Home ಜಿಲ್ಲೆ ಮನಸ್ಸು, ಮಾತು, ಕೃತಿಗಳಲ್ಲೊಂದಾತನೇ ಮಹಾತ್ಮ : ಹಾರಕೂಡ ಶ್ರೀ

ಮನಸ್ಸು, ಮಾತು, ಕೃತಿಗಳಲ್ಲೊಂದಾತನೇ ಮಹಾತ್ಮ : ಹಾರಕೂಡ ಶ್ರೀ

ಬೀದರ್: ಫೆ.12:ಪ್ರಾಂಜಲವಾದ ಮನಸ್ಸು, ಮುತ್ತಿನಂತಹ ಮಾತು ಹಾಗೂ ಮಾತಿಗೆ ಬದ್ಧವಾದ ಕೃತಿ ಇಂತಹ ಮೌಲ್ಯಗಳನ್ನು ಬದುಕಿನುದ್ದಕ್ಕೂ ಧಾರಣ ಮಾಡಿಕೊಂಡವನೇ ಮಹಾತ್ಮ ಎನಿಸಿಕೊಳ್ಳಬಲ್ಲನು ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹತ್ಯಾಳ ಗ್ರಾಮದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಸಮಾರಂಭದ ಪಾವನ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಈ ದೇಶ ಕಂಡ ಶ್ರೇಷ್ಠ ವ್ಯಕ್ತಿತ್ವ ಶಿವಾಜಿ ಮಹಾರಾಜರು ಆಗಿದ್ದು
ಅವರ ಛಾತ್ರ ತೇಜಸ್ಸು ಇಂದಿಗೂ ಭಾರತೀಯರ ಧಮನಿ ಧಮನಿಗಳಲ್ಲಿ ದಿವ್ಯ ಚೈತನ್ಯವಾಗಿ ಹರಿಯುತ್ತಿದೆ.
ಸ್ವಧರ್ಮದಲ್ಲಿ ನಿಷ್ಠೆ ಪರಧರ್ಮದಲ್ಲಿ ಸೌಹಾರ್ದಾತೆ ಭಾವ ಹೊಂದಿರುವ ಹಿಂದೂ ಧರ್ಮ ದೇಶದ ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಿಕೊಂಡು ಬರುತ್ತಿರುವುದು ಜಗತ್ತಿಗೆ ನೀಡಿದ ದೊಡ್ಡ ಆದರ್ಶವೆಂದು ನುಡಿದರು.
ಹತ್ಯಾಳ ಗ್ರಾಮದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಶಿವಾಜಿ ಮಹಾರಾಜರ ಪ್ರತಿಮೆ ಎಲ್ಲರಲ್ಲಿ ನಿರಂತರವಾಗಿ ನವಚೈತನ್ಯ ಹೊಮ್ಮಿಸುತ್ತಿರಲಿ ಸರ್ವರಿಗೂ ಮಂಗಳವಾಗಲಿ ಎಂದು ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಶಾಸಕ ಶರಣು ಸಲಗರ ಅವರು ಮಾತನಾಡಿ, ಶಿವಾಜಿ ಮಹಾರಾಜರು ಈ ದೇಶದ ಅಂತಶಕ್ತಿ ಜಾಗೃತಿಯ ನಿಧಿಯಾಗಿದ್ದಾರೆ.
ಧೈರ್ಯ, ಸಾಹಸ, ಪ್ರಜಾಸ್ನೆಹಿ ಆಡಳಿತ ಕ್ರಮ ಹೈ0ದವಿ ಸ್ವರಾಜ್ಯ ಇವು ಶಿವಾಜಿ ಮಹಾರಾಜರು ನಮಗೆ ನೀಡಿದ ಮಹತ್ತರ ಕೊಡುಗೆಗಳಾಗಿವೆ.
ನಮ್ಮ ಅಭಿಮಾನ ಅವರ ಪುತ್ತಳಿ ಅನಾವರಣಕ್ಕೆ ಸೀಮಿತವಾಗದೆ ಅವರ ಆದರ್ಶ ನಮ್ಮ ದೈನಂದಿನ ಬದುಕಿನಲ್ಲಿ ಪ್ರಕಟಗೊಳ್ಳುತ್ತಿರಬೇಕು ಎಂದು ನುಡಿದರು.
ಶಿವಾಜಿ ಮಹಾರಾಜರ, ಸಂಭಾಜಿ ಮಹಾರಾಜರ ಧರ್ಮಪ್ರಜ್ಞೆ ರಾಷ್ಟ್ರ ಪ್ರೇಮ ನವ ಭಾರತದ ನಿರ್ಮಾಣಕ್ಕೆ ಭದ್ರಬುನಾದಿ ಎಂಬುದನ್ನು ಅರಿತು ನಾವೆಲ್ಲರೂ ಆ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು ಎಂದು ಕರೆ ನೀಡಿದರು.
ಖಂಡುಜಿ ಡಾಯಪುಡೆ ಮಾತನಾಡಿದರು.
ಕಾಡಾ ಅಧ್ಯಕ್ಷರಾದ ಬಾಬು ಹೊನ್ನಾ ನಾಯಕ, ರಾಜಕುಮಾರ ಬಿರಾದಾರ ಸಿರಗಾಪೂರ, ಅನಿಲ ಭೂಸಾರೆ, ಸದಾನಂದ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಶಿವಕುಮಾರ ಭುಜಂಗೆ ಸ್ವಾಗತಿಸಿದರು.
ಅಪ್ಪಾರಾವ ಮೂಳೆ ನಿರೂಪಣೆ ಮಾಡಿದರು.