
ತುಮಕೂರು, ಅ. ೬- ಜಿಲ್ಲೆಯ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಿರ್ಮಾಣಗೊಂಡು ಮೈಸೂರು ದಸರಾ ಉತ್ಸವದ ಜಂಬೂ ಸವಾರಿಯಲ್ಲಿ ತುಮಕೂರು ಜಿಲ್ಲೆಯನ್ನು ಪ್ರತಿನಿಧಿಸಿದ ಸ್ತಬ್ಧ ಚಿತ್ರವು ಭಾರೀ ಜನಮೆಚ್ಚುಗೆ ಗಳಿಸಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಹೇಳಿದರು.
ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ಸ್ತಬ್ಧ ಚಿತ್ರ ಮೆರವಣಿಗೆಗೆ ನಗರದ ಬಿ.ಜಿ.ಎಸ್. ವೃತ್ತದ ಬಳಿ ಚಾಲನೆ ನೀಡಿ ಮಾತನಾಡಿದ ಅವರು, ಈ ಸ್ತಬ್ಧ ಚಿತ್ರವನ್ನು ತಿಪಟೂರಿನ ಪ್ರತಿಭಾವಂತ ಕಲಾವಿದ ಕೃಷ್ಣ ಅವರು ನಿರ್ಮಿಸಿದ್ದು, ತುಮಕೂರು ಜಿಲ್ಲೆಯ ಭಾವೈಕ್ಯತೆ, ಜೈನ ಮತ್ತು ಹಿಂದೂ ಸಂಸ್ಕೃತಿಯ ಸಮನ್ವಯವನ್ನು ಸ್ತಬ್ಧಚಿತ್ರದಲ್ಲಿ ಅನಾವರಣಗೊಳಿಸುವ ಪ್ರಯತ್ನ ಮಾಡಲಾಗಿದೆ ಎಂದರು.
ಮಂದರಗಿರಿ ದೇವಾಲಯದ ವಿನ್ಯಾಸದ ಆಕರ್ಷಕ ವಾಸ್ತುಶಿಲ್ಪ ಹಾಗೂ ಹೊಯ್ಸಳ ವಾಸ್ತುಶಿಲ್ಪದ ಶೈಲಿಯಲ್ಲಿರುವ ಅರಳುಗುಪ್ಪೆಯ ಶ್ರೀ ಚೆನ್ನಕೇಶವ ದೇವಾಲಯದ ಮಾದರಿಯನ್ನೂ ಸಹ ಸ್ತಬ್ಧ ಚಿತ್ರದಲ್ಲಿ ಕಾಣಬಹುದಾಗಿದೆ ಎಂದು ತಿಳಿಸಿದರು.
ತುಮಕೂರಿನ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಈ ಸ್ತಬ್ಧ ಚಿತ್ರವನ್ನು ವಿದ್ಯಾರ್ಥಿಗಳು, ನಾಗರಿಕರು ಮತ್ತು ಮಕ್ಕಳಿಗೂ ವೀಕ್ಷಣೆಗೆ ಅವಕಾಶ ನೀಡುವ ಉದ್ದೇಶದಿಂದ ಮೈಸೂರಿನಿಂದ ತುಮಕೂರಿಗೆ ತರಲಾಗಿದೆ. ಸ್ತಬ್ಧ ಚಿತ್ರವನ್ನು ಬಿ.ಜಿ.ಎಸ್ ರಸ್ತೆ-ಅಶೋಕ ರಸ್ತೆ-ಡಿಸಿ ಕಚೇರಿ ವೃತ್ತ-ಅಮಾನಿಕೆರೆ ರಸ್ತೆ-ಕೆಇಬಿ ರಸ್ತೆ- ಶಿವಕುಮಾರ ಸ್ವಾಮೀಜಿ ವೃತ್ತ- ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣ-ಬಿ.ಜಿ.ಎಸ್ ವೃತ್ತ ಮಾರ್ಗದಲ್ಲಿ ಮೆರವಣಿಗೆಯ ಮೂಲಕ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಂಜೀವಪ್ಪ, ಈಶ್ವರಪ್ಪ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

































