
ಆಳಂದ:ನ.೨೫: ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ತಾಲೂಕು ಯೋಜನಾ ಮತ್ತು ಅಭಿವೃದ್ಧಿ ಸಮಿತಿ ಸಭೆಯಲ್ಲಿ ೨೦೨೬-೨೭ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಗೆ ಸಮಿತಿ ಅನುಮೋದನೆ ನೀಡಿದೆ. ತಾಲೂಕಿನ ೪೨ ಗ್ರಾಮ ಪಂಚಾಯಿತಿಗಳು, ಆಳಂದ್ ಪಟ್ಟಣ ಪುರಸಭೆ ಹಾಗೂ ತಾಲೂಕು ಮಟ್ಟದ ಎಲ್ಲ ಸರ್ಕಾರಿ ಇಲಾಖೆಗಳ ವ್ಯಾಪ್ತಿಯಲ್ಲಿ ದೃಢೀಕೃತಗೊಂಡಿರುವ ರಸ್ತೆ, ಕುಡಿಯುವ ನೀರು, ಶಾಲಾ ಕಟ್ಟಡ, ಆಸ್ಪತ್ರೆ, ಆಂಗನವಾಡಿ ಸೇರಿದಂತೆ ನೂರಾರು ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ೧೧೮೬ ಕೋಟಿ ರೂಪಾಯಿಗಳ ಅಂದಾಜು ಮೊತ್ತದ ಕ್ರಿಯಾ ಯೋಜನೆಗೆ ಒಪ್ಪಿಗೆ ಸಿಕ್ಕಿದೆ.
ಈ ಪ್ರಸ್ತಾವನೆಯನ್ನು ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರೂ ಆಳಂದ್ ಶಾಸಕರೂ ಆದ ಬಿ.ಆರ್. ಪಾಟೀಲ್ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಳಂದ್ ತಾಲೂಕು ರಾಜ್ಯದಲ್ಲೇ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದು. ಆದರೆ ಕಳೆದ ಹಲವು ವರ್ಷಗಳಲ್ಲಿ ನಾವು ಸಾಧಿಸಿರುವ ಪ್ರಗತಿ ಗಮನಾರ್ಹ. ಈ ಬಾರಿ ೧೧೮೬ ಕೋಟಿ ರೂಪಾಯಿಗಳ ಯೋಜನೆಯನ್ನು ಸರ್ಕಾರಕ್ಕೆ ಕಳುಹಿಸುತ್ತಿದ್ದೇವೆ. ಇದು ತಾಲೂಕಿನ ಇತಿಹಾಸದಲ್ಲೇ ದೊಡ್ಡ ಮೊತ್ತ. ಗ್ರಾಮಗಳಿಗೆ ರಸ್ತೆ, ನೀರು, ವಿದ್ಯುತ್, ಶಾಲಾ-ಆಸ್ಪತ್ರೆ ಸೌಲಭ್ಯಗಳನ್ನು ಒದಗಿಸುವುದೇ ನಮ್ಮ ಆದ್ಯತೆ” ಎಂದು ಹೇಳಿದರು.
ದೂರದೃಷ್ಟಿಯಾಗಿ ಜಿಪಂ ತಾಪಂ ಮತ್ತು ಗ್ರಾಪಂ ವ್ಯಾಪ್ತಿಯ ಸ್ಥಳೀಯ ಸಮಸ್ಯೆಗಳನ್ನು ನಿವಾರಿಸಲು ಕ್ರಿಯಾ ಯೋಜನೆ ಅಸ್ತಿತ್ವಕ್ಕೆ ತರಬೇಕಾಗಿದೆ. ಗ್ರಾಮ ಸಭೆಗಳಲ್ಲಿ ಆದ ನಿರ್ಣಯಗಳೆ ಅಂತಿಮವಾಗಿದೆ. ಎಲ್ಲೋ ದೂರದ ಬೆಂಗಳೂರಿನಲ್ಲಿ ಕುಳಿತುÀ ಗ್ರಾಮ ಮಟ್ಟದ ಕೆಲಸಗಳನ್ನು ಕೆತ್ತಿಕೊಳ್ಳಬಾರದು ಎಂಬ ಉದ್ದೇಶಿದಂದಾಗಿ ಸ್ಥಳೀಯ ಮಟ್ಟದ ವ್ಯವಸ್ಥೆ ಸುಧಾರಣೆಗೆ ಈ ಸಮಿತಿಯ ಯೋಜನೆಯ ಕಾರ್ಯರೂಪಕ್ಕೆ ತರಬೇಕಾಗಿದೆ ಎಂದು ಶಾಸಕರು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾ ಅಧಿಕಾರಿಯೂ ಆಗಿರುವ ಸಮಿತಿಯ ಸಹ-ಅಧ್ಯಕ್ಷ ಶರಣಯ್ಯ ಮಠಪತಿ, ಸಮಿತಿ ಸದಸ್ಯ ಕಾರ್ಯದರ್ಶಿ ತಾ.ಪಂ. ಇಒ ಮಾನಪ್ಪ ಕಟ್ಟಿಮನಿ, ಸಮಿತಿ ಉಪಾಧ್ಯಕ್ಷ ಕಮಲಾನಗರ್ ಗ್ರಾಪಂ ಅಧ್ಯಕ್ಷ ಮಡಿವಾಳಪ್ಪ ಸಾಹುಪಾಟೀಲ್ ಹಾಗೂ ವಿಶೇಷ ಆಹ್ವಾನಿತರಾಗಿ ಬೆಳಮಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ್ ತುಕಾರಾಂ ಬೋಧನ್ ಗ್ರಾಪಂ ಅಧ್ಯಕ್ಷೆ ಸುಷ್ಮಾ ನವ್ಲೇ, ಆಳಂಗಾ ಗ್ರಾಪಂ ಅಧ್ಯಕ್ಷೆ ರಾಣಿ ರಾಜೇಂದ್ರ, ಸರ್ಕಾರಿ ಐಟಿಐ ಪ್ರಾಚಾರ್ಯ ಸಿದ್ದಪ್ಪ ಜಮಾದಾರ್, ಸರ್ಕಾರಿ ಪದವಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ. ಪ್ರಮೀಳಾ ಅಂಬರಾಯ, ಕೆವಿಕೆ ಕಾರ್ಯಕ್ರಮ ಸಂಯೋಜಕ ಡಾ. ರಾಜು ತೆಗ್ಗಳ್ಳಿ, ಲೀಡ್ ಬ್ಯಾಂಕ್ ಮ್ಯಾನೇಜರ್ ರವಿ ಗೌಡ ಉಪಸ್ಥಿತರಿದ್ದರು. ಇದಲ್ಲದೆ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.























