
ಕಲಬುರಗಿ:ಸಂಗೀತಲೋಕದ ಹೆಮ್ಮೆಯ ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂರವರ 6ನೇ ಪುಣ್ಯಸ್ಮರಣೆ ನಿಮಿತ್ಯ ಮರೆಯದ ನೆನಪನು ಎದೆಯಲ್ಲಿ ತಂದೆ ನೀನು ಶೀರ್ಷಿಕೆಯ ಗೀತನಮನ ಕಾರ್ಯಕ್ರಮ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸ್ವರಾಂಜಲಿ ಮೆಲೋಡಿಸ್ ವತಿಯಿಂದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಎಸ್.ಪಿ.ಬಿ. ಅವರ ಭಾವಚಿತ್ರಕ್ಕೆ ಹಿರಿಯ ಕಲಾವಿದರಾದ ಎಂ.ಜಿ.ಘನಾತೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಾಧ್ಯಾಪಕರಾದ ಡಾ. ಬಾಬುರಾವ ಶೇರಿಕಾರ, ವಿಶ್ವಕರ್ಮ ಹೋರಾಟ ಸಮಿತಿ ಅಧ್ಯಕ್ಷರಾದ ದೇವಿಂದ್ರ ದೇಸಾಯಿ ಕಲ್ಲೂರ, ಹೋಮಿಯೋಪಥಿ ವೈದ್ಯರಾದ ಡಾ. ಎಸ್.ಎಸ್. ಪಾಟೀಲ, ಕಸಾಪ ಕೋಶಾಧ್ಯಕ್ಷರಾದ ಶರಣರಾಜ ಛಪ್ಪರಬಂದಿ, ಅಭಿಯಂತರರಾದ ಶಿವಾನಂದ ಸುರವಸೆ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಝೀ ಕನ್ನಡ ನ್ಯೂಸ್ ಕರ್ನಾಟಕ ಐಡಲ್ ಅವಾಡ್ರ್ಸ್-2026 ಪ್ರಶಸ್ತಿಗೆ ಭಾಜನರಾದ ಕಲಬುರಗಿಯ ಸಾಹಿತಿ, ಪರಿಸರಪ್ರೇಮಿ, ಕವಿ, ಸಂಗೀತ ಕಲಾವಿದ ಹಾಗೂ ಖ್ಯಾತ ಹೋಮಿಯೋಪಥಿ ವೈದ್ಯರಾದ ಡಾ. ಎಸ್.ಎಸ್.ಪಾಟೀಲ ಮಂದರವಾಡ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳು ಮಾತನಾಡುವುದಕ್ಕಿಂತ ಗಾನ ಗಾರುಡಿಗ, ಸ್ವರಮಾಂತ್ರಿಕ ಎಸ್.ಪಿ.ಬಿ. ಅವರು ವಿವಿಧ ಭಾಷೆಗಳಲ್ಲಿ 40 ಸಾವಿರಕ್ಕಿಂತ ಹೆಚ್ಚು ಹಾಡುಗಳನ್ನು ಹಾಡಿರುವುದು ವಿಶೇಷವಾಗಿರುವುದರಿಂದ ಅವರು ಹಾಡಿರುವ ಅನೇಕ ಕನ್ನಡ ಹಿಂದಿ ಗೀತೆಗಳನ್ನು ಸ್ವರಾಂಜಲಿ ಮೆಲೋಡಿಸ್ ತಂಡದ ಗಾಯಕರಾದ ಮಮತಾ ಜೋಶಿ, ಲಕ್ಷ್ಮೀ ಕುಲಕರ್ಣಿ, ಕಾವೇರಿ ಹಿರೇಮಠ, ರವೀಂದ್ರ ಕುಲಕರ್ಣಿ, ಶಿವಾನಂದ ಸುರವಸೆ ಅವರು ಹಾಡುವುದರ ಮೂಲಕ ಗೀತನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಕಲಾಭಿಮಾನಿಗಳ ಮನತಣಿಸಿದರು.
ಕಸಾಪ ಗೌರವ ಕಾರ್ಯದರ್ಶಿಗಳಾದ ಧರ್ಮಣ್ಣ ಹೆಚ್. ಧನ್ನಿ ಸ್ವಾಗತಿಸಿದರು. ಶಿವರಾಜ ಎಸ್. ಅಂಡಗಿ ನಿರೂಪಿಸಿದರು. ಸ್ವರಾಂಜಲಿ ಮೆಲೋಡಿಸ್ನ ಸಂಯೋಜಕರಾದ ಸಿದ್ದರಾಮ್ ಹಂಚನಾಳ ಅವರು ಕೂಡ ಅನೇಕ ಕನ್ನಡ ಹಿಂದಿ ಗೀತೆಗಳನ್ನು ಹಾಡುವುದರ ಮೂಲಕ ರಂಜಿಸಿ ಆಗಮಿಸಿದ ಎಲ್ಲಾ ಕಲಾವಿದರಿಗೆ, ಸಂಗೀತಾಭಿಮಾನಿಗಳಿಗೆ ವಂದನಾರ್ಪಣೆ ಸಲ್ಲಿಸಿದರು.

























