ಖಾಕಿಯ ಸ್ಲೋಚ್ ಕ್ಯಾಪ್‌ಗೆ ಪ್ರೀತಿಯ ಸೆಲ್ಯೂಟ್

ಕೋಲಾರ,ಅ.೩೦: ನಾ ಕಾಣದ ಕನಸಲ್ಲಿ ಬಂದು ನನ್ನೆಲ್ಲಾ ಕನಸುಗಳ ನನಸು ಮಾಡಿದೆ ನೀ….ನೀನು ಬರೀ ಕ್ಯಾಪ್ ಅಷ್ಟೇ ಅಲ್ಲ ನನಗೂ- ನನ್ನ ಮನೆಗೂ ಕಿರೀಟ ವಾಗಿದ್ದೆ ನೀ….ನನ್ನೆಲ್ಲಾ ಹಸಿವು- ಬಡತನ- ಕಷ್ಟದ ರಾತ್ರಿಗಳಿಗೂ ಅರ್ಥ ತುಂಬಿದೆ ನೀ….ಶಿಸ್ತಿನ ಇಲಾಖೆಗೆ ಆಧಾರ ಸ್ತಂಭವಾಗಿ-ದಶಕದ ಒಲುಮೆಯ ಸಂಗಾತಿ ನೀ….
ನನ್ನ ಬಂಧುವಾಗಿ -ಸ್ಮರಣಿಕೆಯ ಬತ್ತಳಿಕೆಯಲ್ಲಿ ಅಳಿಯದೆ ಉಳಿದ ಖಾಕಿಯ ಖದರ್ ನೀ…
ಊರಿವ ಬಿಸಿಲಿಗೆ ನೆರಳಾಗಿ-ಜೋ ಎನ್ನುವ ಮಳೆಗೆ ಕೊಡೆಯಾಗಿ -ತೂಕಡಿಕೆಗೆ ತಲೆದಿಂಬಾಗಿದ್ದು ನೀ….
ಇಂದು ತೆರೆಮರೆಗೆ ಸರಿದು – ಮೌನಿಯಾಗಿ ಮನಸ್ಸಿನಲ್ಲಿ ಮರೆಯದ ಛಾಯೆಯಾದೆ….
ಇದು ಆಧುನಿಕತೆಯ ಕಾರಣವೋ – ಪೊಲೀಸ್ ಇಲಾಖೆಯ ಸ್ಪೂರ್ತಿಯ ನಡೆಯೋ- ಸಿಕ್ಕ- ಸಿಕ್ಕವರಿಗೆ ಸಲಾಂ ಹೊಡೆಯದ ಮನಸ್ಸಾಕ್ಷಿ ಗಾಗಿ ರಾಜಿನಾಮೆಯೋ -ಆತ್ಮಹತ್ಯೆವೋ…ಒಟ್ಟಾಗಿ ಹೇಳಲೇಬೇಕು ಖಾಕಿಯ ಸ್ಲೋಚ್ ಕ್ಯಾಪ್ ಗೆ ಪ್ರೀತಿಯ ಸೆಲ್ಯೂಟ್.
ಹೊಳಲಿ ಅಮರೇಶ್,
ಬೆಂಗಳೂರು ನಗರ ಪೊಲೀಸ್.