
ಬೀದರ, ಸೆ.೨೮: ದಲಿತ ಕುಟುಂಬಕ್ಕೆ ಸೇರಿದ ಜಮೀನನ್ನು ಪರಿಶಿಷ್ಟ ಜಾತಿ ಸಮುದಾಯದ ಸ್ಮಶಾನ ಭೂಮಿಗಾಗಿ ಬಳಸಿಕೊಳ್ಳುವ ಬದಲು, ಸರ್ಕಾರ ಪರ್ಯಾಯ ಜಮೀನು ಗುರುತಿಸಿ ಮಂಜೂರು ಮಾಡಬೇಕು ಎಂದು ಅಮಲಾಪುರ ಗ್ರಾಮದ ಅಂಬಾದಾಸ ತುಕ್ಕಪ್ಪ ಸೈನೆ ಆಗ್ರಹಿಸಿದರು.
ಈ ಕುರಿತು ಶುಕ್ರವಾರ ಅಪರ ಜಿಲ್ಲಾಧಿಕಾರಿ ಕು. ಸುರೇಖಾ ಅವರಿಗೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಮಲಾಪುರ ಗ್ರಾಮದ ಸರ್ವೆ ನಂ.೭೧ರ ಸರ್ಕಾರಿ ಜಮೀನನ್ನು ೧೯೯೩-೯೪ರಲ್ಲಿ ಲ್ಯಾಂಡ್ ಗ್ರಾಂಟ್ ಕಮಿಟಿ ಮೂಲಕ ೪೦ ಬಡ ಹಾಗೂ ಭೂರಹಿತರಿಗೆ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಮಂಜೂರಾದ ಜಮೀನುಗಳಲ್ಲಿ ಕಳೆದ ಹಲವು ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ಕುಟುಂಬಗಳು ವಾಸಿಸುತ್ತಿವೆ. ಹೀಗಿರುವಾಗ ಇದೇ ಜಮೀನಿನಲ್ಲಿ ಪರಿಶಿಷ್ಟರ ಸ್ಮಶಾನ ಭೂಮಿ ನಿರ್ಮಿಸಲು ಮುಂದಾಗಿರುವುದು ಹಲವು ಕುಟುಂಬಗಳ ಬದುಕಿಗೆ ತೊಂದರೆ ಉಂಟುಮಾಡಲಿದೆ ಎಂದು ಅವರು ಹೇಳಿದರು.
ತಮ್ಮ ತಂದೆ ದಿ. ತುಕ್ಕಪ್ಪ ಸೈನೆ ಅವರಿಗೆ ಸೇರಿದ ೪ ಎಕರೆ ೩೮ ಗುಂಟೆ ಜಮೀನನ್ನು ಸ್ಮಶಾನ ಭೂಮಿಗಾಗಿ ಬಳಸಿಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ. ಜಮೀನಿನ ದಾಖಲೆಗಳಲ್ಲಿ ಅರಣ್ಯ ಭೂಮಿ ಎಂಬ ವಿಚಾರವೂ ಇದ್ದು, ಮೊದಲು ಅದನ್ನು ಸರಿಪಡಿಸಬೇಕು ಎಂಬ ಬೇಡಿಕೆಯನ್ನು ಅಧಿಕಾರಿಗಳ ಮುಂದಿಡಲಾಗಿದೆ ಎಂದು ತಿಳಿಸಿದರು.
ಜನಸಂಖ್ಯೆ ಆಧಾರದ ಮೇಲೆ ಸರ್ವೆ ನಂ.೭೧ರಲ್ಲಿ ಸುಮಾರು ಎರಡು ಎಕರೆ ಜಮೀನನ್ನು ಪರಿಶಿಷ್ಟರ ಸ್ಮಶಾನಕ್ಕಾಗಿ ಗುರುತಿಸುವ ಪ್ರಕ್ರಿಯೆ ನಡೆದಿತ್ತು. ಆದರೆ, ದಲಿತ ಕುಟುಂಬದ ಜಮೀನನ್ನು ಸ್ಮಶಾನಕ್ಕಾಗಿ ಪಡೆಯುವುದಕ್ಕಿಂತ ಸರ್ಕಾರವೇ ಪರ್ಯಾಯ ಜಮೀನು ಗುರುತಿಸಿ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಗ್ರಾಮದ ಸರ್ವೆ ನಂ.೭೨ರಲ್ಲಿ ಸ್ಮಶಾನಕ್ಕೆ ಸಂಬAಧಿಸಿದ ಜಮೀನು ಇರುವುದಾಗಿ ಹೇಳಲಾಗುತ್ತಿದ್ದು, ಅದರ ವಾಸ್ತವ ಸ್ಥಿತಿ ಹಾಗೂ ಬಳಕೆಯ ಕುರಿತು ಅಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕು. ದಲಿತರ ಸ್ಮಶಾನ ಭೂಮಿ ಹಕ್ಕಿಗಾಗಿ ಹೋರಾಡುವವರು ಮತ್ತೊಬ್ಬ ದಲಿತನ ಜಮೀನಿನ ಹಕ್ಕಿಗೂ ರಕ್ಷಣೆ ನೀಡಬೇಕು ಎಂದು ಅಂಬಾದಾಸ ಸೈನೆ ಹೇಳಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಗ್ರಾಮಸ್ಥರಾದ ಸುಭಾನಿ, ಶಂಕರ, ಮಚಂದ್ರ, ಜಗನಾಥ, ತುಳಿಸಿರಾಮ, ರಾಹುಲ, ಸದಾನಂದ, ಪರಮೇಶ, ದೀಪಕ, ರಾಮಚಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
























