
ಕಲಬುರ್ಗಿ : ಪ್ರಕೃತಿ ಮನುಷ್ಯನಿಗೆ ಪರೋಪಕಾರದ ಸಂದೇಶವನ್ನು ನೀಡಿದ್ದು, ಅದನ್ನು ಸರಿಯಾಗಿ ಅರ್ಥಮಾಡಿಕೊಂಡು ಬದುಕು ರೂಢಿಸಿಕೊಳ್ಳುವುದರಿಂದ ಮನುಷ್ಯನ ಬದುಕು ಸಾರ್ಥಕವಾಗುತ್ತದೆ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.
ಅವರು ಉತ್ತರಪ್ರದೇಶದ ವಾರಾಣಸಿ ನಗರದ ಜ್ಞಾನಪೀಠದಲ್ಲಿ ವಿವಿಧ ರಾಜ್ಯಗಳ ಭಕ್ತಗಣ ಹಮ್ಮಿಕೊಂಡಿದ್ದ ತಮ್ಮ 80ನೆಯ ವಧರ್ಂತಿ ಮಹೋತ್ಸವದ ಸಂದರ್ಭದಲ್ಲಿ ಕಾಶಿ ವಿಶ್ವನಾಥ ದೇವಾಲಯದ ಭದ್ರತಾ ಮುಖ್ಯಸ್ಥ ಸಿ.ಆರ್.ಪಿ.ಎಫ್. ಕಮಾಂಡರ್ ರಾಜಶೇಖರ ಶಿವಲಿಂಗಯ್ಯ ಅವರಿಗೆ ‘ರಾಷ್ಟ್ರ??ಧರ್ಮ ಸೇವಾ ಶಿರೋಮಣಿ’ ಪ್ರಶಸ್ತಿ ಪ್ರದಾನಮಾಡಿ ಆಶೀರ್ವಚನ ನೀಡಿದರು. ಮನುಷ್ಯ ಸ್ವಾರ್ಥವನ್ನು ಬಿಟ್ಟು ಸಮಾಜಮುಖಿಯಾಗಿ ಪರೋಪಕಾರಿಯಾದರೆ ಲೋಕ ಕಲ್ಯಾಣದ ಜೊತೆಗೆ ಆತನ ಆತ್ಮಕಲ್ಯಾಣವೂ ಆಗುತ್ತದೆ. ಪ್ರತಿಯೊಬ್ಬರೂ ಪ್ರಕೃತಿಯ ಈ ಸಮಷ್ಟಿ ಆಶಯಗಳನ್ನು ಅರಿತು ಮುನ್ನಡೆಯಲು ರೂಢಿಸಿಕೊಳ್ಳಬೇಕು ಎಂದರು.
ಪ್ರಾತಃಕಾಲ ಜಗದ್ಗುರು ವಿಶ್ವಾರಾಧ್ಯರಿಗೆ ಮಹಾರುದ್ರಾಭಿಷೇಕ ಮತ್ತು ಕಾಶಿ ಜಗದ್ಗುರುಗಳ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಯಿತು. ಸಂಜೆ ವೀರಶೈವ ಪಂಚಸೂತ್ರೀಯ0 ಮಹಾಕಾವ್ಯ ಕುರಿತು ಪ್ರವಚನ ನಡೆಯಿತು. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ದೆಹಲಿ, ಹರ್ಯಾಣ, ರಾಜಸ್ಥಾನ, ಓರಿಸ್ಸಾ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ಜಗದ್ಗುರುಗಳಿಗೆ ಗುರುವಂದನೆ ಸಲ್ಲಿಸಿದರು. ವಾರಾಣಸಿ ನಗರದ ವಿವಿಧ ವಿ.ವಿ.ಗಳ ಸಂಸ್ಕøತ ವಿದ್ವಾಂಸರುಗಳಾದ ಡಾ. ಕಮಲೇಶ್ ಜಾ ಮತ್ತು ಡಾ.ವಿನೋದ ಪಾಠಕ್, ಕಾಶಿಪೀಠದ ವ್ಯವಸ್ಥಾಪಕ ಆರ್.ಕೆ.ಸ್ವಾಮಿ, ನಳಿನಿ ಚಿರಮೆ, ಶಿವಾನಂದ ಹಿರೇಮಠ, ಸುಭಾಷ್ ಮಮಾಣೆ ಮತ್ತಿತರರು ಪಾಲ್ಗೊಂಡಿದ್ದರು.





























