಮೇಶ ಚವ್ಹಾಣ, ವಿ.ವಿ. ಹಿರೇಮಠ, ಎಂ.ಎA. ಕನ್ನೂರ, ಖಾಜಪ್ಪ ಶಿಂಗೆ, ಶ್ರೀಶೈಲ ಹೂಗಾರ, ಶಬ್ಬೀರ್ ನದಾಫ್, ಆನಂದ ಝಂಡೆ, ರಾಜೇಂದ್ರ ಗೊಳಸಂಗಿ, ರಾಘವೇಂದ್ರ ಪಾಟೀಲ, ಅಕ್ಷಯ್ ಪಾಟೀಲ, ಆರತಿ ಹರಿಜನ, ಸವಿತಾ ಮಾನೆ, ಶ್ರೀಶೈಲ ಅಳಕುಂಟೆ, ಆನಂದ ಕೆ., ಉದೇಶ ಗುಜರಿ, ಬಸವರಾಜ ಹಡಪದ, ಸದಾಶಿವ ಸೂರ್ಯವಂಶಿ, ಮಲ್ಲಿಕಾರ್ಜುನ ಹರ್ನಾಳ, ವಿವೇಕ ವೈಶಂಪಾಯನ, ಸರಸ್ವತಿ ಹರಿಜನ, ನಾಗೇಶ ಹೊಟಗಾರ ಸೇರಿದಂತೆ ಅನೇಕ ಕಲಾವಿದರು ಹಾಗೂ ಕಲಾಸಕ್ತರು ಉಪಸ್ಥಿತರಿದ್ದರು.
ಬಸವರಾಜ ಹಡಪದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.





















