Home ಜಿಲ್ಲೆ ಸಾಹಿತಿ ಜಾವೀದ ಹುಸೇನ ಹವಲ್ದಾರ ರವರಿಗೆ ಭವ್ಯ ಸನ್ಮಾನ

ಸಾಹಿತಿ ಜಾವೀದ ಹುಸೇನ ಹವಲ್ದಾರ ರವರಿಗೆ ಭವ್ಯ ಸನ್ಮಾನ

ಸುರಪುರ:ಫೆ.27:ಆಧ್ಯಾತ್ಮಿಕ ಚೈತನ್ಯ, ಶರಣ ತತ್ವದ ಪ್ರಭಾವ ಮತ್ತು ಸಾಹಿತ್ಯ ಸಂಭ್ರಮಗಳ ಸಮನ್ವಯವಾಗಿ ಸುರಪುರ ಸಂಸ್ಥಾನ ಅಧೀನದಲ್ಲಿರುವ ಶ್ರೀ ಕಡ್ಲೆಪ್ಪ ನಿಷ್ಠಿ ವಿರಕ್ತ ಮಠದಲ್ಲಿ ಬುಧವಾರ ಭವ್ಯ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳು ಅತ್ಯಂತ ಶ್ರದ್ಧಾ-ಭಕ್ತಿಭಾವದಿಂದ ನೆರವೇರಿದವು. ಕಬಾಡಗೆರಾದಲ್ಲಿರುವ ಮಠ ಆವರಣದಲ್ಲಿ ನಡೆದ ಈ ಮಹೋತ್ಸವದಲ್ಲಿ ನೂರಾರು ಭಕ್ತರು, ಶರಣರು, ಗಣ್ಯರು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಿ ಕಾರ್ಯಕ್ರಮದ ವೈಭವ ಹೆಚ್ಚಿಸಿದರು.

ಕಾರ್ಯಕ್ರಮದ ಅಂಗವಾಗಿ ಲಿಂ. ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಮಹಾಸ್ವಾಮಿಗಳವರ 50ನೇ ಸುವರ್ಣ ಪುಣ್ಯಸ್ಮರಣೋತ್ಸವವನ್ನು ಸ್ಮರಿಸಲಾಯಿತು. ಅವರ ಶರಣ ತತ್ವಪ್ರಚಾರ, ಸಮಾಜಮುಖಿ ಚಿಂತನೆಗಳು ಹಾಗೂ ಧಾರ್ಮಿಕ ಪರಂಪರೆಯ ಸ್ಥೈರ್ಯಕ್ಕಾಗಿ ಸಲ್ಲಿಸಿದ ಅಪಾರ ಕೊಡುಗೆಗಳನ್ನು ವಕ್ತಾರರು ಕೊಂಡಾಡಿದರು. ಇದೇ ಸಂದರ್ಭದಲ್ಲಿ ಪೂಜ್ಯ ಶ್ರೀ ಮ.ನಿ.ಪ್ರ. ಪ್ರಭುಲಿಂಗ ಮಹಾಸ್ವಾಮಿಗಳವರ ಷಷ್ಠ್ಯಬ್ದ ಪೂರ್ಥಿ ಸಮಾರಂಭ, 25ನೇ ರಜತ ಪಟ್ಟಾಧಿಕಾರ ಮಹೋತ್ಸವ ಹಾಗೂ 25 ಪೂಜ್ಯರ ಮಹಾಮಂಟಪ ಪಾದಪೂಜೆ ವಿಧಿವಿಧಾನಗಳೊಂದಿಗೆ ನೆರವೇರಿತು. ಮಠದ ಪರಂಪರೆಯನ್ನು ಪ್ರತಿಬಿಂಬಿಸುವಂತೆ ವೇದಮಂತ್ರೋಚ್ಚಾರ, ಪೂಜಾ ವಿಧಿಗಳು, ಧಾರ್ಮಿಕ ಆಚರಣೆಗಳು ಭಕ್ತರಲ್ಲಿ ಆಧ್ಯಾತ್ಮಿಕ ತೇಜಸ್ಸು ಮೂಡಿಸಿತು.

ಇದೇ ವೇದಿಕೆಯಲ್ಲಿ “ಶರಣರ ಜೀವನ ದರ್ಶನ” ವಿಷಯದ ಪ್ರವಚನ ಕಾರ್ಯಕ್ರಮ ನಡೆಯಿತು. ಶರಣರ ಸರಳತೆ, ಸತ್ಯನಿಷ್ಠೆ, ಸಮಾಜಪರ ಕಾಳಜಿ ಹಾಗೂ ಧಾರ್ಮಿಕ ಮೌಲ್ಯಗಳನ್ನು ಆಧರಿಸಿದ ಸಂದೇಶಗಳು ಭಕ್ತರಲ್ಲಿ ನೈತಿಕ ಜಾಗೃತಿ ಮೂಡಿಸಿತು. ಧರ್ಮ ಮತ್ತು ಸಾಹಿತ್ಯ ಪರಸ್ಪರ ಪೂರಕ ಎಂಬ ಸಂದೇಶ ಕಾರ್ಯಕ್ರಮದ ಪ್ರಧಾನ ಅಂಶವಾಗಿ ಮೂಡಿಬಂದಿತು.

ಈ ಪವಿತ್ರ ಸಂದರ್ಭದಲ್ಲಿ ಸುರಪುರದ ಖ್ಯಾತ ಯುವ ಸಾಹಿತಿಗಳಾದ ಶ್ರೀ ಜಾವೀದ ಹುಸೇನ ಹವಲ್ದಾರ ಅವರಿಗೆ ವಿಶೇಷ ಗೌರವ ಸನ್ಮಾನ ಸಲ್ಲಿಸಲಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಸಾಧಿಸಿರುವ ವಿಶಿಷ್ಟ ಸಾಧನೆಗಳನ್ನು ಪರಿಗಣಿಸಿ ಪೂಜ್ಯ ಶ್ರೀ ಮ.ನಿ.ಪ್ರ. ಪ್ರಭುಲಿಂಗ ಮಹಾಸ್ವಾಮಿಗಳು ಅವರಿಗೆ ಶ್ರೀರಕ್ಷೆ ಪ್ರದಾನ ಮಾಡಿ ಆಶೀರ್ವದಿಸಿದರು. ವೇದಿಕೆಯ ಮೇಲೆ ಆಸೀನರಾಗಿದ್ದ ಪೂಜ್ಯ ಮಹಾಸ್ವಾಮಿಗಳು, ಗಣ್ಯ ಮಾನ್ಯರು ಅಭಿನಂದನಾ ಮಾತುಗಳ ಮೂಲಕ ಶುಭಾಶಯ ಕೋರಿದರು.

ಶ್ರೀ ಜಾವೀದ ಹುಸೇನ ಹವಲ್ದಾರ ಅವರು 2025ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾಗಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಸಮಿತಿಯ ರಾಜ್ಯ ಸದಸ್ಯರಾಗಿ ಕನ್ನಡ ಪರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ವಿಜಯಪುರದ ರಾಜ್ಯ ಮಟ್ಟದ ಅಪ್ಪ ಸಾಹಿತ್ಯ ಪ್ರಶಸ್ತಿ, ಬೀದರ ಜಿಲ್ಲೆಯ ರಾಜ್ಯ ಮಟ್ಟದ ಕನ್ನಡ ಸೇವಾ ರತ್ನ ಪ್ರಶಸ್ತಿ, ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಆಜೂರ ಪ್ರತಿಷ್ಠಾನದಿಂದ 2025ನೇ ಸಾಲಿನ “ತಂದೆ ತಾಯಿಯರ ಋಣ” ಎಂಬ ಇವರು ರಚಿಸಿರುವ ಕೃತಿಗೆ ರಾಜ್ಯ ಮಟ್ಟದ ಪುಸ್ತಕ ಪ್ರಶಸ್ತಿ ಸೇರಿದಂತೆ ಅನೇಕ ಗಣ್ಯ ಸಮ್ಮಾನಗಳನ್ನು ಪಡೆದಿರುವುದು ಅವರ ಸಾಹಿತ್ಯ ಸೇವೆಯ ಗಂಭೀರತೆಯನ್ನು ಪ್ರತಿಬಿಂಬಿಸುತ್ತದೆ. ಇದರ ಜೂತೆಗೆ ಸುರಪುರ ಸಂಸ್ಥಾನದ ಅಭಿಮಾನಿಯಾಗಿ ಅರಮನೆಗೆ ವೀಕ್ಷಣೆ ಮಾಡಲು ಬಂದ ಪ್ರೇಕ್ಷಣಾರ್ಥಿಗಳಿಗೆ ಸಮಗ್ರವಾಗಿ ಸುರಪುರ ಇತಿಹಾಸ ಪರಿಚಿಸುವ ಕಾರ್ಯ ನಿರಂತರವಾಗಿರುವುದಕ್ಕೆ ಶ್ಲಾಘನೀಯವಾಗಿದೆ.ಜೂತೆಗೆ ಇತಿಹಾಸ ಸಮಾಜಮುಖಿ ಚಿಂತನೆ, ಪೆÇೀಷಕರ ಮಹತ್ವ, ಮಾನವೀಯ ಮೌಲ್ಯಗಳ ಪ್ರತಿಪಾದನೆ ಹಾಗೂ ಕನ್ನಡಾಭಿವೃದ್ಧಿ ಕಾಳಜಿಯು ಅವರ ಬರಹಗಳಲ್ಲಿ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ ಎಂದು ವಕ್ತಾರರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಠದ ಆಶೀರ್ವಚನಗಳು, ಅಭಿನಂದನಾ ಗ್ರಂಥ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ನೆರವೇರಿದವು. ಭಕ್ತರು ಮತ್ತು ಸಾಹಿತ್ಯಾಭಿಮಾನಿಗಳ ಅಪಾರ ಉಪಸ್ಥಿತಿಯಲ್ಲಿ ನಡೆದ ಈ ಸಮಾರಂಭ ಧಾರ್ಮಿಕ ಪರಂಪರೆ, ಶರಣ ತತ್ವ ಮತ್ತು ಸಾಹಿತ್ಯ ಸೇವೆಯ ಸಾರ್ಥಕ ಸಂಗಮವಾಗಿ ಇತಿಹಾಸದಲ್ಲಿ ಸ್ಮರಣೀಯವಾಗಿ ದಾಖಲಿಸವಂತಾಯಿತು.