
ಜೇವರ್ಗಿ: ಪ್ರವಾಸವೆಂದರೆ ಕೇವಲ ಹೊಸ ಸ್ಥಳಗಳನ್ನು ವೀಕ್ಷಿಸುವುದಲ್ಲ; ಪರಸ್ಪರ ಪರಿಚಯ, ಪ್ರೀತಿ, ವಿಶ್ವಾಸ ಮತ್ತು ಸ್ನೇಹವನ್ನು ಗಟ್ಟಿಗೊಳಿಸುವ ಮಹತ್ವದ ಅವಕಾಶವಾಗಿದೆ ಎಂದು ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಸ್ಥಾನಿಕ ಆಡಳಿತ ಮಂಡಳಿಯ ಉಪಾಧ್ಯಕ್ಷ ಶಿವನಗೌಡ ಪಾಟೀಲ ಹಂಗರಗಿ ಹೇಳಿದರು.
ನಗರದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿರುವ ಒಂದು ವಾರದ ಕೇರಳ ಶೈಕ್ಷಣಿಕ ಪ್ರವಾಸಕ್ಕೆ ಹಸಿರು ನಿಶಾನೆ ತೋರಿಸಿ, ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರವಾಸವು ದೈನಂದಿನ ಜೀವನದ ಒತ್ತಡದಿಂದ ಮುಕ್ತಗೊಳಿಸುವುದರ ಜೊತೆಗೆ ಹೊಸ ಅನುಭವ, ಜ್ಞಾನ ಮತ್ತು ಜೀವನದೃಷ್ಟಿಯನ್ನು ನೀಡುತ್ತದೆ. ವಿವಿಧ ಪ್ರದೇಶಗಳ ಸಂಸ್ಕøತಿ, ಸಂಪ್ರದಾಯ, ಐತಿಹಾಸಿಕ ಮಹತ್ವ ಹಾಗೂ ಜನಜೀವನವನ್ನು ಅರಿಯಲು ಸಹಕಾರಿಯಾಗುತ್ತದೆ. ಒಟ್ಟಾಗಿ ಪ್ರಯಾಣಿಸುವುದರಿಂದ ಪರಸ್ಪರ ಸಹಕಾರ, ಹೊಂದಾಣಿಕೆ, ಸಾಮರಸ್ಯ ಮತ್ತು ಆತ್ಮೀಯತೆ ವೃದ್ಧಿಯಾಗುತ್ತವೆ. ಇಂತಹ ಪ್ರವಾಸಗಳು ವ್ಯಕ್ತಿಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಿ, ಒಗ್ಗಟ್ಟಿನ ಮನೋಭಾವವನ್ನು ಬೆಳೆಸುತ್ತವೆ ಎಂದು ಅಭಿಪ್ರಾಯಪಟ್ಟರು.
ಶೈಕ್ಷಣಿಕ ಪ್ರವಾಸಗಳು ವಿದ್ಯಾರ್ಥಿಗಳ ಜ್ಞಾನವನ್ನು ವಿಸ್ತರಿಸುವುದರ ಜೊತೆಗೆ ಪುಸ್ತಕದ ಜ್ಞಾನಕ್ಕೆ ಪ್ರಾಯೋಗಿಕ ಅನುಭವವನ್ನು ಜೋಡಿಸುತ್ತವೆ. ಪ್ರವಾಸದಲ್ಲಿ ಕಲಿತ ಪಾಠಗಳು ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುತ್ತವೆ. ಪ್ರವಾಸವನ್ನು ಕೇವಲ ಮನರಂಜನೆಗೆ ಸೀಮಿತಗೊಳಿಸದೆ, ಜ್ಞಾನಾರ್ಜನೆ, ವ್ಯಕ್ತಿತ್ವ ವಿಕಸನ ಹಾಗೂ ಸ್ನೇಹ-ಸೌಹಾರ್ದ ಬೆಳೆಸುವ ಮಾಧ್ಯಮವನ್ನಾಗಿ ಬಳಸಿಕೊಳ್ಳಬೇಕು ಎಂದು ಶಿವನಗೌಡ ಪಾಟೀಲ ಹಂಗರಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವೀರೇಶ್ ಕಲಶೆಟ್ಟಿ, ಉಪನ್ಯಾಸಕ ಎಸ್.ಬಿ. ಮಮದಾಪುರ, ಗ್ರಂಥಪಾಲಕ ಸಿದ್ಧಣ್ಣ ಹತಗುಂದಿ, ಕಾವೇರಿ ಘಾಟೆ, ದೇವಿಂದ್ರ ವಿಶ್ವಕರ್ಮ ಸೇರಿದಂತೆ ಪ್ರಶಿಕ್ಷಣಾರ್ಥಿಗಳ ಪಾಲಕರು ಹಾಗೂ ಪೆÇೀಷಕರು ಉಪಸ್ಥಿತರಿದ್ದರು.



















