ಕಲಬುರಗಿ: ಸೆ.20:ಗರುಡ ಪುರಾಣದಲ್ಲಿ ಬರುವ ನರಕದ ವಿವರಣೆಗಳು ಕೆಲವೊಮ್ಮೆ ಭಯ ಹುಟ್ಟಿಸುವಂತಿದ್ದರೂ, ಅದರ ಮುಖ್ಯ ಉದ್ದೇಶವು ಮನುಷ್ಯನನ್ನು ಪಾಪಕರ್ಮಗಳಿಂದ ದೂರವಿಟ್ಟು, ಧರ್ಮ ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವುದಾಗಿದೆ. ಇದರ ಮೂಲಕ ಮರಣದ ನಂತರದ ಜೀವನದ ಬಗ್ಗೆ ಒಂದು ಮಾರ್ಗದರ್ಶನ ನೀಡುವುದು ಇದರ ಮುಖ್ಯ ಉದ್ದೇಶ ಎಂದು ವಿದ್ವಾಂಸ ಪಂಡಿತ್ ಶ್ರೀ ಗೋಪಾಲಾಚಾರ್ಯ ಅಕಮಂಚಿ ಹೇಳಿದರು.
ಕರುಣೇಶ್ವರ ನಗರದಲ್ಲಿರುವ ಶ್ರೀ ಜೈವೀರ್ ಹನುಮಾನ್ ಮಂದಿರದಲ್ಲಿ ಮಹಾಲಯ ಪಕ್ಷದ ಅಂಗವಾಗಿ, ಶ್ರೀ ಜೈವೀರ್ ಹನುಮಾನ್ ದೇವಸ್ಥಾನ ಅಭಿವೃದ್ಧಿ ಸಂಘ (ರಿ.) ಹಾಗೂ ವೇದವ್ಯಾಸ ಸೇವಾ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಿದ್ದ ಗರುಡ ಪುರಾಣ ಪ್ರವಚನ ಮಾಲಿಕೆ 19 ಸಪ್ಟಂಬರ್, ಶುಕ್ರವಾರ ಸಂಜೆ ಯಶಸ್ವಿಯಾಗಿ ಸಂಪನ್ನಗೊಂಡಿತು.
ಪ್ರವಚನದಲ್ಲಿ ಮಾತನಾಡಿದ ವಿದ್ವಾಂಸ ಪಂಡಿತ್ ಶ್ರೀ ಗೋಪಾಲಾಚಾರ್ಯ ಅಕಮಂಚಿ ಅವರು, “ಪಿತೃಪಕ್ಷ ಅಥವಾ ಮಹಾಲಯ ಪಕ್ಷದಲ್ಲಿ ಗರುಡ ಪುರಾಣವನ್ನು ಕೇಳುವುದು ಅತ್ಯಂತ ಶ್ರೇಷ್ಠ. ಮರಣಾನಂತರ ಆತ್ಮವು ಯಾವ ಲೋಕಕ್ಕೆ ಪಯಣಿಸುತ್ತದೆ, ಈ ಪಯಣದಲ್ಲಿ ಅದು ಎದುರಿಸಬೇಕಾದ ಕಷ್ಟಗಳು, ಅನುಭವಿಸಬೇಕಾದ ದುಃಖಗಳು, ನರಕ ಲೋಕದ ವಿವರಣೆಗಳು, ಒಟ್ಟು ನರಕಗಳ ಸಂಖ್ಯೆ, ಹಾಗೂ ಮರಣಾನಂತರ ನಮ್ಮ ಮಕ್ಕಳು ಮತ್ತು ಕರ್ತೃಗಳು ನಿರ್ವಹಿಸಬೇಕಾದ ಕರ್ಮಗಳ ಕುರಿತು ವಿಸ್ತಾರವಾಗಿ ತಿಳಿಸಿಕೊಟ್ಟರು,”
ಪಂಡಿತ್ ಶ್ರೀ ಗೋಪಾಲಾಚಾರ್ಯ ಅಕಮಂಚಿ ಅವರು, ಜೀವನದಲ್ಲಿ ನಾವು ಮಾಡುವ ಪ್ರತಿ ಕರ್ಮವೂ ನಮ್ಮ ಮುಂದಿನ ಜನ್ಮದ ಮೇಲೆ ಅಥವಾ ಮರಣಾನಂತರದ ಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಪುರಾಣದ ಉದಾಹರಣೆಗಳ ಮೂಲಕ ವಿವರಿಸಿದರು. ನರಕದಲ್ಲಿ ಅನುಭವಿಸಬೇಕಾದ ದುಃಖಗಳ ಸ್ವರೂಪ, ಪಿತೃಗಳ ತೃಪ್ತಿಗಾಗಿ ನಿರ್ವಹಿಸಬೇಕಾದ ಶ್ರಾದ್ಧ, ತರ್ಪಣ, ಪಿಂಡಪ್ರದಾನಗಳ ಮಹತ್ವ ಇತ್ಯಾದಿಗಳ ಬಗ್ಗೆಯೂ ಬೆಳಕು ಚೆಲ್ಲಿದರು.
ದೇವಸ್ಥಾನ ಸಮಿತಿ ಅಧ್ಯಕ್ಷರಾದ ಕಿಶನರಾವ್ ಮೊಟಮರಿ, ಪ್ರಮುಖರಾದ ಅವಿನಾಶ್ ಕುಲಕರ್ಣಿ, ಅನಿಲ್ ಕುಲಕರ್ಣಿ ವಿನುತ ಜೋಶಿ, ಆರ್ ಕೆ ಕುಲಕರ್ಣಿ, ಶ್ರೀಕಾಂತಾಚಾರ್ಯ ಕಾಕಲವಾರ್, ಶಾಮಾಚಾರ್ಯ ಜೋಶಿ, ಜಗನ್ನಾಥಾಚಾರ್ಯ ಸಾಗರ್, ವಿಜಯ್ ಕುಮಾರ್ ಕುಲಕರ್ಣಿ, ಪದ್ಮನಾಭಾಚಾರ್ಯ ಜೋಶಿ, ನರಸಿಂಗರಾವ್ ಕುಲಕರ್ಣಿ, ಸಂಜಯ್ ಮಾಡ್ಯಾಳಕರ್, ಬಾಲಕೃಷ್ಣ ಸಾಲವಾಡಗಿ, ಕೃಷ್ಣಮೂರ್ತಿ ಪಾಲ್ಮೂರ್, ಸುನಿಲ್ ಕುಲಕರ್ಣಿ, ಚಿದಂಬರ ದೇಶಪಾಂಡೆ, ಮುರಳಿಧರ್ ಕುಲಕರ್ಣಿ, ಸೀತಾರಾಮ ಕುಲಕರ್ಣಿ, ಬಿ ಜಿ ದೇಶಪಾಂಡೆ, ಎಲ್ ಕೆ ಜಡಗೇಕರ್, ಅರ್ಚಕರಾದ ಪ್ರದ್ಯುಮ್ನಾಚಾರ್ಯ ಜೋಶಿ, ವೆಂಕಟೇಶಾಚಾರ್ಯ ನೆಲೋಗಿ, ವ್ಯವಸ್ಥಾಪಕರಾದ ಚಂದ್ರಕಾಂತ್ ಕಡಗಂಚಿ ಸೇರಿದಂತೆ ಇತರರಿದ್ದರು.






















