ನಾಳೆ ಅಂತ್ಯಕ್ರಿಯೆ
ಬೆಂಗಳೂರು, ಸೆ. ೨೫- ಬೆಂಗಳೂರಿನಲ್ಲಿ ನಿನ್ನೆ ನಿಧನರಾದ ಪದ್ಮಭೂಷಣ, ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್.ಎಲ್. ಭೈರಪ್ಪ ಅವರ ಅಂತ್ಯಕ್ರಿಯೆ ನಾಳೆ ಮೈಸೂರಿನಲ್ಲಿ ನಡೆಯಲಿದ್ದು, ಇಂದು ಹಲವು ಗಣ್ಯರು, ಸಾರ್ವಜನಿಕರು ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ನಿನ್ನೆ ಮಧ್ಯಾಹ್ನ ನಿಧನರಾದ ಎಸ್.ಎಲ್. ಭೈರಪ್ಪರವರ ಪಾರ್ಥೀವ ಶರೀರದ ದರ್ಶನಕ್ಕೆ ಗಣ್ಯರಿಗೆ ಆಸ್ಪತ್ರೆಯಲ್ಲೆ ಇಂದು ಬೆಳಿಗ್ಗೆ ೮ ರ ವರೆಗೂ ಅವಕಾಶ ಮಾಡಿಕೊಡಲಾಗಿತ್ತು.
ನಂತರ ಪಾರ್ಥೀವ ಶರೀರವನ್ನು ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರಕ್ಕೆ ತಂದು ಅಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಮಧ್ಯಾಹ್ನ ೨ರ ವರೆಗೂ ಎಸ್.ಎಲ್. ಭೈರಪ್ಪನವರ ಪಾರ್ಥೀವ ಶರೀರದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಟ್ಟು, ನಂತರ ಅವರ ಪಾರ್ಥೀವ ಶರೀರವನ್ನು ಮೈಸೂರಿಗೆ ಕೊಂಡೊಯ್ದು ಮೈಸೂರಿನ ಕಲಾಮಂದಿರದಲ್ಲಿ ಪಾರ್ಥೀವ ಶರೀರವಿಟ್ಟು, ಸಂಜೆವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ನಾಳೆ ಬೆಳಿಗ್ಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಸಂಸ್ಕಾರ ನೆರವೇರಲಿದೆ.
ಅಂತಿಮ ದರ್ಶನ ಪಡೆದ ಸಾರ್ವಜನಿಕರು
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಎಸ್.ಎಲ್. ಭೈರಪ್ಪನವರ ಪಾರ್ಥೀವ ಶರೀರದ ದರ್ಶನಕ್ಕೆ ದೊಡ್ಡಸಂಖ್ಯೆಯಲ್ಲಿ ಸಾಹಿತಿಗಳು, ಗಣ್ಯರು ಹಾಗೂ ಸಾರ್ವಜನಿಕರು ಆಗಮಿಸಿದ್ದು, ಎಲ್ಲರೂ ಸರದಿಯಲ್ಲಿ ನಿಂತು ಪಾರ್ಥೀವ ಶರೀರದ ದರ್ಶನ ಮಾಡಿ ಅಂತಿಮ ನಮನ ಸಲ್ಲಿಸಿದರು.
ಸರಸ್ವತಿ ಪುತ್ರ ಎಸ್.ಎಲ್. ಭೈರಪ್ಪನವರ ಪಾರ್ಥೀವ ಶರೀರದ ದರ್ಶನಕ್ಕೆ ದೊಡ್ಡಸಂಖ್ಯೆಯಲ್ಲಿ ಬಂದು ಅಗಲಿದ ಸಾಹಿತಿಗೆ ಅಂತಿಮ ನಮನ ಸಲ್ಲಿಸಿದರು.
ಮುಖ್ಯಮಂತ್ರಿಯಿಂದ ಗೌರವ ನಮನ
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಇವರುಗಳು ಇಂದು ಬೆಳಗ್ಗೆ ರವೀಂದ್ರ ಕಲಾಕ್ಷೇತ್ರಕ್ಕೆ ತೆರಳಿ
ಸರಸ್ವತಿ ಪುತ್ರ ಎಸ್.ಎಲ್. ಭೈರಪ್ಪನವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಬೈರಪ್ಪನವರಿಗೆ ಗೌರವ ನಮನ ಸಲ್ಲಿಸಿದರು.
ನಿನ್ನೆ ಬಿಹಾರ ಪ್ರವಾಸದಲ್ಲಿದ್ದ ಮುಖ್ಯಮಂತ್ರಿಗಳು ಬಿಹಾರದಿಂದ ರಾತ್ರಿ ಮೈಸೂರಿಗೆ ತೆರಳಿ, ಯುವದಸರಾದಲ್ಲಿ ಭಾಗಿಯಾಗಿ ಮೈಸೂರಿನಿಂದ ಇಂದು ಬೆಳಿಗ್ಗೆ ಬೆಂಗಳೂರಿಗೆ ಆಗಮಿಸಿ ರವೀಂದ್ರ ಕಲಾಕ್ಷೇತ್ರಕ್ಕೆ ತೆರಳಿ ಅಗಲಿದ ಸಾಹಿತಿ ಎಸ್.ಎಲ್. ಭೈರಪ್ಪರವರಿಗೆ ರಾಜ್ಯದ ಜನತೆಯ ಪರವಾಗಿ ಅಂತಿಮ ಗೌರವ ಸಲ್ಲಿಸಿದರು.


























