
ಬೀದರ, ಮೇ ೨೬:ಶ್ರೀ ಕವಿ ಸರ್ವಜ್ಞ ಸಂಘ ಹುಪಳಾ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಸಹಯೋಗದಲ್ಲಿ ವಿಶ್ವಜ್ಯೋತಿ ಬಸವಣ್ಣನವರ ಕುರಿತು ವಿಚಾರಣ ಸಂಕಿರಣ ಮತ್ತು ಸಂಗೀತ ಕಲಾಪ್ರತಿಭೋತ್ಸವ ಕಾರ್ಯಕ್ರಮವನ್ನು ರವಿವಾರ ಬಸವ ಭಜನ, ಗಾಂಧಿನಗರ ಮೈಲೂರ್‌ನಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ. ಎಂ.ಜಿ. ದೇಶಪಾಂಡೆ ಅವರು, ಸರ್ಕಾರವು ಸಂಘ ಸಂಸ್ಥೆಗಳಿಗೆ ವಿಶೇಷ ಸಹಾಯ ಹಾಗೂ ಪ್ರೋತ್ಸಾಹ ನೀಡಿದಾಗ ಮಾತ್ರ ಇಂತಹ ಕಲಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿಯೂ ಇಂತಹ ಕಾರ್ಯಕ್ರಮಗಳ ಅಗತ್ಯತೆಯನ್ನು ಅವರು ಒತ್ತಿಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಸವೇಶ್ವರ ಮಂದಿರದ ಅಧ್ಯಕ್ಷ ಶ್ರೀ ನಾಗಭೂಷಣ ಮಡೆಪ್ಪಾ ಕಮಠಾಣೆ ಅವರು ಮಾತನಾಡಿ, ಹಳೆಯ ಜನಪದ ಕಲೆಗಳು ನಶಿಸುವ ಅಂಚಿನಲ್ಲಿದ್ದು, ಸರ್ವಜ್ಞ ಕಲಾ ಸಂಘವು ಗಾಂಧಿನಗರದಲ್ಲಿ ಬಸವಣ್ಣನವರ ವಿಚಾರಧಾರೆಗಳೊಂದಿಗೆ ಸಂಸ್ಕೃತಿ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಬಿಎಸ್‌ಎನ್‌ಎಲ್ ಅಧಿಕಾರಿ ಶ್ರೀ ಶಿವರಾಜ ಕಾಳಶೆಟ್ಟಿ ಅವರು ಬಸವಣ್ಣನವರ ಜೀವನ ಚರಿತ್ರೆ ಮತ್ತು ಅವರ ನಡೆದು ಬಂದ ದಾರಿಯ ಕುರಿತು ಸವಿವರವಾಗಿ ವಿವರಿಸಿದರು. ಕುಂಬಾರ ಸಮಾಜದ ಅಧ್ಯಕ್ಷ ಶ್ರೀ ವಿಠಲ ಕಾರಾಮುಂಗಿ ಸೇರಿದಂತೆ ಶ್ರೀ ನೂರಂದಪ್ಪ ಮೀನಕೇರಿ, ಶಾಮಣ್ಣಾ ನೇಳಗಿ ಹಾಗೂ ಶ್ರೀ ಮಲಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗೋಂದಳಿ ಪದ, ಗೀಗಿ ಪದ, ತತ್ವ ಪದ, ಭಜನೆ ಪದ, ಭಕ್ತಿಗೀತೆ, ಜಾನಪದ, ಮೊಹರಂ ಪದ, ಸಂಪ್ರದಾಯ ಪದ, ಮಹಿಳಾ ಡೊಳ್ಳು ಹಾಗೂ ಭುಲಾಯಿ ಪದ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ಪ್ರದರ್ಶನಗಳು ನಡೆದವು. ಕಲಾವಿದರಾದ ಶಿವಾಜಿ ಗೋಂದಳಿ, ದೇವದಾಸ ಚಿಮಕೋಡ, ಮಲ್ಲಪ್ಪ ಯರನಳ್ಳಿ, ಸುಧಾಕರ ಹುಪಳಾ, ಸುನೀಲ ಹುಪಳಾ, ಸಂತೋಷ ಜೋಳದಾಬಾ, ಬೇಬಾವತಿ ಶಿವರಾಜ, ಶಂಕರ ಕಚೊಂಡಿ, ಚಿನ್ನಮ್ಮ ದೊಡ್ಡಮನಿ, ಶೋಭಾವತಿ ಹಾಗೂ ಶಾಂತಾಬಾಯಿ ಬಾಬುರಾವ್ ಮತ್ತು ತಂಡಗಳು ಪ್ರೇಕ್ಷಕರನ್ನು ಮನರಂಜಿಸಿದರು.
ಕಾರ್ಯಕ್ರಮದ ಸ್ವಾಗತವನ್ನು ಮನೋಹರ ಹುಪಳಾ ನೆರವೇರಿಸಿದ್ದು, ನಿರೂಪಣೆಯನ್ನು ಶ್ರೀಮತಿ ಸಿದ್ದಮ್ಮ ಬಸವಣ್ಣೋರ್ ನಡೆಸಿಕೊಟ್ಟರು.


























