Home ಜಿಲ್ಲೆ ದೇವನೊಲಿಸುವ ಸರಳ ವಿಧಾನ ಇಷ್ಟಲಿಂಗ ಯೋಗ

ದೇವನೊಲಿಸುವ ಸರಳ ವಿಧಾನ ಇಷ್ಟಲಿಂಗ ಯೋಗ

ಬೀದರ್: ಫೆ.೧೭:ಇಷ್ಟಲಿಂಗ ಯೋಗ ದೇವನನ್ನು ಒಲಿಸುವ ಸರಳ ವಿಧಾನ ಎಂದು ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ನುಡಿದರು.
ಮಹಾ ಶಿವರಾತ್ರಿ ನಿಮಿತ್ತ ಲಿಂಗಾಯತ ಸೇವಾ ದಳದಿಂದ ಇಲ್ಲಿಯ ಬಸವಗಿರಿಯ ಲಿಂಗಾಯತ ಮಹಾ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮದಲ್ಲಿ ಇಷ್ಟಲಿಂಗ ಪೂಜೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟು ಅವರು ಮಾತನಾಡಿದರು.
ಇಷ್ಟಲಿಂಗ ಯೋಗ ಆತ್ಮ-ಪರಮಾತ್ಮ ರಹಸ್ಯ ಭೇದಿಸಿ, ಲಿಂಗಾAಗ ಸಾಮರಸ್ಯ ಸಾಧಿಸುವ ಸಾಧನ. ಭಕ್ತರು ಈ ಸಾಧನೆಯಲ್ಲಿ ತೊಡಗಿಸಿಕೊಳ್ಳಲೆಂದೇ ಅಕ್ಕ ಅನ್ನಪೂರ್ಣತಾಯಿ ಅವರು ಶಿವಯೋಗ ಸಾಧಕರ ಕೂಟ ಸ್ಥಾಪಿಸಿದ್ದರು ಎಂದು ತಿಳಿಸಿದರು.
ಇಷ್ಟಲಿಂಗವು ಪರಮಾತ್ಮನ ಚುಳುಕಾದ ರೂಪ. ಬಸವ ಕರುಣೆಯಿಂದ ಅಂಗೈಗೆ ಬಂದು, ಪೂಜೆ ಸ್ವೀಕರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು.
ಶಿವಯೋಗದ ಪ್ರೇರಣೆಯಿಂದ ಎಲ್ಲರೂ ನಿತ್ಯ ಪೂಜೆ, ವಚನ ಪಠಣ ಮಾಡಬೇಕು. ಮಕ್ಕಳಿಗೂ ಲಿಂಗ ಪೂಜೆ ಕಲಿಸಬೇಕು. ಅದರಿಂದ ಸ್ಮರಣ ಶಕ್ತಿ ಹೆಚ್ಚುತ್ತದೆ ಎಂದು ತಿಳಿಸಿದರು.
ಶಿವರಾತ್ರಿ ಶಿವನನ್ನು ಸ್ಮರಿಸುವ ದಿನ. ಇಳೆ, ಮಳೆ, ಬೆಳೆಯನ್ನು ಜಗತ್ತಿಗೆ ನೀಡಿರುವ ಜಗದೊಡೆಯನನ್ನು ಸ್ಮರಿಸುವ, ಪೂಜಿಸುವ ಮೂಲಕ ಕೃತಜ್ಞತೆ ಸಲ್ಲಿಸುವ ಹಬ್ಬ ಎಂದು ಹೇಳಿದರು.
ಸಾಹಿತಿ ರಮೇಶ ಮಠಪತಿ ಮಾತನಾಡಿ, ಷಟಸ್ಥಲ ಜ್ಞಾನ ಚನ್ನಬಸವಣ್ಣನವರ ವಚನದಲ್ಲಿ ನವಚಕ್ರ ಭೇದಿಸುವ ಪ್ರಾಣಲಿಂಗಾರ್ಚನೆಯ ವಿಧಾನ ವಿವರಿಸಲಾಗಿದೆ ಎಂದು ತಿಳಿಸಿದರು.
ಅಕ್ಕ ಅನ್ನಪೂರ್ಣತಾಯಿ ಅವರ ಮಾರ್ಗದರ್ಶನದಂತೆ ವಚನಗಳ ಆಧಾರದ ಮೇಲೆ ಪ್ರಾಣಲಿಂಗ ಪೂಜೆ ಮಾಡಿಸಲಾಗುತ್ತಿದೆ. ಇದರ ಹೆಚ್ಚಿನ ಲಾಭ ಪಡೆಯಲು ನಸುಕಿನಲ್ಲಿ ಎದ್ದು ಪೂಜಿಸುವುದು ಸೂಕ್ತ. ಗಾಂಧಾರಿ ಮಾಂಧಾರಿಯೆAಬ ಅಹೋ ರಾತ್ರಿಯಲ್ಲಿ ಲಿಂಗವ ಪೂಜಿಸಬೇಕೆಂದು ಬಸವಣ್ಣನವರು ಹೇಳಿದ್ದಾರೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಶರಣಬಸವ, ರಾಯಚೂರಿನ ಕೈಗಾರಿಕಾ ಇಲಾಖೆಯ ಉಪ ನಿರ್ದೇಶಕ ರಾಜಕುಮಾರ ಪಾಟೀಲ, ನೀಲಮ್ಮನ ಬಳಗದ ನೀಲಮ್ಮ ರೂಗನ್ ಮುಖ್ಯ ಅತಿಥಿಯಾಗಿದ್ದರು. ಲಿಂಗಾಯತ ಮಹಾ ಮಠದ ಕಾರ್ಯದರ್ಶಿ ಚನ್ನಬಸಪ್ಪ ಹಂಗರಗಿ ಅಧ್ಯಕ್ಷತೆ ವಹಿಸಿದ್ದರು.
ಕದಳಿಶ್ರೀ ವಚನ ನೃತ್ಯ ಪ್ರದರ್ಶಿಸಿದರು. ನೀಲಮ್ಮನ ಬಳಗದ ಸಿದ್ದಮ್ಮ ಹಾಗೂ ಸಂಧ್ಯಾರಾಣಿ ಮುತ್ತಂಗಿ ಪ್ರಾರ್ಥನೆ ನಡೆಸಿಕೊಟ್ಟರು. ಲಿಂಗಾಯತ ಸೇವಾ ದಳದ ಅಧ್ಯಕ್ಷ ಅಭಿಷೇಕ ಮಠಪತಿ ಸ್ವಾಗತಿಸಿದರು. ನಂತರ ವಚನ ಭಜನೆ ಮತ್ತು ಧ್ಯಾನಗಳು ನಡೆದವು.