Home ಜಿಲ್ಲೆ ಆಧುನಿಕ ಕಾಲಚಕ್ರ ನಾಟಕಕ್ಕೆ ಅದ್ಧೂರಿ ಚಾಲನೆ : ಮಲ್ಲಶೆಟ್ಟಿ ಚಿದ್ರಿ ಮೆಚ್ಚುಗೆ

ಆಧುನಿಕ ಕಾಲಚಕ್ರ ನಾಟಕಕ್ಕೆ ಅದ್ಧೂರಿ ಚಾಲನೆ : ಮಲ್ಲಶೆಟ್ಟಿ ಚಿದ್ರಿ ಮೆಚ್ಚುಗೆ

ಬೀದರ್ ಮೇ 29 ಃ ರಂಗಭೂಮಿ ಎನ್ನುವುದು ಸಮಾಜದ ಚಿಂತನೆಗಳನ್ನು ಜನರಿಗೆ ತಲುಪಿಸುವ ಅತ್ಯಂತ ಪರಿಣಾಮಕಾರಿ ಮಾಧ್ಯಮವಾಗಿದೆ ಎಂದು ಜಿಲ್ಲಾಧಿಕಾರಿಗಳ ಕಛೇರಿಯ ಚುನಾವಣೆ ತಹಶೀಲ್ದಾರ ಮಲಶೆಟ್ಟಿ ಚಿದ್ರೆ ಹೇಳಿದರು.

ಗುರುವಾರ (ಮೇ.28) ರಂದು ನಗರದ ಪೂಜ್ಯ ಶ್ರೀ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಕರ್ನಾಟಕ ರಂಗಾಯಣ ಕಲಬುರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ, ಜನಪದ ಕಲಾವಿದರ ಬಳಗ, ರಂಗ ತರಂಗ ಸಾಮಾಜಿಕ ಮತ್ತು ಸಾಂಸ್ಕøತಿಕ ಟ್ರಸ್ಟ್, ಮಹರ್ಷಿ ವಾಲ್ಮೀಕಿ ಸೋಶಿಯಲ್ ಐಂಡ್ ಕಲ್ಚರಲ್ ಟ್ರಸ್ಟ್, ಬೀದರ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಕಾಲಚಕ್ರ ನಾಟಕ ಪ್ರದರ್ಶನವನ್ನು ಆಯೋಜಿಸಿರುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿ, ಕಾಲಚಕ್ರ ನಾಟಕವು ಸಮಾಜದ ವಿವಿಧ ಮುಖಗಳನ್ನು ಅನಾವರಣಗೊಳಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಇಂತಹ ನಾಟಕಗಳು ಯುವ ಜನತೆಗೆ ಉತ್ತಮ ಸಂದೇಶ ನೀಡುವುದರ ಜೊತೆಗೆ ಕನ್ನಡದ ಕಲೆ, ಸಾಹಿತ್ಯ ಮತ್ತು ಸಂಸ್ಕøತಿಯ ಉಳಿವಿಗೂ ಸಹಕಾರಿಯಾಗುತ್ತವೆ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಅವರು ಮಾತನಾಡಿ, ಗಡಿ ಜಿಲ್ಲೆ ಬೀದರದಲ್ಲಿ ಇಂತಹ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸದ ವಿಷಯವಾಗಿದೆ. ಕಾಲಚಕ್ರ ನಾಟಕವು ಕೇವಲ ಮನರಂಜನೆಗೆ ಸೀಮಿತವಾಗದೆ ಸಮಾಜದ ನೈಜ ಸ್ಥಿತಿಗತಿಗಳನ್ನು ಪ್ರೇಕ್ಷಕರ ಮುಂದೆ ತೆರೆದಿಡುವ ಕೆಲಸ ಮಾಡುತ್ತಿದೆ. ಇಂದಿನ ಯುವಜನತೆ ರಂಗಭೂಮಿ ಹಾಗೂ ಜನಪದ ಕಲೆಯ ಕಡೆ ಹೆಚ್ಚು ಆಸಕ್ತಿ ತೋರಬೇಕಾದ ಅಗತ್ಯವಿದೆ, ಎಂದು ಹೇಳಿದರು.

ಕರ್ನಾಟಕ ರಂಗಾಯಣ ನಿರ್ದೇಶಕರಾದ ಡಾ. ಸುಜಾತಾ ಜಂಗಮಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಂಗಭೂಮಿ ಎಂಬುದು ಕೇವಲ ಮನರಂಜನೆಯ ಸಾಧನವಲ್ಲ, ಅದು ಸಮಾಜದ ಬದುಕು, ಸಂಸ್ಕøತಿ ಹಾಗೂ ಜನ ಜೀವನದ ಕನ್ನಡಿಯಾಗಿದೆ. ಕಾಲಚಕ್ರ ನಾಟಕವು ಈಗಾಗಲೇ ಇಡೀ ರಾಜ್ಯದಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದು, ಹಲವೆಡೆ ಯಶಸ್ವಿ ಪ್ರದರ್ಶನ ಕಂಡಿದೆ. ವಿಶೇಷವಾಗಿ ಬಸವಕಲ್ಯಾಣದಲ್ಲಿ ನಡೆದ ಪ್ರದರ್ಶನದಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನರು ಒಟ್ಟಾಗಿ ವೀಕ್ಷಣೆ ಮಾಡುವ ಮೂಲಕ ಈ ನಾಟಕ ಹೊಸ ಇತಿಹಾಸ ನಿರ್ಮಿಸಿದೆ. ಇದು ಕನ್ನಡ ರಂಗಭೂಮಿಯ ಶಕ್ತಿ ಹಾಗೂ ಜನರ ಕಲಾಭಿಮಾನಕ್ಕೆ ಸಾಕ್ಷಿಯಾಗಿದೆ, ಎಂದು ಜಂಗಮಶೆಟ್ಟಿ ಹೇಳಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ ಅವರು ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿ, ಅವರು ಗಡಿ ಭಾಗಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಗುಣಮಟ್ಟದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಯುವ ಜನರಲ್ಲಿ ಕಲೆ, ಸಾಹಿತ್ಯ ಮತ್ತು ರಂಗಭೂಮಿಯ ಬಗ್ಗೆ ಆಸಕ್ತಿ ಹೆಚ್ಚುತ್ತದೆ. ಕರ್ನಾಟಕ ರಂಗಾಯಣವು ಮುಂದಿನ ದಿನಗಳಲ್ಲಿಯೂ ಜನಮನ ಮುಟ್ಟುವ ನಾಟಕಗಳು ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜಿಸಲಿದೆ, ಎಂದು ತಿಳಿಸಿದರು.

ರಂಗಾಯಣ ಕಲಬುರ್ಗಿ ಮಾಜಿ ನಿರ್ದೇಶಕರಾದ ಮಹೇಶ ವಿ, ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸುರೇಶ ಚೆನ್ನಶೆಟ್ಟಿ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸಂಜೀವಕುಮಾರ್ ಅತಿವಾಳೆ, ಮಾತನಾಡಿದರು. ಹೋರಾಟಗಾರ ಮಾರುತಿ ಬೌದ್ದೆ, ಜಾನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ, ಎಂ.ಎಸ್.ಮನೋಹರ್, ಎಸ್.ಎಂ.ಜನವಾಡಕರ್, ಶಿವಕುಮಾರ್ ತುಂಗಾ, ಇತರರು ವೇದಿಕೆ ಮೇಲಿದ್ದರು.

ಆರಂಭದಲ್ಲಿ ಬೀದರನ ಮಲ್ಲಿಕಾರ್ಜುನ ಸ್ವಾಮಿ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಕನ್ನಡದ ಭಾವಗೀತೆಗಳು ಹಾಗೂ ಮನಮುಟ್ಟುವ ಹಾಡುಗಳ ಮೂಲಕ ತಂಡವು ಪ್ರೇಕ್ಷಕರ ಮನರಂಜನೆ ಮಾಡಿತು.

ಬಳಿಕ ಪ್ರದರ್ಶನಗೊಂಡ ಕಾಲಚಕ್ರ ನಾಟಕವು ಸಾಮಾಜಿಕ ಬದುಕಿನ ವಿವಿಧ ಆಯಾಮಗಳನ್ನು ತೆರೆದಿಟ್ಟಿತು. ಮೂಲತಃ ಮರಾಠಿಯಲ್ಲಿ ಜಯಂತ ದಳ್ಳಿ ರಚಿಸಿರುವ ಈ ನಾಟಕವನ್ನು ಎಕ್ಕೆ ಕರ್ಕೆರಾ ಕನ್ನಡಕ್ಕೆ ಅನುವಾದಿಸಿದ್ದು, ಹುಲುಗಪ್ಪ ಕಟ್ಟಮನಿ ವಿನ್ಯಾಸ ಹಾಗೂ ನಿರ್ದೇಶನ ಮಾಡಿದ್ದರು.

ನಾಟಕದ ರಂಗಸಜ್ಜಿಕೆಯನ್ನು ರಾಜಕುಮಾರ ಎಸ್.ಕೆ. ಪರಿಣಾಮಕಾರಿಯಾಗಿ ರೂಪಿಸಿದ್ದು, ಶ್ರೀನಿವಾಸ ದೋರನಹಳ್ಳಿ ಅವರ ಬೆಳಕಿನ ವಿನ್ಯಾಸ ನಾಟಕದ ದೃಶ್ಯಗಳಿಗೆ ಮತ್ತಷ್ಟು ಮೆರುಗು ತಂದಿತು. ಕಲಬುರಗಿ ರಂಗಾಯಣದ ರೆಪರ್ಟರಿ ಕಲಾವಿದರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದರು.

ಕಾರ್ಯಕ್ರಮದಲ್ಲಿ ಕಲಾವಿದರು, ವಿವಿಧ ಕಲಾಭಿಮಾನಿಗಳು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.