“ವಚನ ಸಾಹಿತ್ಯ ರಕ್ಷಣೆಗೆ ಜೀವ ಸವೆದ ಹಳಕಟ್ಟಿ” ಜಿ.ಎಂ.ಕೋಟ್ಯಾಳ

ಆಲಮಟ್ಟಿ :ಜು.4: ಬಸವಾದಿ ಶರಣ,ಶರಣೆಯರು ರಚಿಸಿದ ವಚನ ಸಾಹಿತ್ಯ ಉಳವಿಗಾಗಿ ಡಾ,ಫ.ಗು.ಹಳಕಟ್ಟಿಯವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ.ವಿಷಮಶೀತಕ್ಕೆ ಅವರು ಒಳಗಾದರೂ ಸಹ ವಚನ ನಿಧಿ ಸಂರಕ್ಷಣೆಗೆ ಹಗಲು ರಾತ್ರಿಯನ್ನದೆ ತಡಕಾಡಿ ಜೀವ ಸವೆದಿದ್ದಾರೆ. ಜೀವದ ಹಂಗ ತೊರೆದು ನಮಗೆಲ್ಲ ವಚನಾಮೃತದ ಸವಿರಸ ಉಣಬಡಿಸಿದ್ದಾರೆ ಎಂದು ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ನುಡಿದರು.
ಸ್ಥಳೀಯ ಎಸ್.ವ್ಹಿ.ವ್ಹಿ. ಸಂಸ್ಥೆಯ ರಾವಬಹದ್ದೂರ ಫ.ಗು.ಹಳಕಟ್ಟಿ (ಆರ್.ಬಿ.ಪಿ.ಜಿ) ಪ್ರೌಢಶಾಲೆಯಲ್ಲಿ ಬುಧವಾರ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿಯವರ 145 ನೇ ಜನ್ಮದಿನೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಳಕಟ್ಟಿಯವರು ವಚನ ಸಾಹಿತ್ಯ ಲೋಕಕ್ಕೆ ಅರ್ಪಿತರಾಗಿ ಗೈದ ಅಮೋಘ ಪುಣ್ಯ ಕಾಯಕದ ಸೇವೆ ಸ್ಮರಣೀಯವಾಗಿವೆ.ಅವು ವಚನ ಪ್ರಿಯರ ಜನಮನದಲ್ಲಿ ಅಚ್ಚಳಿಯಾಗಿ ಉಳಿದಿದೆ ಎಂದರು.
ಶರಣ ಸಂಸ್ಕøತಿಯಲ್ಲಿ ಬೆರೆತು ಹೋದ ವಚನ ಸಂಪತ್ತಿನ ಅಮೂಲ್ಯ ರತ್ನ ಹಳಕಟ್ಟಿಯವರ ಅಗಣಿತ ಸೇವೆ ಎಂದು ಮರೆಯಲಾಗದು. ಈ ಮಹಾನುಭಾವರ ವಚನ ರಂಗದ ಕೃಷಿ ಸಾಹಿತ್ಯ, ಸಾಂಸ್ಕೃತಿಕ ಪ್ರಜ್ಞೆ ಸಾಕ್ಷೀಕರಿಸುತ್ತವೆ.ವಚನ ತತ್ವದ ಶಾಸ್ತ್ರ, ಸಿದ್ದಾಂತಗಳಿಗೆ ಮರುಜನ್ಮ ನೀಡಿವೆ ಎಂದರು.
ಮೌಲ್ಯಭರಿತ ಲೇಪನದ ಆದರ್ಶ ಸಾಧಕರಾಗಿರುವ ಹಳಕಟ್ಟಿಯವರು ಸರಳತೆ,ಪ್ರಾಮಾಣಿಕತೆ ಸೇವೆ ಆವಣೀ9ಯವಾಗಿವೆ. ವಚನ ಜ್ಞಾನ ಜ್ಯೋತಿಯ ಪರಿಮಳಯುತ ಸಂಸ್ಕಾರ ಶ್ರೀಗಂಧದ ಸುವಾಸನೆ ಸಮಾಜದಲ್ಲಿ ಬೀರಿವೆ. ವಚನ ರಸಗವಳಕ್ಕೆ ನವದಿಕ್ಕು ದಿಸೆ ತೋರಿ ವಿಶ್ವಮಾನ್ಯ ವ್ಯಕ್ತಿಯಾಗಿ ಈ ಜ್ಞಾನ ಜಂಗಮ ಹಳಕಟ್ಟಿಯವರು ಅಜರಾಮರಾಗಿದ್ದಾರೆ ಎಂದರು.
ವಚನ ಸಾಹಿತ್ಯ ಲೋಕದ ವಿದ್ವಾಂಸರಲ್ಲಿ ಅತ್ಯಂತ ಶ್ರೇಷ್ಠ ವಿದ್ವಾಂಸರಾಗಿ ಮಿನುಗಿರುವ ಡಾ,ಹಳಕಟ್ಟಿಯವರ ವಚನ ರಕ್ಷಣಾ ಕೃಷಿ ಪಯಣ ರೋಚಕಮಯವಾಗಿದೆ. ಪ್ರಜ್ಞಾವಂತರಲ್ಲಿ ಪರಿಜ್ಞಾನ ಮೂಡಿಸಿವೆ.ವಚನ ಭಂಡಾರದ ಸುಗಂಧ ಪ್ರಕಾಶನ ಜನರ ಹೃದಯವನ್ನು ತಟ್ಟಿವೆ. ಹೃನ್ಮನ ಭಾವ ಸೆಳೆದಿವೆ.ಆ ಹಿನ್ನೆಲೆಯಲ್ಲಿ ಇಂದಿನ ಯುವಜನತೆ ಇಂಥ ಪುಣ್ಯ ಪುರುಷರ ಜೀವನ ಚರಿತ್ರೆಯ ಯಶೋಗಾಥೆ, ತತ್ವಾದರ್ಶಗಳನ್ನು ಅರಿತು ಸದ್ಗುಣ, ಸನ್ನಡತೆ ಭಾವದೊಂದಿಗೆ ಸಮಾಜಮುಖಿ ಪರ ಕೆಲಸವನ್ನು ಮಾಡಲು ಮುಂದಾಗಬೇಕು ಎಂದು ಮುಖ್ಯ ಗುರು ಜಿ.ಎಂ.ಕೋಟ್ಯಾಳ ಹೇಳಿದರು.
ಮುಖ್ಯ ಅತಿಥಿ ನಿಡಗುಂದಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಮಾತೆ ಮಂಜುಳಾ ಅಕ್ಕ ಮಾತನಾಡಿ, ಚೇತನದ ಆತ್ಮರಾಗಿರುವ ನಾವೆಲ್ಲರೂ ಭಗವಂತನ ಮಕ್ಕಳು. ಜೀವನ ಮೌಲ್ಯಕ್ಕಾಗಿ ಪರಮಾತ್ಮನ ಅನುಗ್ರಹಕ್ಕೆ ಒಳಗಾಗಿ ಒಳಿತು ಕಾಣಬೇಕು. ಎಲ್ಲಿ ದೃಢತೆ ಭಾವ ಇರುವುದೋ ಅಲ್ಲಿ ಸಫಲತೆ ಕಣ ಗೋಚರಿಸುತ್ತದೆ. ಧ್ಯಾನ ತೃಣ ನಮಗೆ ಏಕಾಗ್ರತೆ ತೃಷೆ ತಣಿಸುತ್ತದೆ. ರಾಜಯೇಗ ಶಿಕ್ಷಣದಿಂದ ಭವಿಷ್ಯತ್ತಿನಲ್ಲಿ ಒಳ್ಳೆಯತನ ಪಡೆಯಬಹುದು.ಇದು ನಮ್ಮನ್ನು ಸಶಕ್ತರನ್ನಾಗಿಸುತ್ತದೆ ಎಂದರು.
ಜಿಲ್ಲಾ ಗಣಿತ ಸಂಪನ್ಮೂಲ ವ್ಯಕ್ತಿ,ಹಿರಿಯ ಶಿಕ್ಷಕ ಎನ್.ಎಸ್.ಬಿರಾದಾರ ಮಾತನಾಡಿ, ಕಾಲಗರ್ಭದಲ್ಲಿ ಹುದುಗಿದ ವಚನ ಗುಪ್ತಚರದ ಪ್ರಖರತೆಯ ಕಿರಣಗಳನ್ನು ಹೊರಸೂಸುವಿಕೆ ಕೈಂಕರ್ಯದಲ್ಲಿ ಹಳಕಟ್ಟಿಯವರು ತನು,ಮನದಿಂದ ಶ್ರಮಿಸಿದ್ದಾರೆ. ಸಮಾಜದಲ್ಲಿ ವಚನ ಪುನಶ್ಚೇತನದ ದಿವ್ಯತೆಗೆ ಮುನ್ನುಡಿ ಬರೆದಿದ್ದಾರೆ.ವಚನ ಸಾಹಿತ್ಯದ ದಿಪ್ತಿಯನ್ನು ಹೊರತೆಗೆದು ಬೆಳಗಿಸಿದ್ದಾರೆ. ಈ ಅನುಭೂತಿಯನ್ನು ಮನುಕುಲಕ್ಕೆ ಕರುಣಿಸಿರುವ ಶರಣ ಹಳಕಟ್ಟಿಯವರು ಸಮಕಾಲೀನ ಜೀವಾತ್ಮರು. ತಮ್ಮದೇ ವಿಶೇಷ ಛಾಪು ಮೂಡಿಸಿ ಹೆಸರಾದ ಪುಣ್ಯಾತ್ಮರು ಎಂದು ಹಳಕಟ್ಟಿಯವರ ವಿಶಾಲ ಮನಭಾವದ ಕಾಯಕವನ್ನು ಬಣ್ಣಿಸಿದರು.
ಆಕಾಲ ಒಡಲೊಳಗೆ ನಿಷ್ಕ್ರಿಯಗೊಂಡಿದ್ದ ಶಿವಶರಣೆಯರ ಜೀವನ ಮೌಲ್ಯದ ಚತೋಹಾರಿ ವಚನಗಳ ಓಲೆಗರಿಗಳ ಸಂಪತ್ತನ್ನು ಹಳಕಟ್ಟಿಯವರು ಸಂಶೋಧಿಸಿದ್ದಾರೆ. ಮಠಮಾನ್ಯಗಳ ಕತ್ತಲು ಕೋಣೆಗಳಲ್ಲಿ, ಭಕ್ತರ ಮನೆಯ ಜಗುಲಿ, ಮಾಡು, ಸಂದೂಗಳಲ್ಲಿ ನಶಿಸಿ ಅವಸಾನದ ಅಂಚಿನಲ್ಲಿದ್ದ ವಚನ ನಿಧಿಯನ್ನು ಪತ್ತೆಹಚ್ಚಿ ಹೊರತಗೆದಿದ್ದಾರೆ.ತಾಡೋಲೆಗಳು,ಕೊರಿಕಾಗದ ಪ್ರತಿಗಳು,ಪ್ರಾಚೀನ ಗ್ರಂಥಗಳು, ಶಿವಶರಣರ ಹಸ್ತಪ್ರತಿ ಬರಹಗಳ ಅಪಾರ ರಾಶಿ ಸಂಗ್ರಹಿಸಿದ್ದಾರೆ.ಅವುಗಳನ್ನು ಪರಿಷ್ಕರಿಸಿ, ಮುದ್ರಿಸಿ,ಸಂರಕ್ಷಿಸಿ ನಾಡಿಗೆ ನೀಡಿದ್ದಾರೆ. ವಚನ ಸಾಹಿತ್ಯದ ಪ್ರಸಾರಕ್ಕೆ ಅವಿರತವಾಗಿ ದುಡಿದು ಇಡೀ ತಮ್ಮ ಜೀವನ ಅರ್ಪಣೆ ಮಾಡಿದ್ದಾರೆ, ಸರಳ ಜೀವನ ನಡೆಸಿರುವ ಹಳಕಟ್ಟಿಯವರು ಸುಖ,ಸಂತೋಷ, ನೆಮ್ಮದಿವೆಂಬ ಅಂಶಗಳನ್ನು ವಚನ ರಕ್ಷಣೆಯಲ್ಲೇ ಕಂಡಿದ್ದಾರೆ.ವಚನ ಮಾತೆಯನ್ನು ರಕ್ಷಿಸಿ ತಮ್ಮ ಜೀವನ ಪಾವನ ಗೊಳಿಸಿಕೊಂಡಿದ್ದಾರೆ ಎಂದರು.
ಹಳಕಟ್ಟಿಯವರ ಗುಣಗ್ರಾಹಿತ್ವ ಅಪ್ರತಿಮ ವಿಶೇಷವಾಗಿದೆ.ಧಾರ್ಮಿಕ,,ಸಾಹಿತ್ಯ, ಸಂಸ್ಕೃತಿ,ರಾಜಕೀಯ, ಔದ್ಯೋಗಿಕ, ಶೈಕ್ಷಣಿಕ ಸೇರಿದಂತೆ ನಾನಾ ಕ್ಷೇತ್ರದಲ್ಲಿ ಕ್ರಿಯಾಶೀಲ, ಹೃದಯ ಸಂಪನ್ನತೆಯಿಂದ ಕಾಯಕ ಗೈದಿದ್ದಾರೆ.ಅವರ ಪರಿಶ್ರಮದ ಫಲದಿಂದ ಇಂದು ನಾವು ವಚನಗಳ ಸಾರ ಸವಿಯುತ್ತಲ್ಲಿದ್ದೆವೆ. ಹಳಕಟ್ಟಿಯವರನ್ನು ಮ್ಯಾಕ್ಸ್ ಮುಲ್ಲರ್,ವಚನ ಸಂಶೋಧಕ,ಜ್ಞಾನ ಜಂಗಮ, ವಚನ ಗುಮ್ಮಟ, ಎಂಬಿತ್ಯಾದಿ ಹೆಸರುಗಳಿಂದ ಕರುನಾಡು ಜನತೆ ಕರೆಯುತ್ತಾರೆ. ಇದು ಅಭಿಮಾನದ ಸಂಗತಿ ಎಂದರು.
ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎಚ್.ನಾಗಣಿ ಅತಿಥಿಗಳಾಗಿ ವೇದಿಕೆಯಲ್ಲಿದ್ದರು. ಶಿಕ್ಷಕ ಎಂ.ಬಿ.ದಶವಂತ ಹಿಂದಿ ಭಾಷೆಯಲ್ಲಿ ಮಾತನಾಡಿ, ಹಳಕಟ್ಟಿಯವರ ವಚನ ಚಿಂತನೆಗಳು ಸಾರ್ವಕಾಲಿಕ ಶ್ರೆಷ್ಠತೆ ಅಗಿವೆ.ಸಮಾನ ಸಮಾಜ ರೂಪಣೆಯ ಕನಸು ವಚನದಲ್ಲಿ ಮೇಳೈಸಿವೆ ಎಂದರು.
ಡಾ, ಫ.ಗು.ಹಳಕಟ್ಟಿಯವರ ಹಾಗೂ ತೋಂಟದ ಲಿಂ, ಡಾ ಸಿದ್ದಲಿಂಗ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪೂಜಿಸಲಾಯಿತು.
ಇದೇ ವೇಳೆಗೆ ಶಾಲಾ ಮಕ್ಕಳಿಗೆ ಹಳಕಟ್ಟಿ ಜೀವನ ಚರಿತ್ರೆ ಕುರಿತು ಭಾಷಣ ಸ್ಪರ್ಧೆ ಜರುಗಿತು. ವಿಜಯಲಕ್ಷ್ಮೀ ಸೌದಿ ಪ್ರಥಮ, ಸಿದ್ದಮ್ಮ ಮಂಕಣಿ ದ್ವಿತೀಯ, ಮಲ್ಲಪ್ಪ ಮಾದರ ತೃತೀಯ ಸ್ಥಾನದ ಬಹುಮಾನ ಪಡೆದರು.
ಕಳೆದ 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸುಷ್ಮಿತಾ ವಿ.ರಾಠೋಡ ಶಾಲೆಗೆ ಪ್ರಥಮ, ಸೌಮ್ಯ ಕೆ.ನಲವಡೆ ದ್ವೀತಿಯ, ಸಂಗೀತಾ ಆರ್.ಸಾರವಾಡ ತೃತೀಯ ಸ್ಥಾನ ಪಡೆದು ಅತ್ಯುತ್ತಮ ಸಾಧನೆ ಗೈದಿರುವ ಈ ಪ್ರತಿಭಾವಂತ ಮಕ್ಕಳಿಗೆ ನಿಡಗುಂದಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯ ವತಿಯಿಂದ ನಗದು ಬಹುಮಾನ ನೀಡಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು. ಪ್ರಜಾಪಿತ ಬ್ರಹ್ಮಕುಮಾರಿಯ ಮಂಜುಳಾ ಅಕ್ಕನವರಿಗೆ ಶಾಲೆ ಪರವಾಗಿ ಮಹಿಳಾ ಪ್ರತಿನಿಧಿ ಮುಸ್ಕಾನ ನದಾಫ ಸತ್ಕರಿಸಿದರು.
ಇಬ್ರಾಹಿಂ ಹುನಗುಂದ, ಸಚೀನ ಹೆಬ್ಬಾಳ,ಶಾಂತೂ ತಡಸಿ, ಗೋಪಾಲ ಬಂಡಿವಡ್ಡರ,ಸಿದ್ದು ಪಟ್ಟಣಶೆಟ್ಟಿ, ವಿದ್ಯಾ ಮಹೇಂದ್ರಕರ, ರೇಣುಕಾ ಶಿವಣಗಿ, ದಾನಾಬಾಯಿ ಲಮಾಣಿ ಇತರರಿದ್ದರು.
ಭಾಗ್ಯವಂತಿ ಸಂಗಡಿಗರು ಪ್ರಾರ್ಥನೆ ಗೀತೆ ಹೇಳಿದರು. ಅತಿಥಿ ಗೌರವ ಶಿಕ್ಷಕ ಎಲ್.ಆರ್.ಸಿಂಧೆ ಸ್ವಾಗತಿಸಿದರು. ಗುಲಾಬಚಂದ ಜಾಧವ ನಿರೂಪಿಸಿದರು. ಅತಿಥಿ ಶಿಕ್ಷಕ ಶ್ರೀಧರ ಚಿಮ್ಮಲಗಿ ವಂದಿಸಿದರು.