
ಧಾರವಾಡ,ಅ೧ ೨೦೨೬ ನೇ ಸಾಲಿನಲ್ಲಿ ವಿಜಯಪುರ ಹಾಗೂ ಗದಗದಲ್ಲಿ ಜರುಗಿದ ರಾಜ್ಯ ಮಟ್ಟದ ವಿವಿಧ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಧಾರವಾಡ ಜಿಲ್ಲೆಯ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ವಿಜಯಪುರದಲ್ಲಿ ನಡೆದ ರಾಜ್ಯ ಮಟ್ಟದ ಸೈಕ್ಲಿಂಗ್ ಟ್ರ್ಯಾಕ್ ಇವೆಂಟ್ನಲ್ಲಿ ಕುಂದಗೋಳದ ಅರ್ಜುನ ಕಲಾಲ ಅವರು ಚಿನ್ನದ ಪದಕ ಹಾಗೂ ಟೈಮ್ ಟ್ರಯಲ್ಸ್ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಗದಗದಲ್ಲಿ ನಡೆದ ರಾಜ್ಯ ಮಟ್ಟದ ಮೌಂಟನ್ ಬೈಕ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಸತ್ತೂರಿನ ಭೀಮವ್ವಾ ಮಾಳಗೊಂಡ ಅವರು ಎರಡು ಚಿನ್ನದ ಪದಕ, ಟೈಮ್ ಟ್ರಯಲ್ಸ್ನಲ್ಲಿ ಚಿನ್ನದ ಪದಕ, ಮಾಸ್ಟ ಆರ್ಟ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಮಹಿಳೆಯರ ಟೈಮ್ ಟ್ರಯಲ್ಸ್ನಲ್ಲಿ ಕಂಚಿನ ಪದಕ ಪಡೆದು ಸಾಧನೆ ಮಾಡಿದ್ದಾರೆ.
ಅದೇ ರೀತಿ ವಿಜಯಪುರದಲ್ಲಿ ನಡೆದ ರಾಜ್ಯ ಮಟ್ಟದ ಸೈಕ್ಲಿಂಗ್ ಪರಶೂಟ್ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಬ್ಯಾಹಟ್ಟಿಯ ಆಕಾಶ ಹೆಗಡೆ ಅವರು ಚಿನ್ನದ ಪದಕ ಹಾಗೂ ಟೈಮ್ ಟ್ರಯಲ್ಸ್ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ಈ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಸದಾನಂದ ಎಚ್. ಅಮರಾಪುರ ಹಾಗೂ ಇಲಾಖೆಯ ಸಿಬ್ಬಂದಿ ಸನ್ಮಾನಿಸಿ, ಗೌರವಿಸಿದರು.
ಫ್ಯಾರಾ ಏಷಿಯನ್ ಗೇಮ್ಸ್ಗೆ ಆಯ್ಕೆಯಾಗಿರುವ ಆಕಾಶ ನಿಡಗುಂದಿ ಅವರಿಗೆ ಹುಬ್ಬಳ್ಳಿ ಶೂಟಿಂಗ್ ಅಕಾಡಮಿಯ ವ್ಯವಸ್ಥಾಪಕರಾದ ರವಿಚಂದ್ರ ಬಾಲೆಹೂಸೂರ ಅವರು ತರಬೇತಿ ನೀಡುತ್ತಿದ್ದಾರೆ. ಅಕಾಡಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಸದಾನಂದ ಎಚ್. ಅಮರಾಪುರ ಹಾಗೂ ಅಕಾಡಮಿಯ ಸಿಬ್ಬಂದಿ ಆಕಾಶ ನಿಡಗುಂದಿ ಅವರನ್ನು ಸನ್ಮಾನಿಸಿ, ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಹಾರೈಸಿದರು.























