
ಕಲಬುರಗಿ:ಜೂ.24:ಯಾವುದೇ ಮಹಿಳೆಯು ತನ್ನ ಪತಿ ಕಳೆದುಕೊಂಡು ವಿಧವೆಯಾಗಬೇಕು ಎಂದು ಎಂದಿಗೂ ಕೂಡಾ ಬಯಸುವುದಿಲ್ಲ. ಕಾರಣಾಂತರಗಳಿಂದ ಇದು ಜರುಗುತ್ತದೆ ಎಂಬ ನೈಜತೆಯನ್ನು ಗಮನದಲ್ಲಿಟ್ಟುಕೊಂಡು, ಸಮಾಜವು ಸಂಪ್ರದಾಯದ ನೆಪದಲ್ಲಿ ಆ ಮಹಿಳೆಯನ್ನು ಕೀಳಾಗಿ ಕಾಣುವುದು ಬೇಡ. ಇದರಿಂದ ವಿಧವಾ ತಾಯಿಯು ಮನೋಸ್ಥೈರ್ಯ ಕಳೆದುಕೊಂಡು ಸಾಕಷ್ಟು ನೋವುಗಳನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಅವರನ್ನು ಉತ್ತಮ ಮನೋಭಾವನೆಯಿಂದ ಗೌರವಿಸಿ, ನೆಮ್ಮದಿಯಿಂದ ಬದುಕಲು ಅನವು ಮಾಡಿಕೊಡುವುದು ಜವಾಬ್ದಾರಿಯುತ ಸಮಾಜದ ಆದ್ಯ ಕರ್ತವ್ಯವಾಗಿದೆ ಎಂದು ಉಪನ್ಯಾಸಕ, ಪ್ರಗತಿಪರ ಚಿಂತಕ ಎಚ್.ಬಿ.ಪಾಟೀಲ್ ಆಶಯ ವ್ಯಕ್ತಪಡಿಸಿದರು.
ನಗರದ ಹೊರವಲಯದ ರಾಣೇಸ್ಪಿರ್ ದರ್ಗಾ ರಸ್ತೆಯಲ್ಲಿರುವ ‘ನೆಮ್ಮದಿ ಹಿರಿಯರ ಮನೆ(ವೃದ್ಧಾಶ್ರಮ)’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದಿಂದ ಮಂಗಳವಾರ ಸಂಜೆ ಜರುಗಿದ ‘ಅಂತಾರಾಷ್ಟ್ರೀಯ ವಿಧವೆಯರ ದಿನಾಚರಣೆ’ಯಲ್ಲಿ ವಿಧವಾ ತಾಯಂದಿರಿಗೆ ಗೌರವಿಸಿ, ನಂತರ ಅವರು ಮಾತನಾಡುತ್ತಿದ್ದರು.
ಮಾನವ ಸಂಘ ಜೀವಿ. ಅವನ ಬದುಕಿನಲ್ಲಿ ಪರಿಸರ ಮತ್ತು ಅನೇಕ ವ್ಯಕ್ತಿಗಳ ಜೊತೆ ಸಂಬಂಧ ಹೊಂದಬೇಕಾದದ್ದು ಅಗತ್ಯವಾಗಿದೆ. ಅವನು ಕೆಲವು ನಂಬಿಕೆಗಳ ಮೇಲೆ ಜೀವನವನ್ನು ಸಾಗಿಸಬೇಕಾಗುತ್ತದೆ. ನಂಬಿಕೆಯಲ್ಲಿ ಸತ್ಯ, ವೈಜ್ಞಾನಿಕವಾಗಿದ್ದರೆ ಒಳ್ಳೆಯದು, ಆದರೆ ಕಂದಾಚಾರ, ಅಂದಶೃದ್ಧೆ, ಅವೈಜ್ಞಾನಿಕವಾದ ಮತ್ತು ಯಾವುದೇ ಆಧಾರ ರಹಿತವಾದ ನಂಬಿಕೆಗಳು ಮೂಢ ನಂಬಿಕೆಗಳಾಗುತ್ತವೆ. ನಂಬಿಕೆ ಇರಬೇಕೆ ವಿನಃ, ಮೂಡ ನಂಬಿಕೆಗಳಿರಬಾರದು. ವಿಧವೆಯರಿಗೆ ದೊರೆಯಬೇಕಾದ ಎಲ್ಲಾ ಸೌಲಭ್ಯಗಳು ಸೂಕ್ತವಾಗಿ ಸಿಗಬೇಕು. ಅವರಲ್ಲಿ ಸ್ಥೈರ್ಯ ತುಂಬುವ ಕೆಲಸವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ವೈದ್ಯರಾದ ಡಾ.ರಾಜಶೇಖರ ಪಾಟೀಲ್, ವೃದ್ಧಾಶ್ರಮದ ಮೇಲ್ವಿಚಾರಕಿ ಬಸಮ್ಮ ಕೆ.ಸ್ಥಾವರಮಠ, ಸಮಾಜ ಸೇವಕಿ ಪುತಾಳಾಬಾಯಿ ಮಾತಾ, ಪ್ರಮುಖರಾದ ಚನ್ನಮ್ಮ, ಶಾಂತಾಬಾಯಿ, ಭಾಗಿರತಿ, ಇಂದುಬಾಯಿ, ಲಕ್ಷ್ಮೀಬಾಯಿ, ಶಶಿಕಲಾ, ಕಮಲಾಬಾಯಿ, ಮಾಲತಿಬಾಯಿ ಸರುಬಾಯಿ, ರೇವಮ್ಮ, ನಿಂಗಮ್ಮ ವೃದ್ಧಾಶ್ರಮದ ಹಿರಿಯರು, ಬಡಾವಣೆಯ ನಾಗರಿಕರು ಇದ್ದರು.