Home ಜಿಲ್ಲೆ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆಯಲ್ಲೇ ಕೊಳಚೆ ಜಲಪಾತ!

ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆಯಲ್ಲೇ ಕೊಳಚೆ ಜಲಪಾತ!

ಚಿಕ್ಕಬಳ್ಳಾಪುರ, ಅ. ೧೪: ಜಿಲ್ಲಾಡಳಿತದ ಪ್ರಮುಖ ಕಚೇರಿಗಳಿರುವ ರಸ್ತೆಯಲ್ಲೇ ಒಳಚರಂಡಿ ನೀರು ಉಕ್ಕಿ ಹರಿದು, ವಾಹನ ಸವಾರರು ಹಾಗೂ ಪಾದಚಾರಿಗಳ ಮೇಲೆ ಕೊಳಚೆ ನೀರು ಸಿಂಚನವಾಗುತ್ತಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯದಿರುವುದು ನಗರ ಆಡಳಿತದ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.


ಚಿಕ್ಕಬಳ್ಳಾಪುರ ನಗರದಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ಮುಖ್ಯ ರಸ್ತೆಯ ನ್ಯೂ ಜೀವನ್ ಆಸ್ಪತ್ರೆ ಮುಂಭಾಗದ ಯುಜಿಡಿ ಮ್ಯಾನ್‌ಹೋಲ್ ಉಕ್ಕಿ ಹರಿಯುತ್ತಿದ್ದು, ರಸ್ತೆಯ ಮೇಲೆ ಕೊಳಚೆ ನೀರು ಹರಿದು ಸಂಚಾರಕ್ಕೆ ತೀವ್ರ ಅಡಚಣೆ ಉಂಟುಮಾಡುತ್ತಿದೆ.


ರಸ್ತೆಯಲ್ಲಿ ನೀರು ಹರಿಯುವ ದೃಶ್ಯuತಿಜದರೆ ಕೊಳಚೆ ನೀರಿನ ಜಲಪಾತವೇ ಸೃಷ್ಟಿಯಾದಂತಿದೆ. ಈ ಮಾರ್ಗದಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ವಾಹನಗಳ ಚಕ್ರಗಳಿಂದ ಚಿಮ್ಮುವ ಕೊಳಚೆ ನೀರಿನ ಸಿಂಚನಕ್ಕೆ ತುತ್ತಾಗುತ್ತಿದ್ದಾರೆ. ದುರ್ವಾಸನೆಯ ನಡುವೆ ಸಂಚರಿಸುವುದು ಜನರಿಗೆ ನಿತ್ಯದ ಸಂಕಷ್ಟವಾಗಿ ಪರಿಣಾಮಿಸಿದೆ.


ನ್ಯೂ ಜೀವನ್ ಆಸ್ಪತ್ರೆ ಮುಂಭಾಗದ ಯುಜಿಡಿ ಮ್ಯಾನ್‌ಹೋಲ್‌ನಿಂದ ಕೊಳಚೆ ನೀರು ಉಕ್ಕಿ ಹರಿಯುವ ಸಮಸ್ಯೆ ಒಂದೆರಡು ದಿನಗಳದ್ದಲ್ಲ. ತಿಂಗಳಿಗೆ ಎರಡ್ಮೂರು ಬಾರಿಯಾದರೂ ಇದೇ ಪರಿಸ್ಥಿತಿ ಮರುಕಳಿಸುತ್ತಿದೆ ಎಂಬುದು ಸ್ಥಳೀಯರ ಅಳಲು. ತಾತ್ಕಾಲಿಕವಾಗಿ ಸಮಸ್ಯೆ ಸರಿಪಡಿಸಿದರೂ ಕೆಲವೇ ದಿನಗಳಲ್ಲಿ ಮತ್ತೆ ಕೊಳಚೆ ನೀರು ರಸ್ತೆಗೆ ಹರಿದುಬರುವುದರಿಂದ ಸಾರ್ವಜನಿಕರು ಬೇಸತ್ತಿದ್ದಾರೆ.


ಈ ರಸ್ತೆ ಕೇವಲ ಜಿಲ್ಲಾಧಿಕಾರಿ ಕಚೇರಿಗೆ ಸಂಪರ್ಕ ಕಲ್ಪಿಸುವ ಮಾರ್ಗವಲ್ಲ. ಇದೇ ರಸ್ತೆಯಲ್ಲಿ ಖಾಸಗಿ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಮಹಿಳಾ ಕಾಲೇಜು ಸೇರಿದಂತೆ ಹಲವು ಪ್ರಮುಖ ಸ್ಥಳಗಳಿದ್ದು, ಚಿಂತಾಮಣಿಗೆ ತೆರಳುವ ವಾಹನಗಳೂ ಇದೇ ಮಾರ್ಗವನ್ನು ಅವಲಂಬಿಸಿವೆ. ಹೀಗಾಗಿ ದಿನವಿಡೀ ಜನ ಹಾಗೂ ವಾಹನಗಳ ಸಂಚಾರ ಹೆಚ್ಚಾಗಿರುತ್ತದೆ.


ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ವಿಶೇಷವಾಗಿ ನಡೆದುಕೊಳ್ಳುವ ವಿದ್ಯಾರ್ಥಿನಿಯರು, ವಾಹನಗಳು ಹಾದುಹೋಗುವಾಗ ಚಿಮ್ಮುವ ಕೊಳಚೆ ನೀರಿನಿಂದ ತೊಂದರೆ ಅನುಭವಿಸುತ್ತಿದ್ದಾರೆ. ಸ್ವಚ್ಛ ಉಡುಪಿನಲ್ಲಿ ತರಗತಿಗೆ ತೆರಳಬೇಕಾದ ವಿದ್ಯಾರ್ಥಿಗಳು ದುರ್ವಾಸನೆಯ ಕೊಳಚೆ ನೀರಿನ ಸಿಂಚನಕ್ಕೆ ತುತ್ತಾಗಿ ಮುಜುಗರ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.


ಜಿಲ್ಲೆಯ ಆಡಳಿತದ ಕೇಂದ್ರವಾಗಿರುವ ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ಪ್ರಮುಖ ರಸ್ತೆಯಲ್ಲೇ ಇಂತಹ ಅವ್ಯವಸ್ಥೆ ಮುಂದುವರಿದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾಮಟ್ಟದ ಅಧಿಕಾರಿಗಳು ಸಂಚರಿಸುವ ಮಾರ್ಗದಲ್ಲಿಯೇ ಜನರು ಕೊಳಚೆ ನೀರಿನ ಸಮಸ್ಯೆ ಎದುರಿಸುತ್ತಿದ್ದರೆ, ನಗರದ ಒಳಭಾಗದ ಬಡಾವಣೆಗಳಲ್ಲಿ ಒಳಚರಂಡಿ ವ್ಯವಸ್ಥೆಯ ಸ್ಥಿತಿ ಹೇಗಿರಬಹುದು ಎಂಬ ಪ್ರಶ್ನೆಯೂ ಮೂಡುತ್ತದೆ.


ಅಧಿಕಾರಿಗಳು ತಮ್ಮ ದೈನಂದಿನ ಸಂಚಾರದ ವೇಳೆ ಈ ಸಮಸ್ಯೆಯನ್ನು ಗಮನಿಸಿದ್ದಾರೆಯೇ? ಗಮನಿಸಿದ್ದರೆ ಪರಿಹಾರಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ? ಸಮಸ್ಯೆ ಮರುಕಳಿಸುತ್ತಿದ್ದರೂ ಸಂಬಂಧಿಸಿದ ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿದೆಯೆ ಎಂಬ ಪ್ರಶ್ನೆಗಳಿಗೆ ಆಡಳಿತ ವ್ಯವಸ್ಥೆ ಉತ್ತರಿಸಬೇಕಿದೆ.


ಜಿಲ್ಲಾಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನಗರಸಭೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ. ಜನರು ಪ್ರತಿಭಟನೆ ನಡೆಸಿದ ಬಳಿಕವೇ ಆಡಳಿತ ಯಂತ್ರ ಎಚ್ಚೆತ್ತುಕೊಳ್ಳಬೇಕೇ? ಅಥವಾ ಸಾರ್ವಜನಿಕರ ನಿತ್ಯದ ಸಂಕಷ್ಟವನ್ನು ಅರಿತು ಮುಂಚಿತವಾಗಿಯೇ ಪರಿಹಾರ ಕಲ್ಪಿಸಬೇಕೇ ಎಂಬ ಪ್ರಶ್ನೆ ಈಗ ಎದುರಾಗಿದೆ. ಒಟ್ಟಾರೆ, ಜಿಲ್ಲಾಧಿಕಾರಿ ಕಚೇರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲೇ ಯುಜಿಡಿ ಕೊಳಚೆ ನೀರು ಹರಿಯುತ್ತಿರುವುದು ಕೇವಲ ಸಂಚಾರದ ಸಮಸ್ಯೆಯಲ್ಲ; ಇದು ಸಾರ್ವಜನಿಕರ ಆರೋಗ್ಯ, ಸ್ವಚ್ಛತೆ, ಗೌರವ ಮತ್ತು ನಗರ ಆಡಳಿತದ ಹೊಣೆಗಾರಿಕೆಗೆ ಸಂಬಂಧಿಸಿದ ಗಂಭೀರ ವಿಚಾರವಾಗಿದೆ.