
ಯಾದಗಿರಿ: ರಾಜ್ಯದ ಸರ್ವಾಂಗೀಣ ಪ್ರಗತಿ ಹಾಗೂ ಜನಸಾಮಾನ್ಯರ ಬದುಕಿನ ಮಟ್ಟವನ್ನು ಉತ್ತೇಜಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಮಂಡಿಸಿದ ೨೦೨೬-೨೭ನೇ ಸಾಲಿನ ರಾಜ್ಯ ಬಜೆಟ್ ಸಮತೋಲನಯುತ, ಜನಪರ ಹಾಗೂ ದೂರದೃಷ್ಟಿಯ ಆರ್ಥಿಕ ದಾಖಲೆ ಎಂದು ಯಾದಗಿರಿ ಕ್ಷೇತ್ರದ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು ಪ್ರಶಂಸಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಆರ್ಥಿಕ ಶಕ್ತಿಯನ್ನು ಸಮರ್ಥವಾಗಿ ಬಳಸಿ ಕೃಷಿ, ನೀರಾವರಿ, ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯ, ಕೈಗಾರಿಕೆ ಹಾಗೂ ಉದ್ಯೋಗಾವಕಾಶಗಳ ವಿಸ್ತರಣೆಯಂತಹ ಬಹುಮುಖ ಕ್ಷೇತ್ರಗಳಿಗೆ ಸಮರ್ಪಕ ಅನುದಾನ ಮೀಸಲಿಡಲಾಗಿದೆ. ಇದು ಸಮಾಜದ ಎಲ್ಲಾ ವರ್ಗಗಳ ಸಮಗ್ರ ಅಭಿವೃದ್ಧಿಯನ್ನು ಸಾಧಿಸುವ ದಿಟ್ಟ ಹೆಜ್ಜೆಯಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ೧೭ನೇ ಬಜೆಟ್ ನಲ್ಲಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿರುವುದು ಗಮನಾರ್ಹ ಸಂಗತಿಯಾಗಿದೆ. ಜಿಲ್ಲೆಯ ಪ್ರಮುಖ ಕೇಂದ್ರವಾದ ಯಾದಗಿರಿ ನಗರದ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗಾಗಿ ಸುಮಾರು ?೨೮೭ ಕೋಟಿ ರೂಪಾಯಿ ವೆಚ್ಚದ ಭೂಗತ ಒಳಚರಂಡಿ (ಯುಡಿಜಿ) ಯೋಜನೆಗೆ ಮಂಜೂರಾತಿ ನೀಡಿರುವುದು ನಗರಾಭಿವೃದ್ಧಿಯ ದೃಷ್ಟಿಯಿಂದ ಐತಿಹಾಸಿಕ ಹಾಗೂ ದೀರ್ಘಕಾಲೀನ ಮಹತ್ವವನ್ನು ಹೊಂದಿರುವ ನಿರ್ಣಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅಲ್ಲದೆ ಜಿಲ್ಲೆಯ ಜನತೆ ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಅತ್ಯಾಧುನಿಕ ಆರೋಗ್ಯ ಸೇವೆಗಳ ವಿಸ್ತರಣೆಯ ಉದ್ದೇಶದಿಂದ ಯಾದಗಿರಿ ಇನ್ಸಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ಸ್ ಆಸ್ಪತ್ರೆಯಲ್ಲಿ ೨೦೦ ಹಾಸಿಗೆಗಳ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಅನುಮೋದನೆ ನೀಡಿರುವುದು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲಾಗಲಿದೆ. ಇದರಿಂದ ಜಿಲ್ಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಾವಿರಾರು ಜನರಿಗೆ ಅತ್ಯುತ್ತಮ ವೈದ್ಯಕೀಯ ಸೇವೆಗಳು ಸಕಾಲದಲ್ಲಿ ಲಭ್ಯವಾಗಲಿವೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ವಿಜ್ಞಾನಾಭಿಮಾನ ಮತ್ತು ಸಂಶೋಧನಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಯಾದಗಿರಿಯಲ್ಲಿ ವಿಜ್ಞಾನ ತಾರಾಲಯ ಸ್ಥಾಪನೆಗೆ ಅವಕಾಶ ಕಲ್ಪಿಸಿರುವುದು ವಿದ್ಯಾರ್ಥಿ ಸಮುದಾಯಕ್ಕೆ ಅಪಾರ ಪ್ರೇರಣೆಯಾಗಿ ಪರಿಣಮಿಸಲಿದೆ. ಇದು ಭವಿಷ್ಯದ ವಿಜ್ಞಾನಿಗಳ ತಯಾರಿಕೆಗೆ ಪೂರಕ ವಾತಾವರಣವನ್ನು ಸೃಷ್ಟಿಸಲಿದೆ ಎಂದು ಹೇಳಿದರು.
ಒಟ್ಟಾರೆವಾಗಿ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ದಿಟ್ಟವಾಗಿ ಮುಂದುವರಿಸುವುದರ ಜೊತೆಗೆ ಜನಸಾಮಾನ್ಯರ ಆಶಯ-ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವAತೆ ರೂಪಿಸಲಾದ ಈ ಬಜೆಟ್ ಸಾಮಾಜಿಕ ನ್ಯಾಯ, ಆರ್ಥಿಕ ಸಮತೋಲನ ಹಾಗೂ ಜನಕಲ್ಯಾಣದ ಸಂಕಲ್ಪವನ್ನು ಬಲಪಡಿಸುವ ಐತಿಹಾಸಿಕ ಆಯವ್ಯಯವಾಗಿದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ತಿಳಿಸಿದ್ದಾರೆ.























