
ಬೀದರ್:ಮಾ.7:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿರುವ ರಾಜ್ಯ ಬಜೆಟ್ ದಿಕ್ಕು ತಪ್ಪಿದ ದೋಣಿಯಂತಿದೆ.
ರಾಜ್ಯದ ಸಾಲದ ಹೊರೆ ದಾಖಲೆ ಹೆಚ್ಚಾಗಿದೆ. ಬಜೆಟ್ ಗಾತ್ರ 4.48 ಲಕ್ಷ ಕೋಟಿಗೇರಿರುವುದು ಜನರಿಗೆ ಮರಳು ಮಾಡುವ ಅಂಕಿ-ಅಂಶಗಳ ಮಾಯಾಜಾಲದಿಂದ ಕೂಡಿದೆ. ಯಾವುದೇ ಗೊತ್ತು, ಗುರಿ ಇಲ್ಲದ ಸತ್ವಹೀನ ಬಜೆಟ್ ಇದಾಗಿದೆ ಎಂದು ಬೀದರ್ ದಕ್ಷಿಣ ಶಾಸಕರಾದ ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ.ಶೈಲೇಂದ್ರ ಬೆಲ್ದಾಳೆ ಅಭಿಪ್ರಾಯಪಟ್ಟಿದ್ದಾರೆ.
ಬಜೆಟ್‍ನಲ್ಲಿ ಹಿಂದುಳಿದ ಬೀದರ್ ಜಿಲ್ಲೆಗೆ ಸಂಪೂರ್ಣ ಕಡೆಗಣಿಸಲಾಗಿದೆ. ಗಡಿ ಜಿಲ್ಲೆಯ ಜನರ ನಿರೀಕ್ಷೆಗಳೆಲ್ಲವೂ ಈ ಬಜೆಟ್ ಹುಸಿಗೊಳಿಸಿದೆ. ಜಿಲ್ಲೆಯಿಂದ ಇಬ್ಬರು ಸಚಿವರಿದ್ದರೂ ಜನರ ನಿರೀಕ್ಷೆಯಂತೆ ಯೋಜನೆ ತರುವಲ್ಲಿ ವಿಫಲರಾಗಿದ್ದಾರೆ. ಜಿಲ್ಲೆ ಅಭಿವೃದ್ಧಿಗೆ ಪೂರಕವಲ್ಲದ ಅತ್ಯಂತ ನಿರಾಶಾದಾಯಕ ಮತ್ತು ಬೇಕಾರ್ ಬಜೆಟ್ ಇದಾಗಿದೆ ಎಂದು ಟೀಕಿಸಿದ್ದಾರೆ.
ಬಜೆಟ್‍ನಲ್ಲಿ ಯಾವುದೇ ದೂರಗಾಮಿ ಯೋಜನೆಗಳನ್ನು ಪ್ರಸ್ತಾಪಿಸಿಲ್ಲ. ಕಾರಂಜಾ ಸಂತ್ರಸ್ತರಿಗೆ ವೈಜ್ಞಾನಿಕ ಪರಿಹಾರ, ಪ್ಯಾಕೇಜ್ ಬಗ್ಗೆ ಚಕಾರವೆತ್ತಿಲ್ಲ. ಬಿಎಸ್‍ಎಸ್‍ಕೆ ಪುನಶ್ಚೇತನ, ಪ್ರವಾಸೋದ್ಯಮಕ್ಕೆ ಉತ್ತೇಜನ, ಕೃಷಿ ಕಾಲೇಜು ಸ್ಥಾಪನೆ ಪ್ರಸ್ತಾಪಿಸಿಲ್ಲ. ದುಡಿಯುವ ಕೈಗಳಿಗೆ ಕೆಲಸ ಕೊಡಲು ಬೃಹತ್ ಉದ್ಯಮ ಸ್ಥಾಪನೆಗೆ ಚಿಂತಿಸಿಲ್ಲ. ಗೋದಾವರಿ ಜಲಾನಯನದ ಪಾಲಿನ ನೀರಿನ ಸದ್ಬಳಕೆಗೂ ಯೋಜನೆ ಘೋಷಿಸಿಲ್ಲ. ಮಹತ್ವದ ಬೀದರ್-ನಾಂದೇಡ್ ರೈಲ್ವೆ ಮಾರ್ಗಕ್ಕೆ ರಾಜ್ಯದ ಪಾಲು ಪ್ರಕಟಿಸಿಲ್ಲ. ಮಹಾರಾಷ್ಟ್ರ ಸರ್ಕಾರ ಕೇಂದ್ರಕ್ಕೆ ಶೇ.50 ಸಹಭಾಗಿತ್ವ ನೀಡಲು ಘೋಷಿಸಿದರೂ ರಾಜ್ಯ ಸರ್ಕಾರ ಇದಕ್ಕೆ ನಿರ್ಲಕ್ಷಿಸಿದೆ. ಹಳ್ಳಿಗಳಿಂದ ಕೂಡಿದ ಬೀದರ್ ದಕ್ಷಿಣ ಕ್ಷೇತ್ರ ಸೇರಿ ಜಿಲ್ಲೆಯ ಪಾಲಿಗೆ ಈ ಬಜೆಟ್ ನಿಷ್ಪ್ರಯೋಜಕವಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ.
ಖಾಸಗಿ ವಚನ ವಿವಿಗೆ ಬಸವಕಲ್ಯಾಣದಲ್ಲಿ 25 ಎಕರೆ ಜಾಗ ಕೊಡುವುದಾಗಿ ಹೇಳಿರುವುದು ಸ್ವಾಗತಾರ್ಹ. ಬಸವಕಲ್ಯಾಣದ ನೂತನ ಅನುಭವ ಮಂಟಪ ಕೆಲಸ ಈ ವಷಾರ್ಂತ್ಯ ಮುಗಿಸುವುದಾಗಿ ಮತ್ತೆ ಘೋಷಿಸಲಾಗಿದೆ. ಬೀದರ್ ಕಾರಾಗೃಹ ಕೆಲಸ ಸಹ ಸಂಪೂರ್ಣ ಮುಗಿದಿದ್ದು, ಇದನ್ನು ಬಜೆಟ್‍ನಲ್ಲಿ ಸಾಧನೆ ಎಂಬಂತೆ ಪ್ರಸ್ತಾಪಿಸಲಾಗಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆ ನಿಟ್ಟಿನಲ್ಲಿ ಪೆÇ್ರ.ಗೋವಿಂದರಾವ್ ಸಮಿತಿ ಶಿಫಾರಸ್ಸುಗಳನ್ನು ತಾತ್ವಿಕವಾಗಿ ಒಪ್ಪಿರುವುದಾಗಿ ತಿಳಿಸಿದರೂ ಇದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ರಾಜ್ಯದ ಸಾಲದ ಹೊರೆ 8 ಲಕ್ಷ ಕೋಟಿ ರೂ. ದಾಟಿದ್ದು, ಸರ್ಕಾರದ ಆರ್ಥಿಕ ಸ್ಥಿತಿ ಸರಿಯಿಲ್ಲ. ಪಂಚ ಗ್ಯಾರಂಟಿಗಳು ಅರ್ಥ ವ್ಯವಸ್ಥೆ ಹಳಿ ತಪ್ಪಿಸಿ ಸರ್ಕಾರಕ್ಕೆ ದಿವಾಳಿಯತ್ತ ದೂಡಿದಂತೆ ಕಾಣುತ್ತಿದೆ ಎಂದು ದೂರಿದ್ದಾರೆ.
ರಾಜ್ಯದ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ ಸಾಲದ ಹೊರೆ ಹೆಚ್ಚಾಗಿದೆ. ಪ್ರತಿಯೊಬ್ಬರ ತಲೆ ಮೇಲೆ ಮುಂದಿನ ದಿನಗಳಲ್ಲಿ 2 ಲಕ್ಷ ರೂ. ಸಾಲದ ಹೊರೆ ಇರಲಿದೆ. ಪಂಚ ಗ್ಯಾರಂಟಿ ಯೋಜನೆ ಜಾರಿಗೆ ಹೆಣಗಾಡುತ್ತಿರುವ ಸರ್ಕಾರ ಎಲ್ಲ ಹಣ ಇವುಗಳ ಅನುಷ್ಠಾನಕ್ಕೆ ವ್ಯಯಿಸುತ್ತಿದ್ದರಿಂದ ಹೊಸ ಮೂಲಸೌಕರ್ಯ ಯೋಜನೆಯ ಕೆಲಸಕ್ಕೆ ಅನುದಾನ ಇಲ್ಲದಂತಾಗಿದೆ. ಇದು ದಿಕ್ಕು, ದೆಸೆಯಿಲ್ಲದ ಬರೀ ಘೋಷಣೆಗೆ ಸೀಮಿತವಾದ ಬಜೆಟ್ ಎಂದು ಕಿಡಿಕಾರಿದ್ದಾರೆ.




















